ನವದೆಹಲಿ, ಮಾ.20- ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಏಪ್ರಿಲ್ 19 ರಂದು ಮತದಾನ ನಡೆಯಲಿರುವ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭೆ ಕ್ಷೇತ್ರಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಪ್ರಾರಂಭವಾಗಿದೆ.
ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶ (2 ಸ್ಥಾನ), ಅಸ್ಸಾಂ (5), ಬಿಹಾರ (4), ಛತ್ತೀಸ್‌ಗಢ (1), ಮಧ್ಯಪ್ರದೇಶ (6), ಮಹಾರಾಷ್ಟ್ರ (5), ಮಣಿಪುರ (2), ಮೇಘಾಲಯ ( 2), ಮಿಜೋರಾಂ (1), ನಾಗಾಲ್ಯಾಂಡ್ (1), ರಾಜಸ್ಥಾನ (12), ಸಿಕ್ಕಿಂ (1), ತಮಿಳುನಾಡು (39), ತ್ರಿಪುರಾ (1), ಉತ್ತರ ಪ್ರದೇಶ (8), ಉತ್ತರಾಖಂಡ (5), ಪಶ್ಚಿಮ ಬಂಗಾಳ (3) , ಅಂಡಮಾನ್ ಮತ್ತು ನಿಕೋಬಾರ್ (1), ಜಮ್ಮು ಮತ್ತು ಕಾಶ್ಮೀರ (1), ಲಕ್ಷದ್ವೀಪ (1) ಮತ್ತು ಪುದುಚೇರಿ (1)ಯಲ್ಲಿ ಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಸಲು ಮಾರ್ಚ್ 27 ಕೊನೆಯ ದಿನ. ಆದರೆ, ಬಿಹಾರದ ಲೋಕಸಭೆ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಮಾರ್ಚ್ 28 ಕೊನೆಯ ದಿನಾಂಕ. ಬಿಹಾರದ 40 ಸ್ಥಾನಗಳ ಪೈಕಿ ನಾಲ್ಕರಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮಾ.20 ಕೊನೆಯ ದಿನಾಂಕ. ಬಿಹಾರದಲ್ಲಿ ಏಪ್ರಿಲ್ 2 ಕೊನೆ ದಿನ.
ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಚುನಾವಣೆ ಆಯೋಗ 60 ವಿಧಾನಸಭೆ ಮತ್ತು ಎರಡು ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಪ್ರತ್ಯೇಕ ಗೆಜೆಟ್ ಅಧಿಸೂಚನೆ ಹೊರಡಿಸಿದೆ. 2019 ರ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಎರಡೂ ಸ್ಥಾನಗಳನ್ನು ಗೆದ್ದುಕೊಂಡಿದೆ. ವಿಧಾನಸಭೆಯಲ್ಲಿ ಬಿಜೆಪಿ 41, ಜೆಡಿಯು ಏಳು , ಎನ್‌ಪಿಪಿ 5, ಕಾಂಗ್ರೆಸ್ 4, ಪಿಪಿಎ 1 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಎಲ್ಲ ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಅರುಣಾಚಲ ಪಶ್ಚಿಮ ಕ್ಷೇತ್ರದಿಂದ ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಅರುಣಾಚಲ ಪೂರ್ವ ಸ್ಥಾನಕ್ಕೆ ತಪಿರ್ ಗಾವೊ ಅಭ್ಯರ್ಥಿ ಆಗಿರುವರು.
ಅಸ್ಸಾಂನಲ್ಲಿ ಮೊದಲ ಹಂತದಲ್ಲಿ ಕಾಜಿರಂಗ, ಸೋನಿತ್‌ಪುರ, ಲಖಿಂಪುರ, ದಿಬ್ರುಗಢ ಮತ್ತು ಲಖಿಂಪುರಕ್ಕೆ ಏ.19 ರಂದು ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ದಿಬ್ರುಗಢದಿಂದ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್, ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಜೋರ್ಹತ್‌ನಿಂದ, ಬಿಜೆಪಿ ರಾಜ್ಯಸಭೆ ಸದಸ್ಯ ಕಾಮಾಖ್ಯ ಪ್ರಸಾದ್ ಕಾಜಿರಂಗದಲ್ಲಿ ಸ್ಪರ್ಧಿಸಿದ್ದಾರೆ.
ಪುದುಚೇರಿಯಲ್ಲಿ ಚುನಾವಣಾಧಿಕಾರಿ ಎ ಕುಲೋತ್ತುಂಗನ್ ಅವರು ಕೇಂದ್ರಾಡಳಿತ ಪ್ರದೇಶದ ಏಕೈಕ ಲೋಕಸಭೆ ಸ್ಥಾನಕ್ಕೆ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರ್-ಕಥುವಾ ಲೋಕಸಭೆ ಕ್ಷೇತ್ರದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಮಾಜಿ ಸಚಿವ ಜಿಎಂ ಸರೂರಿ ಕಣದಲ್ಲಿದ್ದಾರೆ.