ಗೋವಾ ನೈಟ್‌ಕ್ಲಬ್ ಅಗ್ನಿ ದುರಂತ: ಪ್ರವಾಸಿಗರು ಸೇರಿ 25 ಮಂದಿ ಸಾವು
ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅರ್ಪೋರಾ ಗ್ರಾಮದ ‘ಬರ್ಚ್ ಬೈ ರೋಮಿಯೋ ಲೇನ್’ (Birch by Romeo Lane) ಎಂಬ ನೈಟ್‌ಕ್ಲಬ್‌ನಲ್ಲಿ ಮಧ್ಯರಾತ್ರಿಯ ನಂತರ ಈ ಅವಘಡ ಸಂಭವಿಸಿದೆ.
ಕ್ಲಬ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಉತ್ತರ ಗೋವಾದ ಪ್ರಸಿದ್ಧ ಪ್ರವಾಸಿ ತಾಣವಾದ ಅರ್ಪೋರಾ ಗ್ರಾಮದ ನೈಟ್‌ಕ್ಲಬ್ ಒಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಪ್ರವಾಸಿಗರು ಸೇರಿದಂತೆ ಕನಿಷ್ಠ 25 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಮೃತರಲ್ಲಿ ಬಹುತೇಕರು ಕ್ಲಬ್‌ನ ಅಡುಗೆ ಕೋಣೆಯ ಸಿಬ್ಬಂದಿಯಾಗಿದ್ದು, ಮೂವರು ಮಹಿಳೆಯರು ಸೇರಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಖಚಿತಪಡಿಸಿದ್ದಾರೆ. ವಾರಾಂತ್ಯದ ರಜೆಯ ಮಜಾ ಕಳೆಯಲು ಬಂದಿದ್ದ ಪ್ರವಾಸಿಗರು ಈ ದುರಂತಕ್ಕೆ ಸಾಕ್ಷಿಯಾಗಿದ್ದು, ಇಡೀ ಕರಾವಳಿ ರಾಜ್ಯವೇ ಬೆಚ್ಚಿಬಿದ್ದಿದೆ.
ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅರ್ಪೋರಾ ಗ್ರಾಮದ ‘ಬರ್ಚ್ ಬೈ ರೋಮಿಯೋ ಲೇನ್’ (Birch by Romeo Lane) ಎಂಬ ನೈಟ್‌ಕ್ಲಬ್‌ನಲ್ಲಿ ಮಧ್ಯರಾತ್ರಿಯ ನಂತರ ಈ ಅವಘಡ ಸಂಭವಿಸಿದೆ. ಕ್ಲಬ್ ತೆಂಗಿನ ಗರಿಗಳು ಮತ್ತು ಬಿದಿರಿನಂತಹ ದಹನಶೀಲ ವಸ್ತುಗಳಿಂದ ನಿರ್ಮಿತವಾಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡವನ್ನು ಆವರಿಸಿಕೊಂಡಿತು. ಘಟನೆ ನಡೆದಾಗ ಕ್ಲಬ್‌ನಲ್ಲಿ ನೂರಕ್ಕೂ ಹೆಚ್ಚು ಜನರಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಗಾಬರಿಗೊಂಡ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಹೈದರಾಬಾದ್ ಮೂಲದ ಪ್ರವಾಸಿ ಫಾತಿಮಾ ಶೇಖ್ ಅವರ ಪ್ರಕಾರ, ಡ್ಯಾನ್ಸ್ ಫ್ಲೋರ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಇದರಿಂದ ತಪ್ಪಿಸಿಕೊಳ್ಳಲು ಕೆಲವರು ಕೆಳಗಿನ ಅಂತಸ್ತಿನಲ್ಲಿದ್ದ ಅಡುಗೆ ಕೋಣೆಯತ್ತ ಓಡಿದಾಗ, ಅಲ್ಲಿಯೇ ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಸಿಲಿಂಡರ್ ಸ್ಫೋಟವೋ ಅಥವಾ ಶಾರ್ಟ್ ಸರ್ಕ್ಯೂಟ್?
ಬೆಂಕಿ ಅವಘಡಕ್ಕೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲವಾದರೂ, ಈ ಕುರಿತು ಗೊಂದಲದ ಹೇಳಿಕೆಗಳು ಹೊರಬಿದ್ದಿವೆ. ಅಡುಗೆ ಅನಿಲದ ಸಿಲಿಂಡರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ ಪ್ರವಾಸಿಗರು ನೃತ್ಯ ಮಾಡುತ್ತಿದ್ದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಸರ್ಕಾರ ತಿಳಿಸಿದೆ. ಸ್ಥಳೀಯ ಭದ್ರತಾ ಸಿಬ್ಬಂದಿಯೊಬ್ಬರು ಭಾರೀ ಸ್ಫೋಟದ ಸದ್ದು ಕೇಳಿಸಿತು ಎಂದು ಹೇಳಿಕೆ ನೀಡಿರುವುದು ಸಿಲಿಂಡರ್ ಸ್ಫೋಟದ ವಾದಕ್ಕೆ ಪುಷ್ಟಿ ನೀಡಿದೆ.
ರಕ್ಷಣಾ ಕಾರ್ಯಕ್ಕೆ ಅಡ್ಡಿಯಾದ ಕಿರಿದಾದ ರಸ್ತೆ
ನೈಟ್‌ಕ್ಲಬ್ ಅರ್ಪೋರಾ ನದಿಯ ಹಿನ್ನೀರಿನ ಪ್ರದೇಶದಲ್ಲಿದ್ದು, ಅಲ್ಲಿಗೆ ತಲುಪಲು ರಸ್ತೆ ಅತ್ಯಂತ ಕಿರಿದಾಗಿದೆ. ಇದರಿಂದಾಗಿ ಅಗ್ನಿಶಾಮಕ ದಳದ ವಾಹನಗಳು ಘಟನಾ ಸ್ಥಳಕ್ಕೆ ತಲುಪಲು ಸಾಧ್ಯವಾಗದೆ, ಸುಮಾರು 400 ಮೀಟರ್ ದೂರದಲ್ಲಿಯೇ ನಿಲ್ಲಬೇಕಾಯಿತು. ಇದು ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಕ್ಕೆ ತೀವ್ರ ಹಿನ್ನಡೆಯುಂಟುಮಾಡಿತು. ಕ್ಲಬ್‌ಗೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಕಿರಿದಾಗಿದ್ದರಿಂದ ಜನರು ಹೊರಬರಲು ಹರಸಾಹಸ ಪಡಬೇಕಾಯಿತು ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕರು ಬೆಂಕಿಯ ತೀವ್ರತೆಗಿಂತ ಹೆಚ್ಚಾಗಿ, ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಸರ್ಕಾರದ ಕ್ರಮ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕ್ಲಬ್ ಆಡಳಿತ ಮಂಡಳಿ ಅಗ್ನಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ಲಬ್ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿತ್ತು ಎಂಬ ಆರೋಪಗಳಿದ್ದು, ಪಂಚಾಯತ್ ಈ ಹಿಂದೆಯೇ ಕೆಡವಲು ನೋಟಿಸ್ ನೀಡಿತ್ತು ಎನ್ನಲಾಗಿದೆ. ತಪ್ಪಿತಸ್ಥ ಅಧಿಕಾರಿಗಳು ಮತ್ತು ಕ್ಲಬ್ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಅಲ್ಲದೆ, ರಾಜ್ಯದಾದ್ಯಂತ ಇರುವ ಎಲ್ಲ ಕ್ಲಬ್‌ಗಳ ಸುರಕ್ಷತಾ ಆಡಿಟ್ ನಡೆಸಲು ಆದೇಶ ನೀಡಿದ್ದಾರೆ.
ಪ್ರಧಾನಿ ಪರಿಹಾರ ಘೋಷಣೆ
ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದೆ.