ಡಿಎಂಕೆ: 21 ಅಭ್ಯರ್ಥಿಗಳ ಪಟ್ಟಿ, ಪ್ರಣಾಳಿಕೆ ಬಿಡುಗಡೆ

Update: 2024-03-20 12:35 GMT

ಮಾ.20-ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಲೋಕಸಭೆ ಚುನಾವಣೆಗೆ 21 ಅಭ್ಯರ್ಥಿಗಳ ಪಟ್ಟಿ ಮತ್ತು ಚುನಾವಣಾ ಪ್ರಣಾಳಿಕೆಯನ್ನು ಪ್ರಧಾನ ಕಚೇರಿಯಲ್ಲಿ ಬುಧವಾರ ಬಿಡುಗಡೆ ಮಾಡಿದೆ. ಒಟ್ಟು 39 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಇಂಡಿಯ ಒಕ್ಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್, ಎಡ ಪಕ್ಷಗಳು ಮತ್ತು ವಿಸಿಕೆ ಗೆ ಹಂಚಿಕೆ ಮಾಡಿದೆ. 

ಅಭ್ಯರ್ಥಿಗಳಿವರು: ಹಾಲಿ ಸಂಸದರ ಪೈಕಿ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಸಹೋದರಿ ಕನಿಮೊಳಿ, ಟಿ.ಆರ್. ಬಾಲು ಮತ್ತು ಎ. ರಾಜಾ ಅವರನ್ನು ಪಕ್ಷ ಉಳಿಸಿಕೊಂಡಿದೆ. ದಯಾನಿಧಿ ಮಾರನ್ ಅವರನ್ನು ಚೆನ್ನೈ (ಮಧ್ಯ), ಕಲಾನಿಧಿ ವೀರಸಾಮಿ ಚೆನ್ನೈ (ಉತ್ತರ), ತಮಿಳಚಿ ತಂಗಪಾಂಡಿಯನ್ ಚೆನ್ನೈ (ದಕ್ಷಿಣ), ಎಸ್. ಜಗತ್‌ ರಕ್ಷಗನ್ ಅರಕ್ಕೋಣಂ, ಬಾಲು ಶ್ರೀಪೆರಂಬದೂರ್ ಮತ್ತು ಕತಿರ್ ಆನಂದ್ ವೆಲ್ಲೂರಿನಿಂದ ಮರುನಾಮಕರಣಗೊಂಡಿದ್ದಾರೆ. ಇನ್ನಿತರ ಅಭ್ಯರ್ಥಿಗಳೆಂದರೆ ತಿರುವಣ್ಣಾಮಲೈನಿಂದ ಸಿ.ಎನ್. ಅಣ್ಣಾದೊರೈ, ಧರ್ಮಪುರಿಯಿಂದ ಎ.ಮಣಿ, ಸೇಲಂನಿಂದ ಟಿ.ಎಂ. ಸೆಲ್ವಗಣಪತಿ, ಈರೋಡ್‌ನಿಂದ ಕೆ.ಇ. ಪ್ರಕಾಶ್, ನೀಲಗಿರಿಯಿಂದ ಎ.ರಾಜಾ, ಕೊಯಮತ್ತೂರಿನ ಗಣಪತಿ ಪಿ. ರಾಜ್‌ಕುಮಾರ್, ಪೆರಂಬಲೂರಿನಿಂದ ಅರುಣ್ ನೆಹರು, ತಂಜಾವೂರಿನಿಂದ ಎಸ್. ಮುರಸೋಲಿ, ಥೇಣಿಯಿಂದ ತಂಗ ತಮಿಳ್ಸೆಲ್ವನ್ ಮತ್ತು ತೂತುಕುಡಿಯಿಂದ ಕನಿಮೋಳಿ. ಪಟ್ಟಿಯಲ್ಲಿ 11 ಹೊಸ ಮುಖಗಳಿವೆ. 

ಪ್ರಣಾಳಿಕೆ: ರಾಜ್ಯಪಾಲರ ನೇಮಕ, 356 ನೇ ವಿಧಿ ರದ್ದು, ಪುದುಚೇರಿಗೆ ರಾಜ್ಯದ ಸ್ಥಾನಮಾನ, ತಮಿಳುನಾಡಿಗೆ ಎನ್‌ಇಇಟಿ ಪರೀಕ್ಷೆಯಿಂದ ವಿನಾಯಿತಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಬೂತ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಭರವಸೆ ನೀಡಿದೆ.ನೀತಿ ಆಯೋಗದ ವಿಸರ್ಜನೆ ಮತ್ತು ಯೋಜನಾ ಆಯೋಗವನ್ನು ಮರುಸ್ಥಾಪನೆ, ರಾಷ್ಟ್ರೀಕೃತ ಮತ್ತು ಶೆಡ್ಯೂಲ್ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮತ್ತು ಬಡ್ಡಿ ಮನ್ನಾ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ, ಪ್ರತಿ ರಾಜ್ಯದಲ್ಲಿನ ಎಲ್ಲಾ ಮಹಿಳೆಯರಿಗೆ ಮಾಸಿಕ 1,000 ರೂ. ಮತ್ತು ಮುಖ್ಯಮಂತ್ರಿಗಳನ್ನು ಸೇರಿಸಿ ರಾಜ್ಯ ಅಭಿವೃದ್ಧಿ ಮಂಡಳಿ ರಚನೆ, ಸಿಎಎ ಮತ್ತು ಯುಸಿಸಿಯನ್ನು ಜಾರಿಗೊಳಿಸುವುದಿಲ್ಲ ಮತ್ತು ತಿರುಕುರಲ್ ನ್ನು ʻರಾಷ್ಟ್ರೀಯ ಪುಸ್ತಕʼವಾಗಿ ಮಾಡಲಾಗುವುದು ಭರವಸೆಗಳಲ್ಲಿ ಸೇರಿವೆ. 

ʻ ಇದು ಡಿಎಂಕೆ ಪ್ರಣಾಳಿಕೆ ಮಾತ್ರವಲ್ಲ, ಜನರ ಪ್ರಣಾಳಿಕೆಯೂ ಹೌದು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಭಾರತವನ್ನು ನಾಶಗೊಳಿಸಿತು. ಇಂಡಿಯ ಒಕ್ಕೂಟ 2024 ರಲ್ಲಿ ಸರ್ಕಾರ ರಚಿಸಲಿದೆʼ ಎಂದು ಸ್ಟಾಲಿನ್ ಹೇಳಿದರು.

Tags:    

Similar News