ಏಪ್ರಿಲ್ 10- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಬಂಧನವನ್ನು ಎತ್ತಿಹಿಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಜ್ರಿವಾಲ್ ಪರ ವಕೀಲ ವಿವೇಕ್ ಜೈನ್ ತಿಳಿಸಿದ್ದಾರೆ. ಏ.10ರಂದು ಮು.ನ್ಯಾ.ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಅವರ ಮನವಿಯನ್ನು ತುರ್ತು ಪಟ್ಟಿಗೆ ಸೇರಿಸಬೇಕೆಂದು ಕೋರುವ ಸಾಧ್ಯತೆಯಿದೆ.
ದೆಹಲಿ ಹೈಕೋರ್ಟ್ ಮಂಗಳವಾರ (ಏಪ್ರಿಲ್ 9) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ಬಂಧನವನ್ನು ಎತ್ತಿಹಿಡಿದಿದೆ. ಅವರು ಜಾರಿ ನಿರ್ದೇಶನಾಲಯ(ಇಡಿ)ದ ಸಮನ್ಸ್ ಗಳಿಗೆ ಗೈರುಹಾಜರಾದ್ದರಿಂದ ಮತ್ತು ತನಿಖೆಗೆ ಸಹಕರಿಸದೆ ಇದ್ದುದರಿಂದ, ಹೆಚ್ಚು ಆಯ್ಕೆ ಉಳಿದಿರಲಿಲ್ಲ ಎಂದು ಹೇಳಿದೆ.
ಕೇಜ್ರಿವಾಲ್ ಪಿತೂರಿ ನಡೆಸಿದ್ದಾರೆ ಮತ್ತು ಅಕ್ರಮ ಹಣವನ್ನು ಮರೆಮಾಚುವಲ್ಲಿ ಸಕ್ರಿಯವಾಗಿದ್ದಾರೆ ಎಂಬ ಇಡಿ ಹೇಳಿಕೆಯನ್ನು ಹೈಕೋರ್ಟ್ ಉಲ್ಲೇಖಿಸಿದೆ.
2021-22ರಲ್ಲಿ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮ ನಡೆದಿದೆ ಎಂಬ ಪ್ರಕರಣವಿದು. ನಂತರ ಅಬಕಾರಿ ನೀತಿಯನ್ನು ರದ್ದುಗೊಳಿಸಲಾಯಿತು. ಮಾ.21ರಂದು ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತು. ಏಪ್ರಿಲ್ 1 ರಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.