ನಭಕ್ಕೆ ಹಾರಿದ ಇಸ್ರೋ-ನಾಸಾ ಜಂಟಿ ಸಹಭಾಗಿತ್ವದ NISAR ಭೂ ವೀಕ್ಷಣಾ ಉಪಗ್ರಹ
ನಿರ್ದಿಷ್ಟ ಧ್ರುವೀಯ ಕಕ್ಷೆಯಿಂದ ಭೂಮಿಯನ್ನು ಸಮಗ್ರವಾಗಿ ಅಧ್ಯಯನ ಮಾಡುವ ಉದ್ದೇಶದಿಂದ ನಿಸಾರ್ ಉಪಗ್ರಹ ಉಡಾವಣೆ ಮಾಡಲಾಗಿದೆ. ಇದು ಇಸ್ರೋ ಮತ್ತು ನಾಸಾ ನಡುವಿನ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ವಿನಿಮಯದ ಸಮನ್ವಯದ ಫಲವಾಗಿದೆ.;
ನಿಸಾರ್ ಉಪಗ್ರಹ
ಭಾರತ ಮತ್ತು ಅಮೆರಿಕದ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿರುವ ಭೂ ವೀಕ್ಷಣಾ ಉಪಗ್ರಹ NISAR ( NASA-ISRO Synthetic Aperture Radar) ಅನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು ಇಸ್ರೋ ಹಾಗೂ ನಾಸಾ ಬಾಹ್ಯಾಕಾಶ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗಿದೆ.
ಭೂಮಿಯ ಮೇಲ್ಮೈನ ನಿರ್ದಿಷ್ಟ ಧ್ರುವೀಯ ಕಕ್ಷೆಯಿಂದ ಭೂಮಿಯನ್ನು ಸಮಗ್ರವಾಗಿ ಅಧ್ಯಯನ ಮಾಡುವ ಉದ್ದೇಶವನ್ನು ನಿಸಾರ್ ಹೊಂದಿದೆ. ಈ ಉಪಗ್ರಹವು ಒಂದು ದಶಕಕ್ಕೂ ಹೆಚ್ಚು ಕಾಲದ ಮಾನವ ಕೌಶಲ್ಯ ಮತ್ತು ಇಸ್ರೋ ಮತ್ತು ನಾಸಾ ನಡುವಿನ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ವಿನಿಮಯದ ಸಮನ್ವಯದ ಫಲವಾಗಿದೆ.
2,393 ಕೆ.ಜಿ ತೂಕದ NASA-ISRO ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಉಪಗ್ರಹವು ಬುಧವಾರ (ಜುಲೈ 30) ಸಂಜೆ 5.40 ಕ್ಕೆ ಚೆನ್ನೈನಿಂದ ಸುಮಾರು 135 ಕಿಮೀ ದೂರದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ವೇದಿಕೆಯಿಂದ ಯಶಸ್ವಿಯಾಗಿ ಉಡಾವಣೆವಾಯಿತು.
51.7 ಮೀಟರ್ ಎತ್ತರದ, ಮೂರು ಹಂತದ GSLV-F16 ರಾಕೆಟ್ ಮೂಲಕ ಈ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು.
ಜುಲೈ 29 ರಂದು ಕೌಂಟ್‌ಡೌನ್ ಪ್ರಾರಂಭ
ಜುಲೈ 29 ರಂದು ಮಧ್ಯಾಹ್ನ 2:10 ಕ್ಕೆ GSLV-F16/NISAR ಮಿಷನ್‌ಗಾಗಿ ಕೌಂಟ್‌ಡೌನ್ ಆರಂಭವಾಗಿತ್ತು. ಈ ಕಾರ್ಯಾಚರಣೆಯನ್ನು ಪ್ರಮುಖವಾಗಿ ಉಡಾವಣಾ ಹಂತ, ನಿಯೋಜನೆ ಹಂತ, ಕಾರ್ಯಾರಂಭ ಹಂತ ಮತ್ತು ವಿಜ್ಞಾನ ಹಂತ ಎಂದು ವರ್ಗೀಕರಿಸಲಾಗಿದೆ.
"ಇಂದು ಮರೆಯಲಾಗದ ದಿನ!, GSLV-F16 ಮತ್ತು NISAR ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದೆ. ಉಡಾವಣಾ ಪ್ಯಾಡ್‌ನಲ್ಲಿ GSLV-F16 ರಾಕೆಟ್ ಮೂಲಕ NISAR ಉಪಗ್ರಹ ನಿಗದಿತ ಕಕ್ಷೆಗೆ ಸೇರಿದೆ" ಎಂದು ಇಸ್ರೋ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
ಇಸ್ರೋ ಮತ್ತು ನಾಸಾ ನಡುವಿನ ಈ ಪಾಲುದಾರಿಕೆ ಒಂದು ಅನನ್ಯ ಪ್ರಯತ್ನವಾಗಿದ್ದು, GSLV ರಾಕೆಟ್ ಸೂರ್ಯ-ಸಿಂಕ್ರೋನಸ್ ಧ್ರುವ ಕಕ್ಷೆಗೆ (SSPO) ಉಪಗ್ರಹವನ್ನು ಕೊಂಡೊಯ್ಯುತ್ತಿರುವುದು ಇದೇ ಮೊದಲು. ಸಾಮಾನ್ಯವಾಗಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ಗಳು (PSLV) ಈ ರೀತಿಯ ಕಕ್ಷೆಗಳಿಗೆ ಉಪಗ್ರಹಗಳನ್ನು ಕೊಂಡೊಯ್ಯುತ್ತವೆ.
ಭೂಮಿಯನ್ನು ಅಧ್ಯಯನ ಮಾಡಲಿದೆ NISAR
NISAR ಉಪಗ್ರಹವು ಭೂಮಿಯನ್ನು ಜಾಗತಿಕವಾಗಿ ಅಧ್ಯಯನ ಮಾಡುವ ಗುರಿ ಹೊಂದಿದೆ. ಅರಣ್ಯ ಚಲನಶೀಲತೆ, ಪರ್ವತ ಬದಲಾವಣೆಗಳು, ಹಿಮಾಲಯ ಮತ್ತು ಅಂಟಾರ್ಕ್ಟಿಕಾದಲ್ಲಿನ ಹಿಮನದಿ ಚಲನೆಗಳು, ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿನ ಕಾಲೋಚಿತ ಬದಲಾವಣೆಗಳನ್ನು ಈ ಉಪಗ್ರಹವು ಅಧ್ಯಯನ ನಡೆಸಲಿದೆ.
ಭೂಮಿ ಮತ್ತು ಮಂಜುಗಡ್ಡೆಯ ವಿರೂಪ, ಭೂ ಪರಿಸರ ವ್ಯವಸ್ಥೆ ಮತ್ತು ಸಾಗರ ಪ್ರದೇಶಗಳಲ್ಲಿ ಆಗುವ ಬದಲಾವಣೆಗಳನ್ನು ಅಮೆರಿಕ ಮತ್ತು ಭಾರತೀಯ ವಿಜ್ಞಾನ ಸಮುದಾಯಗಳ ಸಹಯೋಗದೊಂದಿಗೆ ಅಧ್ಯಯನ ಮಾಡಿ, ಜಾಗತಿಕ ವೈಜ್ಞಾನಿಕ ಸಮುದಾಯಕ್ಕೆ ಮಹತ್ವದ ಮಾಹಿತಿ ಒದಗಿಸುವುದು ಈ ಮಿಷನ್‌ನ ಪ್ರಾಥಮಿಕ ಉದ್ದೇಶವಾಗಿದೆ ಎಂದು ಇಸ್ರೋ ತಿಳಿಸಿದೆ.
ಕಳೆದ 10 ವರ್ಷಗಳಿಂದ ಉಪಗ್ರಹ ಅಭಿವೃದ್ಧಿ
ಇಸ್ರೋ ಹೇಳುವಂತೆ, ಈ ಕಾರ್ಯಾಚರಣೆಯಲ್ಲಿನ ಸಂಕೀರ್ಣ ಪೇಲೋಡ್‌ಗಳು ಮತ್ತು ಮೇನ್‌ಫ್ರೇಮ್ ವ್ಯವಸ್ಥೆಗಳನ್ನು 8 ರಿಂದ 10 ವರ್ಷಗಳ ಅವಧಿಯಲ್ಲಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ಎರಡೂ ಬಾಹ್ಯಾಕಾಶ ಸಂಸ್ಥೆಗಳ ವಿಜ್ಞಾನಿಗಳ ಸಕ್ರಿಯ ಅಧ್ಯಯನದಿಂದ ಇಂದು ಯಶಸ್ವಿ ಉಡಾವಣೆಗೊಂಡಿದೆ. NISAR ಉಪಗ್ರಹವು ದ್ವಿಆವರ್ತನವನ್ನು ಹೊಂದಿದೆ. NASA ಒದಗಿಸಿದ L-ಬ್ಯಾಂಡ್ ಮತ್ತು ISRO ಒದಗಿಸಿದ S-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಅಪಾರ ಪ್ರಮಾಣದ ಡೇಟಾ ಸಂಗ್ರಹಿಸಲಿವೆ.
ಬುಧವಾರ ಆರಂಭಿಕ ಕಕ್ಷೆಯ ಸ್ಥಿತಿಯನ್ನು ಉಪಗ್ರಹ ಅಧ್ಯಯನ ಮಾಡಲಿದೆ. ಉಡಾವಣೆಯ ಮೊದಲ 90 ದಿನಗಳು ಕಾರ್ಯಾರಂಭ ಮಾಡಲು ಅಥವಾ ಇನ್-ಆರ್ಬಿಟ್ ಚೆಕ್‌ಔಟ್ ನಿರ್ವಹಿಸಲು ಮೀಸಲಿರಿಸಲಾಗಿದೆ.
NISAR ಉಪಗ್ರಹದ ಡ್ಯುಯಲ್-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ ಸುಧಾರಿತ, ಸ್ವೀಪ್‌ಸಾರ್ ತಂತ್ರಜ್ಞಾನ ಒಳಗೊಂಡಿದೆ. ಇದು ಹೆಚ್ಚಿನ ರೆಸಲ್ಯೂಶನ್ ಮತ್ತು ದೊಡ್ಡ ಗಾತ್ರದ ಚಿತ್ರಗಳನ್ನು ಭೂಮಿಗೆ ರವಾನಿಸಲಿದೆ. NISAR ಪ್ರತಿ 12 ದಿನಗಳಿಗೆ ಒಮ್ಮೆ ದ್ವೀಪಗಳು, ಸಮುದ್ರ-ಮಂಜುಗಡ್ಡೆ ಮತ್ತು ಸಾಗರಗಳು ಸೇರಿದಂತೆ ಜಾಗತಿಕ ಭೂಮಿ ಮತ್ತು ಮಂಜುಗಡ್ಡೆಯಿಂದ ಆವೃತವಾದ ಮೇಲ್ಮೈಗಳನ್ನು ಚಿತ್ರಿಸಲಿದೆ.
ಶ್ರೀಹರಿಕೋಟಾದಿಂದ 102ನೇ ಉಡಾವಣೆ
ಆಂಧ್ರ ಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಉಡ್ಡಯನ ಕೇಂದ್ರದಲ್ಲಿ ಉಡಾವಣೆಯಾಗುತ್ತಿರುವ 102ಉಪಗ್ರಹ ಎಂಬ ಖ್ಯಾತಿಗೆ ನಿಸಾರ್ ಭಾಜನವಾಗಿದೆ.
ಜಿಎಸ್‌ಎಲ್‌ವಿ-ಎಫ್16 (GSLV-F16) ಜಿಯೋ-ಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ನ 18ನೇ ಹಾರಾಟ ಇದಾಗಿದೆ. ಸ್ಥಳೀಯ ಕ್ರಯೋಜೆನಿಕ್ ಹಂತದೊಂದಿಗೆ 12ನೇ ಹಾರಾಟವಾಗಿದೆ. ಎನ್‌ಐಎಸ್‌ಎಆರ್ (NISAR) ಮಿಷನ್‌ನ ಜೀವಿತಾವಧಿ 5 ವರ್ಷ ಎಂದು ಇಸ್ರೋ ತಿಳಿಸಿದೆ.