ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ
ಈ ಹೊಸ ರೈಲು ಕರ್ನಾಟಕದ ರಾಜಧಾನಿ ಬೆಂಗಳೂರು, ತಮಿಳುನಾಡಿನ ಪ್ರಮುಖ ನಗರಗಳಾದ ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು ಹಾಗೂ ಕೇರಳದ ಪಾಲಕ್ಕಾಡ್, ತ್ರಿಶೂರ್ ಮೂಲಕ ಅಲ್ಲಿನ ಆರ್ಥಿಕ ರಾಜಧಾನಿ ಕೊಚ್ಚಿ (ಎರ್ನಾಕುಳಂ) ನಗರಗಳನ್ನು ಸಂಪರ್ಕಿಸಲಿದೆ.
ಬೆಂಗಳೂರು ಹಾಗೂ ಎರ್ನಾಕುಲಂ ಮಾರ್ಗದ ನೂತನ ವಂದೇ ಭಾರತ್ ರೈಲು
ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಬಹುನಿರೀಕ್ಷಿತ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು. ಉತ್ತರ ಪ್ರದೇಶದ ಬನಾರಸ್‌ನಿಂದ ವರ್ಚುವಲ್ ವೇದಿಕೆಯ ಮೂಲಕ ಈ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಾಯಿತು. ಇದೇ ಸಂದರ್ಭದಲ್ಲಿ ದೇಶದ ಇತರ ಮೂರು ಮಾರ್ಗಗಳಲ್ಲಿಯೂ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಯಿತು.
ಮೂರು ರಾಜ್ಯಗಳಿಗೆ ಸಂಪರ್ಕ ಸೇತು
ಈ ಹೊಸ ರೈಲು ಕರ್ನಾಟಕದ ರಾಜಧಾನಿ ಬೆಂಗಳೂರು, ತಮಿಳುನಾಡಿನ ಪ್ರಮುಖ ನಗರಗಳಾದ ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು ಹಾಗೂ ಕೇರಳದ ಪಾಲಕ್ಕಾಡ್, ತ್ರಿಶೂರ್ ಮೂಲಕ ಅಲ್ಲಿನ ಆರ್ಥಿಕ ರಾಜಧಾನಿ ಕೊಚ್ಚಿ (ಎರ್ನಾಕುಳಂ) ನಗರಗಳನ್ನು ಸಂಪರ್ಕಿಸಲಿದೆ. ಎಂಟು ಕೋಚ್‌ಗಳನ್ನು ಹೊಂದಿರುವ ಈ ರೈಲು, ಮೂರು ರಾಜ್ಯಗಳ ಪ್ರಮುಖ ಐಟಿ, ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರಗಳ ನಡುವಿನ ಪ್ರಯಾಣವನ್ನು ಸುಗಮಗೊಳಿಸಲಿದೆ.
ವೇಳಾಪಟ್ಟಿ ಮತ್ತು ಪ್ರಯಾಣದ ಸಮಯ
ಈ ರೈಲು ಸೇವೆ ನವೆಂಬರ್ 9 ರಿಂದ ಅಧಿಕೃತವಾಗಿ ಆರಂಭವಾಗಲಿದೆ. ಬುಧವಾರ ಹೊರತುಪಡಿಸಿ ವಾರದ ಆರು ದಿನಗಳು ಈ ರೈಲು ಸಂಚರಿಸಲಿದೆ. ಕೆಎಸ್‌ಆರ್ ಬೆಂಗಳೂರಿನಿಂದ ಪ್ರತಿದಿನ ಬೆಳಿಗ್ಗೆ 5:10ಕ್ಕೆ ಹೊರಡುವ ರೈಲು, ಮಧ್ಯಾಹ್ನ 1:50ಕ್ಕೆ ಎರ್ನಾಕುಳಂ ತಲುಪಲಿದೆ. ಅದೇ ರೀತಿ, ಎರ್ನಾಕುಳಂನಿಂದ ಮಧ್ಯಾಹ್ನ 2:20ಕ್ಕೆ ಹೊರಟು, ರಾತ್ರಿ 11:00 ಗಂಟೆಗೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ. ಒಟ್ಟು 583 ಕಿಲೋಮೀಟರ್ ದೂರವನ್ನು ಈ ರೈಲು 8 ಗಂಟೆ 40 ನಿಮಿಷಗಳಲ್ಲಿ ಕ್ರಮಿಸಲಿದೆ.
ಪ್ರಯಾಣಿಕರ ಬಹುದಿನದ ಬೇಡಿಕೆ
ಬೆಂಗಳೂರು ಮತ್ತು ಎರ್ನಾಕುಳಂ ನಡುವೆ ವೇಗದ ರೈಲು ಸೇವೆಗಾಗಿ ಬಹುದಿನಗಳಿಂದ ಬೇಡಿಕೆಯಿತ್ತು. ಈ ವಂದೇ ಭಾರತ್ ರೈಲಿನಿಂದಾಗಿ ಪ್ರಯಾಣದ ಸಮಯ ಗಮನಾರ್ಹವಾಗಿ ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಮತ್ತು ತ್ವರಿತ ಸೌಲಭ್ಯ ದೊರೆಯಲಿದೆ. ಈ ಮಾರ್ಗದಲ್ಲಿ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ ಎಂದು ದಕ್ಷಿಣ ರೈಲ್ವೆ ವಿಶ್ವಾಸ ವ್ಯಕ್ತಪಡಿಸಿದೆ.