ಶಬರಿಮಲೆ ಚಿನ್ನ ಕಳವು ಪ್ರಕರಣ: ತನಿಖಾ ಬಲೆಗೆ ಎಡರಂಗದ ನಾಯಕರು?
ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ)ನ ಮಾಜಿ ಅಧ್ಯಕ್ಷ ಹಾಗೂ ಸಿಪಿಎಂ ನಾಯಕ ಎ. ಪದ್ಮಕುಮಾರ್ ಸೇರಿದಂತೆ ಎಡರಂಗದ ಕೆಲವು ನಾಯಕರು ಹೈಕೋರ್ಟ್ ನೇಮಿತ ವಿಶೇಷ ತನಿಖಾ ದಳದ ವಿಚಾರಣೆ ಎದುರಿಸುವ ಸಾಧ್ಯತೆಯಿದೆ.
ಕೋಟ್ಯಂತರ ಅಯ್ಯಪ್ಪ ಭಕ್ತರ ಶ್ರದ್ಧಾಕೇಂದ್ರವಾದ ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣವು ಇದೀಗ ಕೇರಳ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ. ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ)ನ ಮಾಜಿ ಅಧ್ಯಕ್ಷ ಹಾಗೂ ಸಿಪಿಎಂ ನಾಯಕ ಎ. ಪದ್ಮಕುಮಾರ್ ಸೇರಿದಂತೆ ಎಡರಂಗದ ಕೆಲವು ನಾಯಕರು ಹೈಕೋರ್ಟ್ ನೇಮಿತ ವಿಶೇಷ ತನಿಖಾ ದಳದ ವಿಚಾರಣೆ ಎದುರಿಸುವ ಸಾಧ್ಯತೆಯಿದೆ.
ಶಬರಿಮಲೆ ದೇಗುಲದ ದ್ವಾರಪಾಲಕರ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ನೆಪದಲ್ಲಿ ನಡೆದಿದೆ ಎನ್ನಲಾದ ಈ ಹಗರಣವು, ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಟಿಡಿಬಿಯ ಕಣ್ಗಾವಲು ವಿಭಾಗದ ವರದಿಯ ಪ್ರಕಾರ, ದೇವಸ್ವಂ ಬೋರ್ಡ್‌ನ ಅಂದಿನ ಅಧ್ಯಕ್ಷರಾಗಿದ್ದ ಪದ್ಮಕುಮಾರ್ ಅವರು, ದೇಗುಲದ ಚಿನ್ನವನ್ನು ಲೇಪನಕ್ಕಾಗಿ ಬೆಂಗಳೂರು ಮೂಲದ ಮಲಯಾಳಿ ಉನ್ನಿಕೃಷ್ಣನ್ ಪೊಟ್ಟಿ ಎಂಬುವವರಿಗೆ ಚೆನ್ನೈನಲ್ಲಿ ಹಸ್ತಾಂತರಿಸಿದ್ದರು. ಆದರೆ, ನಿಯಮಗಳ ಪ್ರಕಾರ, ಚಿನ್ನದ ಲೇಪನದಂತಹ ಕಾರ್ಯಗಳನ್ನು ದೇಗುಲದ ಆವರಣದಲ್ಲಿಯೇ ನಡೆಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ನಿಯಮ ಉಲ್ಲಂಘನೆಯೇ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಾಜಿ ಸದಸ್ಯರು ಬಲೆಗೆ
ಈಗಾಗಲೇ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿರುವ ಎಸ್‌ಐಟಿ, ಟಿಡಿಬಿ ವರದಿಯ ಆಧಾರದ ಮೇಲೆ ತನಿಖೆಯನ್ನು ಚುರುಕುಗೊಳಿಸಿದೆ. ಹೀಗಾಗಿ, ಪದ್ಮಕುಮಾರ್ ಸೇರಿದಂತೆ ಅಂದಿನ ಬೋರ್ಡ್‌ನ ಮಾಜಿ ಸದಸ್ಯರು ತನಿಖೆಯ ಬಲೆಗೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪದ್ಮಕುಮಾರ್, "ನಾನು ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿಲ್ಲ. ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಮತ್ತು ಬೋರ್ಡ್‌ನ ಕೆಲವು ಸದಸ್ಯರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ," ಎಂದು ಆರೋಪಿಸಿದ್ದಾರೆ.
ಈ ನಡುವೆ, ಈ ಪ್ರಕರಣವು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಬಿಜೆಪಿ-ಸಂಘಪರಿವಾರಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. "ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಶಬರಿಮಲೆ ದೇಗುಲದಲ್ಲಿ ಭಾರಿ ಲೂಟಿ ನಡೆದಿದೆ," ಎಂದು ಸಂಸ್ಕೃತಿ ಸಚಿವ ಸಜಿ ಚೆರಿಯನ್ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ರಾಜ್ಯದ ಎಲ್ಲಾ ದೇಗುಲಗಳನ್ನೂ ಲೆಕ್ಕಪರಿಶೋಧನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ. ಈ ಹಗರಣದ ತನಿಖೆ ಪೂರ್ಣಗೊಂಡ ನಂತರವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.