ನವದೆಹಲಿ, ಜೂನ್ 14- ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಜೂನ್ 19 ಕ್ಕೆ ನಿಗದಿಪಡಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮುಖೇಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಸಲ್ಲಿಸಲು ಇಡಿ ಕಾಲಾವಕಾಶ ಕೋರಿದ್ದರಿಂದ, ವಿಚಾರಣೆಯನ್ನು ಮುಂದೂಡಿದರು.
ಕೇಜ್ರಿವಾಲ್ ಅವರ ಆರೋಗ್ಯ ಮತ್ತು ಚಿಕಿತ್ಸೆಯನ್ನು ನಿರ್ಧರಿಸಲು ರಚಿಸಿದ ವೈದ್ಯಕೀಯ ಮಂಡಳಿಯ ಪ್ರಕ್ರಿಯೆಗಳಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲು ತಮ್ಮ ಪತ್ನಿಗೆ ಅವಕಾಶ ನೀಡುವಂತೆ ಕೋರಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶರು ಶನಿವಾರಕ್ಕೆ ನಿಗದಿಪಡಿಸಿದರು. ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದರು.
ʻಆರೋಪಿ ತನ್ನ ಪತ್ನಿಯನ್ನು ವೈದ್ಯಕೀಯ ಮಂಡಳಿಗೆ ಸೇರಿಸಲು ನಿರ್ದೇಶನ ಕೋರಿದ್ದಾರೆ. ಯಾವುದೇ ಆದೇಶ ನೀಡುವ ಮೊದಲು ಸಂಬಂಧಪಟ್ಟ ಜೈಲು ಅಧೀಕ್ಷಕರಿಂದ ಪ್ರತಿಕ್ರಿಯೆ ಕೇಳುವುದು ಸೂಕ್ತವೆಂದು ಭಾವಿಸುತ್ತೇನೆ. ಅರ್ಜಿ ವಿಚಾರಣೆ ನಾಳೆ ನಡೆಯಲಿದೆ,ʼ ಎಂದು ನ್ಯಾಯಾಧೀಶರು ಹೇಳಿದರು.
ವಿಚಾರಣೆ ಸಂದರ್ಭದಲ್ಲಿ ಪ್ರಕರಣವನ್ನು ಜೂನ್ 25 ಕ್ಕೆ ಮುಂದೂಡುವಂತೆ ಇಡಿ, ಮನವಿ ಮಾಡಿತು. ಆರೋಪಿಯ ಅನುಕೂಲವನ್ನು ಪರಿಗಣಿಸಿ ಮುಂದಿನ ವಿಚಾರಣೆಯ ದಿನಾಂಕ ಗೊತ್ತುಪಡಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.
ʻಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ; ನಿಮ್ಮ (ಇಡಿ) ಕಸ್ಟಡಿಯಲ್ಲಿ ಅಲ್ಲ. ಆದ್ದರಿಂದ, ಅವರ ಅನುಕೂಲವನ್ನು ಪರಿಗಣಿಸುತ್ತೇನೆ; ನಿಮ್ಮದಲ್ಲ,ʼ ಎಂದು ನ್ಯಾಯಾಧೀಶರು ಹೇಳಿದರು.