ಬೆಂಗಳೂರು ಸ್ವಚ್ಛತೆಗೆ ತ್ರಿವಳಿ ಅಸ್ತ್ರ: ಎಲ್ಲೆಂದರಲ್ಲಿ ಕಸ ಹಾಕುವವರಿಗೆ ರಿಟರ್ನ್ ಗಿಫ್ಟ್, 60 ಹೊಸ ಕಿಯೋಸ್ಕ್‌ಗಳ ಸ್ಥಾಪನೆ
x

ಬೆಂಗಳೂರು ಕಸ 

ಬೆಂಗಳೂರು ಸ್ವಚ್ಛತೆಗೆ ತ್ರಿವಳಿ ಅಸ್ತ್ರ: ಎಲ್ಲೆಂದರಲ್ಲಿ ಕಸ ಹಾಕುವವರಿಗೆ 'ರಿಟರ್ನ್ ಗಿಫ್ಟ್', 60 ಹೊಸ ಕಿಯೋಸ್ಕ್‌ಗಳ ಸ್ಥಾಪನೆ

ಈ ಕಿಯೋಸ್ಕ್‌ಗಳು ನಿವಾಸಿಗಳಿಗೆ ದಿನದ ಯಾವುದೇ ಸಮಯದಲ್ಲಿ ತಮ್ಮ ತ್ಯಾಜ್ಯವನ್ನು ವಿಲೇವಾರಿ ಮಾಡಲು ಅವಕಾಶ ನೀಡುತ್ತವೆ, ಇದರಿಂದಾಗಿ ಬೆಳಗಿನ ಆಟೋ-ಟಿಪ್ಪರ್ ಸಂಗ್ರಹಕ್ಕಾಗಿ ಕಾಯುವ ಅಗತ್ಯ ನಿವಾರಣೆಯಾಗುತ್ತದೆ.


Click the Play button to hear this message in audio format

ರಾಜಧಾನಿ ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಬಲಪಡಿಸಲು ಮತ್ತು ನಗರವನ್ನು ಸ್ವಚ್ಛವಾಗಿಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್​​ಡಬ್ಲ್ಯುಎಮ್​​ಎಲ್​) ಹಲವು ದಿಟ್ಟ ಹಾಗೂ ನವೀನ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ. ಆಡುಗೋಡಿಯಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಲಾದ 'ಕಸ ಕಿಯೋಸ್ಕ್' ಯಶಸ್ವಿಯಾದ ಹಿನ್ನೆಲೆಯಲ್ಲಿ, ನಗರದಾದ್ಯಂತ ಹೆಚ್ಚುವರಿಯಾಗಿ 60 ಕಿಯೋಸ್ಕ್‌ಗಳನ್ನು ಸ್ಥಾಪಿಸುವುದು, ತಂತ್ರಜ್ಞಾನ ಆಧಾರಿತ ನಿಗಾ ಹಾಗೂ ಕಠಿಣ ದಂಡ ಪ್ರಯೋಗದ ಮೂಲಕ ಕಸದ ಸಮಸ್ಯೆಗೆ ಪರಿಹಾರ ಹುಡುಕಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಸಜ್ಜಾಗಿದೆ.

ನಗರದಾದ್ಯಂತ 60 ಹೊಸ 'ಕಸ ಕಿಯೋಸ್ಕ್‌'ಗಳು

ಆಡುಗೋಡಿಯಲ್ಲಿ ಅಳವಡಿಸಲಾದ ಕಸದ ಕಿಯೋಸ್ಕ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ, ಇದೇ ಮಾದರಿಯಲ್ಲಿ ನಗರದ ಬೇರೆ ಬೇರೆ ಭಾಗಗಳಲ್ಲಿ 60 ಹೊಸ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಬಿಎಸ್​​ಡಬ್ಲ್ಯುಎಮ್​​ಎಲ್​ ನಿರ್ಧರಿಸಿದೆ. ಈ ಕಿಯೋಸ್ಕ್‌ಗಳ ಮೂಲಕ, ನಿವಾಸಿಗಳು ದಿನದ ಯಾವುದೇ ಹೊತ್ತಿನಲ್ಲಿ ತಮ್ಮ ಮನೆಯ ಕಸವನ್ನು ವಿಲೇವಾರಿ ಮಾಡಬಹುದು. ಇದರಿಂದ, ಬೆಳಗಿನ ಜಾವ ಆಟೋ-ಟಿಪ್ಪರ್‌ಗಳಿಗಾಗಿ ಕಾಯುವ ಅನಿವಾರ್ಯತೆ ತಪ್ಪಲಿದ್ದು, ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ಮತ್ತು ಕಸದ ಕಪ್ಪು ಚುಕ್ಕೆಗಳನ್ನು (ಬ್ಲಾಕ್ ಸ್ಪಾಟ್‌) ಸಂಪೂರ್ಣವಾಗಿ ತಡೆಯುವ ಗುರಿ ಹೊಂದಲಾಗಿದೆ.

ಕಸ ಸಂಗ್ರಹಣೆ ಮೇಲೆ ಡಿಜಿಟಲ್ ನಿಗಾ

ತ್ಯಾಜ್ಯ ನಿರ್ವಹಣೆಯನ್ನು ಇನ್ನಷ್ಟು ವೈಜ್ಞಾನಿಕಗೊಳಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ವಾರ್ಡ್ ಮಟ್ಟದ ಡ್ಯಾಶ್‌ಬೋರ್ಡ್ ಅನ್ನು ಸಿದ್ಧಪಡಿಸುತ್ತಿದೆ. ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಆಯುಕ್ತ ಎಂ. ಮಹೇಶ್ವರ ರಾವ್, "ಪ್ರತಿ ವಾರ್ಡ್‌ನಲ್ಲಿ ಎಷ್ಟು ಹಸಿ ಕಸ, ಒಣ ಕಸ ಮತ್ತು ಬೇರೆ ರೀತಿಯ ತ್ಯಾಜ್ಯ ಉತ್ಪತ್ತಿಯಾಗುತ್ತದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಸಂಗ್ರಹಿಸಲಾಗುವುದು," ಎಂದು ತಿಳಿಸಿದ್ದಾರೆ. ಈ ದತ್ತಾಂಶವು ತ್ಯಾಜ್ಯ ನಿರ್ವಹಣೆಯನ್ನು ಉತ್ತಮವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಲು ಸಹಕಾರಿಯಾಗಲಿದೆ.

'ಕಸ ಸುರಿಯುವ ಹಬ್ಬ' ಮತ್ತು 'ರಿಟರ್ನ್ ಗಿಫ್ಟ್'

ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಬಿಸಿ ಮುಟ್ಟಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ 'ಕಸ ಸುರಿಯುವ ಹಬ್ಬ' ಎಂಬ ವಿನೂತನ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಅಡಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಕಸ ಸುರಿಯುವವರನ್ನು ಪತ್ತೆಹಚ್ಚಿ, ಅವರು ಎಸೆದ ಕಸವನ್ನು ಅವರಿಗೇ 'ರಿಟರ್ನ್ ಗಿಫ್ಟ್' ಆಗಿ ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ಇದರ ಜೊತೆಗೆ, ನಿಯಮ ಉಲ್ಲಂಘಿಸಿ ಕಸ ಸುರಿಯುವವರ ವೀಡಿಯೊ ಚಿತ್ರೀಕರಿಸಿ ಕಳುಹಿಸುವ ಜಾಗೃತ ನಾಗರಿಕರಿಗೆ 250 ರೂಪಾಯಿ ಬಹುಮಾನ ನೀಡುವ ಪ್ರೋತ್ಸಾಹಕ ಯೋಜನೆಯನ್ನೂ ಘೋಷಿಸಲಾಗಿದೆ. ಈ ಬಹುಮಾನದ ಹಣವನ್ನು, ಕಸ ಸುರಿದವರಿಂದ ವಸೂಲಿ ಮಾಡಿದ ದಂಡದ ಮೊತ್ತದಿಂದಲೇ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Read More
Next Story