
ಜಿ. ಪರಮೇಶ್ವರ್
ಧರ್ಮಸ್ಥಳ ಪ್ರಕರಣಗಳ ತನಿಖೆ ಶೀಘ್ರದಲ್ಲೇ ಮುಕ್ತಾಯ: ಗೃಹ ಸಚಿವ ಡಾ. ಜಿ. ಪರಮೇಶ್ವರ್
ಇತ್ತೀಚೆಗೆ ಸಂಗ್ರಹಿಸಿದ ಸಾಕ್ಷ್ಯಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಹೊಸ ದೂರುಗಳು ಮತ್ತು ಹೇಳಿಕೆಗಳನ್ನು ಸಹ ಪರಿಗಣಿಸಿ, ಎಲ್ಲದಕ್ಕೂ ಅಂತಿಮ ಹಂತ ತಲುಪುವಂತೆ ಎಸ್‌ಐಟಿಗೆ ತಿಳಿಸಿದ್ದೇವೆ ಎಂದು ಗೃಹ ಸಚಿವರು ಹೇಳಿದ್ದಾರೆ.
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಪ್ರಕರಣಗಳ ವಿಶೇಷ ತನಿಖಾ ತಂಡದ ತನಿಖೆ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನಷ್ಟೇ ಬರಬೇಕಿದೆ. ಇತ್ತೀಚೆಗೆ ಸಂಗ್ರಹಿಸಿದ ಸಾಕ್ಷ್ಯಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಹೊಸ ದೂರುಗಳು ಮತ್ತು ಹೇಳಿಕೆಗಳನ್ನು ಸಹ ಪರಿಗಣಿಸಿ, ಎಲ್ಲದಕ್ಕೂ ಅಂತಿಮ ಹಂತ ತಲುಪುವಂತೆ ಎಸ್‌ಐಟಿಗೆ ತಿಳಿಸಿದ್ದೇವೆ," ಎಂದರು.
ತಿಮರೋಡಿ ಬಂಧನ: ಕಾನೂನು ಚೌಕಟ್ಟಿನಲ್ಲಿ ಕ್ರಮ
ಮಹೇಶ್ ಶೆಟ್ಟಿ ತಿಮರೋಡಿ ಅವರ ಬಂಧನ ವಿಳಂಬವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, "ಬಂಧನಕ್ಕೆ ಸಂಬಂಧಿಸಿದಂತೆ ಇರುವ ಕಾನೂನು ತೊಡಕುಗಳ ಬಗ್ಗೆ ನಾನು ಇನ್ನೂ ಚರ್ಚಿಸಿಲ್ಲ. ಯಾವುದೇ ಕ್ರಮ ಕೈಗೊಂಡರೂ ಅದನ್ನು ಕಾನೂನು ಚೌಕಟ್ಟಿನಲ್ಲೇ ಮಾಡಬೇಕಾಗುತ್ತದೆ," ಎಂದು ಹೇಳಿದರು.
"ತಿಮರೋಡಿ ಅವರನ್ನು ಬಂಧಿಸುವ ಅಥವಾ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಸರ್ಕಾರವು ಎಸ್‌ಐಟಿಗೆ ಯಾವುದೇ ನಿರ್ದೇಶನ ನೀಡುವುದಿಲ್ಲ. ಕಾನೂನು ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಸಂಪೂರ್ಣ ಅಧಿಕಾರ ಮತ್ತು ಜವಾಬ್ದಾರಿ ಎಸ್‌ಐಟಿ ತಂಡದ್ದೇ ಆಗಿರುತ್ತದೆ. ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ," ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು. ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ಚಿನ್ನಯ್ಯ ಅವರ ಪಿಐಎಲ್ ವಜಾಗೊಂಡಿರುವ ವಿಚಾರವನ್ನೂ ಎಸ್‌ಐಟಿ ತನ್ನ ಅಂತಿಮ ವರದಿಯಲ್ಲಿ ಸೇರಿಸಲಿದೆ ಎಂದು ಅವರು ಮಾಹಿತಿ ನೀಡಿದರು.