ಭಾರತದ ಉದ್ಯಮವನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ರತನ್‌ ʼಟಾಟಾʼ

1962ರಲ್ಲಿ ಕಾರ್ನೆಲ್​ ಯೂನಿವರ್ಸಿಟಿಯಿಂದ ಬಿ.ಆರ್ಚ್​ ಪದವಿ ಪಡೆದರು. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಸುಧಾರಿತ ನಿರ್ವಹಣಾ ಪ್ರೋಗ್ರಾಂ ಕೋರ್ಸ್‌ ಅನ್ನು 1975ರಲ್ಲಿ ಪೂರ್ಣಗೊಳಿಸಿದರು. ಅದಾದ ಬಳಿಕ 1981ರಲ್ಲಿ ಟಾಟಾ ಇಂಡಸ್ಟ್ರೀಸ್​​ನ ಚೇರ್​ಮನ್​ ಆಗಿ ನೇಮಕಗೊಂಡರು.;

Update: 2024-10-09 19:38 GMT

ಟಾಟಾ ಗ್ರೂಪ್ ಅನ್ನು ಸಾಂಪ್ರದಾಯಿಕ ಭಾರತೀಯ ವ್ಯಾಪಾರ ಸಂಸ್ಥೆ ಮಟ್ಟದಿಂದ  ಜಾಗತಿಕ ಸಂಘಟಿತ ಸಂಸ್ಥೆಯಾಗಿ ಪರಿವರ್ತಿಸಲು ಸಹಾಯ ಮಾಡಿದ ಪ್ರಸಿದ್ಧ ಕೈಗಾರಿಕೋದ್ಯಮಿ ಪದ್ಮಭೂಷಣ ರತನ್ ನೇವಲ್ ಟಾಟಾ, ಅಲ್ಪಾವಧಿಯ  ಅನಾರೋಗ್ಯದಿಂದ ಮುಂಬಯಿ ಆಸ್ಪತ್ರೆಯಲ್ಲಿ ಅಕ್ಟೋಬರ್ 9, 2024  ರಾತ್ರಿ ನಿಧನರಾದರು. ರತನ್ ಟಾಟಾ ಅವರ ನಿಧನವು ಅಂತಿಮವಾಗಿ ಭಾರತೀಯ ವ್ಯಾಪಾರ ಇತಿಹಾಸದಲ್ಲಿ ಒಂದು ಅಧ್ಯಾಯದ ಅಂತ್ಯವಾಗಿದೆ ಎಂದೇ ಪರಿಗಣಿಸಬಹುದು

ಪದ್ಮವಿಭೂಷಣ ಪುರಸ್ಕೃತರಾದ ಟಾಟಾ ಅವರು ಭಾರತದ  ಮಾತ್ರವಲ್ಲದೆ ವಿಶ್ವದ  ಪ್ರಬಲ ಉದ್ಯಮಿಗಳಲ್ಲಿ  ಒಬ್ಬರಾಗಿ ಗೌರವಿಸಲ್ಪಟ್ಟಿದ್ದರು.  

ಡಿಸೆಂಬರ್ 28, 1937 ರಂದು ಜನಿಸಿದ ರತನ್ ಟಾಟಾ ಅವರು 1991 ರಲ್ಲಿ ಟಾಟಾ ಸನ್ಸ್‌ನ ನಿರ್ವಹಣೆಯನ್ನು ವಹಿಸಿಕೊಂಡರು, 1962ರಲ್ಲಿ ಕಾರ್ನೆಲ್​ ಯೂನಿವರ್ಸಿಟಿಯಿಂದ ಬಿ.ಆರ್ಚ್​ ಪದವಿ ಪಡೆದರು. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಸುಧಾರಿತ ನಿರ್ವಹಣಾ ಪ್ರೋಗ್ರಾಂ ಕೋರ್ಸ್‌ ಅನ್ನು 1975ರಲ್ಲಿ ಪೂರ್ಣಗೊಳಿಸಿದರು. ಅದಾದ ಬಳಿಕ 1981ರಲ್ಲಿ ಟಾಟಾ ಇಂಡಸ್ಟ್ರೀಸ್​​ನ ಚೇರ್​ಮನ್​ ಆಗಿ ನೇಮಕಗೊಂಡರು.

ದೇಶವು ಆರ್ಥಿಕ ಉದಾರೀಕರಣದ ಅಂಚಿನಲ್ಲಿದ್ದಾಗ ಅಮೂಲಾಗ್ರ ಬದಲಾವಣೆ ಮೂಲಕ ಉನ್ನತ ಸ್ಥಾನ ಪಡೆದರು. 1948ರಲ್ಲಿ ಅವರ ತಂದೆ ನೇವಲ್​ ಟಾಟಾ ಮತ್ತು ತಾಯಿ ಸೂನಿ ಟಾಟಾ ಬೇರೆಯಾದ ಬಳಿಕ ಅಜ್ಜಿಯ ಆಶ್ರಯ ಪಡೆದುಕೊಂಡರು. 1961ರಲ್ಲಿ ಟಾಟಾ ಸ್ಟೀಲ್​ನಲ್ಲಿ ಮೊದಲು ಕೆಲಸಕ್ಕೆ ಸೇರಿಕೊಂಡರು. ಅದಾದ ಬಳಿಕ 1991ರಲ್ಲಿ ಟಾಟಾ ಗ್ರೂಪ್​ನ ಅಧ್ಯಕ್ಷರಾದರು. ಬರೋಬ್ಬರಿ 21 ವರ್ಷ ಅಂದರೆ 2012ರವರೆಗೆ ಟಾಟಾ ಗ್ರೂಪ್​ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಅವರು ಟೆಟ್ಲಿ ಟೀ, ಕೋರಸ್ ಸ್ಟೀಲ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್‌ನಂತಹ  ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಟಾಟಾ ಗ್ರೂಪ್ ಅನ್ನು ಪ್ರಾಥಮಿಕವಾಗಿ ಭಾರತೀಯ  ಮಟ್ಟದಿಂದ  ಜಾಗತಿಕ ವಲಯಕ್ಕೆ ಪರಿಚಯಿಸಿದರು. ಮಹತ್ವಾಕಾಂಕ್ಷೆ ಮತ್ತು ವಿವೇಕದ  ಪರಿಪೂರ್ಣ ಮಿಶ್ರಣದೊಂದಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಂಘಟಿತ ಸಂಸ್ಥೆಗಳು ಏನನ್ನು ಸಾಧಿಸಬಹುದು ಎಂಬುದಕ್ಕೆ ಅವರು ಹೊಸ ಮಾನದಂಡಗಳನ್ನು ತೋರಿಸಿಕೊಟ್ಟರು. 

2007 ರಲ್ಲಿ $12 ಶತಕೋಟಿಗೆ ಕೋರಸ್ ಸ್ಟೀಲ್ ಅನ್ನು ಸ್ವಾಧೀನಪಡಿಸಿಕೊಳ್ಳುವುದು ಅವರ ಅತಿದೊಡ್ಡ ದಿಟ್ಟತನದ ನಿರ್ಣಯವಾಗಿತ್ತು.  ಇದು ಟಾಟಾ ಸ್ಟೀಲ್ ಅನ್ನು ಪ್ರಮುಖ ಜಾಗತಿಕ ಶಕ್ತಿಯನ್ನಾಗಿ ಮಾಡುವ ಪ್ರಯತ್ನವಾಗಿದೆ. ಅದೇ  ರೀತಿ  ಜಾಗ್ವಾರ್ ಲ್ಯಾಂಡ್ ರೋವರ್‌ನ 2008 ರ ಖರೀದಿಯು ಅವರ ಇನ್ನೊಂದು ಪ್ರಮುಖ ನಿರ್ಧಾರವಾಗಿತ್ತು. ಟಾಟಾ ಗ್ರೂಪ್ ಭಾರತ ಸರ್ಕಾರದಿಂದ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡಾಗ  ಅವರ ಮಹಾತ್ವಾಕಾಂಕ್ಷೆಯ ಬಗ್ಗೆ ಜಗತ್ತು ಅಚ್ಚರಿಪಟ್ಟಿತು.

ಸಂಸತ್ ಕಟ್ಟಡ ವಿವಾದ

ದೆಹಲಿಯಲ್ಲಿ ಹೊಸ ಸಂಸತ್ತಿನ ಸಂಕೀರ್ಣವನ್ನು ನಿರ್ಮಿಸಲು ಟಾಟಾ ಕಂಪೆನಿ ಪಡೆದ  ಗುತ್ತಿಗೆ ವಿವಾದಗಳನ್ನೂ ಸೃಷ್ಟಿಸಿತು.  ಟೆಂಡರ್ ಪ್ರಕ್ರಿಯೆಯ ಪಾರದರ್ಶಕತೆಯನ್ನು ಪ್ರಶ್ನಿಸಲಾಯಿತು ಮತ್ತು ಅಂತಹ ಉನ್ನತ ಮಟ್ಟದ ರಾಷ್ಟ್ರೀಯ ಯೋಜನೆಗೆ ಗುತ್ತಿಗೆಗಳನ್ನು ಪಡೆದುಕೊಳ್ಳುವಲ್ಲಿ ಟಾಟಾ ಹೆಚ್ಚಿನ ಪ್ರಭಾವವನ್ನು ತೋರುತ್ತಿದೆ ಎಂಬ ವಿವಾದ ಕೇಳಿಬಂತು.  

Ola, Snapdeal, ಮತ್ತು Paytm ನಂತಹ ಭರವಸೆಯ ನವೋದ್ಯಮಗಳಲ್ಲಿ ಅವರ ಹೂಡಿಕೆಗಳು  ಯುವ ಉದ್ಯಮಿಗಳ ಪೋಷಕನಾಗಿ ಅವರ ದೂರದರ್ಶಿತ್ವವನ್ನು ಪರಿಚಯಿಸಿತು.  ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರತನ್‌ ಟಾಟಾ  ಪ್ರಪಂಚದಾದ್ಯಂತದ ಟಾಟಾ ಸಮೂಹ (TATA Group) ಕಂಪನಿಗಳಿಗೆ ಉತ್ತಮ ಹೆಸರನ್ನು ತಂದುಕೊಟ್ಟರು.

‘ಟೈಟಾನ್ ಕಣ್ಮರೆಯಾಗಿದೆ’

ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದು,  ಗಡಿಯಾರವು ಟಿಕ್‌ ಟಿಕ್‌ ಅನ್ನುವುದನ್ನು ನಿಲ್ಲಿಸಿದೆ. ಟೈಟಾನ್ ಕಣ್ಮರೆಯಾಗಿದೆ. ರತನ್ ಟಾಟಾ ಅವರು ಸಮಗ್ರತೆ, ನೈತಿಕ ನಾಯಕತ್ವ ಮತ್ತು ಲೋಕೋಪಕಾರದ ದಾರಿದೀಪವಾಗಿದ್ದರು ಎಂದು ಬರೆದುಕೊಂಡಿದ್ದಾರೆ.

ಮದುವೆಯಾಗಿಲ್ಲ

ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರತನ್ ಟಾಟಾ ಯುವತಿಯೊಬ್ಬರನ್ನು ಪ್ರೀತಿಸಿದ್ದರು.  ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕು ಅನ್ನುವಷ್ಟರಲ್ಲಿ ಭಾರತ ಮತ್ತು ಚೀನಾ ನಡುವೆ ಯುದ್ಧ  ಆರಂಭವಾಗಿತ್ತು.   ಮದುವೆಯಾಗಿ ದೇಶಕ್ಕೆ ವಾಪಸಾಗಬೇಕೆಂದು ನಿರ್ಧರಿಸಿದ್ದ ಟಾಟಾ ಅವರಿಗೆ ಯುವತಿಯ ಪೋಷಕರು ಭಾರತಕ್ಕೆ ಕಳುಹಿಸಲು ಒಪ್ಪಲಿಲ್ಲವಂತೆ. ಭಾರತ ಯುದ್ಧವನ್ನು ಎದುರಿಸುತ್ತಿದ್ದು,  ಆಕೆಯ ಪೋಷಕರು  ಮಗಳ ಮದುವೆಯನ್ನು ಇನ್ನೊಬ್ಬ ಯುವಕನ ಜತೆ ನೆರವೇರಿಸಲು ನಿರ್ಧರಿಸಿದರು. ಆ ಬಳಿಕ ತಾವು ಮದುವೆಯಾಗದೆ ಬ್ರಹ್ಮಚಾರಿಯಾಗಿ ತಮ್ಮ ಜೀವನವನ್ನು ಕಳೆದರು ಟಾಟಾ.

Tags:    

Similar News