IPL 2024 | RCB vs CSK ಪ್ಲೇಆಫ್ ಸ್ಥಾನಕ್ಕೆ ಸೆಣೆಸಾಟ: ಪಂದ್ಯಕ್ಕೆ ಮಳೆ ಭೀತಿ

ಒಂದು ವೇಳೆ ಮಳೆಯಿಂದ ಪಂದ್ಯ ನಿಂತುಹೋದಲ್ಲಿ, ಸಿಎಸ್‌ ಕೆ ಪ್ಲೇಆಫ್‌ಗೆ ಹೋಗುತ್ತದೆ. ಜತೆಗೆ, ಆರ್ಸಿಬಿ ಕನಿಷ್ಠ18 ರನ್‌ಗಳಿಂದ ಗೆಲ್ಲಬೇಕು ಇಲ್ಲವೇ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕಾಗುತ್ತದೆ. ಹಾಗಾಗಿ ಸದ್ಯ ಪರಿಸ್ಥಿತಿ ಆರ್‌ಸಿಬಿ ವಿರುದ್ಧ ಇದೆ.;

Update: 2024-05-18 06:36 GMT

ಬೆಂಗಳೂರು, ಮೇ 18- ಫೀನಿಕ್ಸ್‌ ನಂತೆ ಮೇಲೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿರುವ ಎರಡೂ ತಂಡಗಳ ನಡುವಿನ ಪಂದ್ಯ ವರುಣನ ಅವಕೃಪೆಗೆ ತುತ್ತಾಗದಿರಲಿ ಎಂದು ಕ್ರೀಡಾಸಕ್ತರು ಮೊರೆಯಿಡುತ್ತಿದ್ದಾರೆ. 

ಹೈದರಾಬಾದ್‌ನಲ್ಲಿ ಗುರುವಾರ ನಡೆದ ಪಂದ್ಯದ ಬಳಿಕ ಸನ್‌ರೈಸರ್ಸ್ ತಂಡ ಪ್ಲೇಆಫ್‌ ಗೆ ತನ್ನ ಸ್ಥಾನ ಖಚಿತಪಡಿಸಿಕೊಂಡಿತು. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಈಗಾಗಲೇ ತಮ್ಮ ಸ್ಥಾನ ಖಚಿತಪಡಿಸಿಕೊಂಡಿವೆ. ಉಳಿದ ಒಂದು ಸ್ಥಾನಕ್ಕೆ ಸಿಎಸ್ಕೆ ಮತ್ತು ಆರ್‌ಸಿಬಿ ನಡುವೆ ಹಣಾಹಣಿ ನಡೆಯಲಿದೆ. 

ಉತ್ತಮ ನಿವ್ವಳ ರನ್ ರೇಟ್ ಮತ್ತು ಹೆಚ್ಚು ಅಂಕಗಳ ಹೆಗ್ಗಳಿಕೆ ಹೊಂದಿರುವ ಹಾಲಿ ಚಾಂಪಿಯನ್ ಸಿಎಸ್ಕೆ (13 ಅಂಕ, ಎನ್‌ ಆರ್‌ ಆರ್‌ 0.528), ಎಂಟು ಪಂದ್ಯಗಳಲ್ಲಿ ಒಮ್ಮೆ ಮಾತ್ರ ಆತಿಥೇಯ ತಂಡಕ್ಕೆ ಸೋತಿದೆ. ಆ‌ರ್‌ಸಿಬಿ 12 ಅಂಕ ಮತ್ತು 0.387 ನಿವ್ವಳ ರನ್‌ ರೇಟ್ ಹೊಂದಿದೆ. 

ಆದರೆ, ಮಳೆಯ ಮುನ್ಸೂಚನೆ ಆತಂಕ ಸೃಷ್ಟಿಸಿದೆ. ಒಂದು ವೇಳೆ ಆಗಿ ಪಂದ್ಯ ನಿಂತುಹೋದಲ್ಲಿ, ಸಿಎಸ್‌ ಕೆ ಪ್ಲೇಆಫ್‌ಗೆ ಹೋಗುತ್ತದೆ. ಜತೆಗೆ, ಆರ್ಸಿಬಿ ಕನಿಷ್ಠ 18 ರನ್‌ಗಳಿಂದ ಗೆಲ್ಲಬೇಕು ಇಲ್ಲವೇ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕಾಗುತ್ತದೆ. ಇದರಿಂದ ಪರಿಸ್ಥಿತಿ ಆರ್‌ ಸಿಬಿ ವಿರುದ್ಧ ಇದೆ. 

ಆರ್‌ಸಿಬಿ ಆರು ಪಂದ್ಯಗಳ ಸೋಲಿನ ಸರಣಿ ಬಳಿಕ ಐದು ನೇರ ಗೆಲುವು ಗಳಿಸುವ ಮೂಲಕ ಅದ್ಭುತವಾಗಿ ಪುನರಾಗಮನ ಮಾಡಿ ದೆ. ಆರೆಂಜ್ ಕ್ಯಾಪ್ ಆಟಗಾರ ವಿರಾಟ್‌ ಕೊಹ್ಲಿ ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಗಳಿಸಿದ್ದು, ಅದ್ಭುತ ಫಾರ್ಮ್‌ನಲ್ಲಿ ದ್ದಾರೆ. ನಾಯಕ ಫಾಫ್ ಡು ಪ್ಲೆಸಿಸ್ ಅವರು ತಮ್ಮ ಕೊನೆಯ ಎರಡು ಇನ್ನಿಂಗ್ಸ್‌ನಲ್ಲಿ ಏಕ ಅಂಕಿ ಸ್ಕೋರ್‌ಗಳನ್ನುಗಳಿಸಿದ್ದು,ಈ ಪಂದ್ಯದಲ್ಲಿ ಫಾರ್ಮ್‌ಗೆ ಮರಳಲಿದ್ದಾರೆ ಎಂದು ತಂಡ ವಿಶ್ವಾಸ ಹೊಂದಿದೆ. ಮಧ್ಯಮ ಕ್ರಮಾಂಕದಲ್ಲಿ ಆಡುವ ರಜತ್ ಪಾಟಿದಾರ್ ಮತ್ತು ಕ್ಯಾಮೆರಾನ್ ಗ್ರೀನ್ ಇಬ್ಬರೂ ಉತ್ತಮ ಫಾರ್ಮ್‌ ನಲ್ಲಿದ್ದಾರೆ. ಮಹಿಪಾಲ್ ಲೊಮ್ರೋರ್ ಮತ್ತು ದಿನೇಶ್ ಕಾರ್ತಿಕ್, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉತ್ತಮ ಸಾಧನೆಗೆ ಎದುರು ನೋಡುತ್ತಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಉತ್ತಮ ಬ್ಯಾಟಿಂಗ್ ವಿಕೆಟ್ ಆಗಿದೆ. 

ಬೌಲಿಂಗ್‌ಗೆ ಬಂದರೆ ಯಶ್ ದಯಾಲ್ ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್‌ ಗಳಿಸುವ ಮೂಲಕ ತಂಡದ ತಾರೆ ಆಗಿದ್ದಾರೆ. ಲಾಕಿ ಫರ್ಗುಸ ನ್, ಮೊಹಮ್ಮದ್ ಸಿರಾಜ್, ಗ್ರೀನ್ ಮತ್ತು ಸ್ವಪ್ನಿಲ್ ಸಿಂಗ್ ಪಂದ್ಯದಲ್ಲಿ ಅಸಾಧಾರಣ ಪ್ರದರ್ಶನ ನೀಡಬೇಕಾಗುತ್ತದೆ. ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿರುವ ವಿಲ್ ಜ್ಯಾಕ್ಸ್, ಅರೆಕಾಲಿಕ ಸ್ಪಿನ್ ಬೌಲಿಂಗ್ ಆಯ್ಕೆ. ಆದರೆ, ಅವರನ್ನು ಬಳಸಿಕೊಳ್ಳಲಾಗುತ್ತದೆಯೇ ಎಂಬುದು ಪ್ರಶ್ನೆ. 

ಸಿಎಸ್‌ಕೆಯಲ್ಲಿ ರುತುರಾಜ್ ಗಾಯಕ್ವಾಡ್ ಈ ಋತುವಿನಲ್ಲಿ ತಂಡದ ಅಗ್ರ ರನ್ ಸ್ಕೋರರ್. ಅವರು ಉತ್ತಮ ಆರಂಭ ನೀಡುವ ನಿರೀಕ್ಷೆಯಿದೆ. ಸಹ ಆರಂಭಿಕ ಆಟಗಾರ ರಚಿನ್ ರವೀಂದ್ರ ಕೂಡ ರನ್‌ ಗಳಿಕೆ ಮಾಡುತ್ತಿದ್ದಾರೆ. ಅವರು ಡ್ಯಾರಿಲ್ ಮಿಶೆಲ್ ಜೊತೆಗೆ ಅಗ್ರ ಕ್ರಮಾಂಕದಲ್ಲಿ ಹೆಚ್ಚು ರನ್‌ ಗಳಿಸುವ ನಿರೀಕ್ಷೆಯಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ರನ್‌ ಗಳಿಸಲು ವಿಫಲರಾಗಿರುವ ಶಿವಂ ದುಬೆ, ಲಯಕ್ಕೆ ಮರಳಬೇಕಿದೆ. 

ಬೌಲಿಂಗ್‌ನಲ್ಲಿ ವೇಗಿ ಸಿಮರ್‌ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ಉತ್ತಮ ಸಾಧನೆ ಮಾಡಿದ್ದಾರೆ. ತಂಡದ ಪ್ರಮುಖ ಬೌಲರ್‌ ಗಳಾದ ಮುಸ್ತಫಿಜುರ್ ರೆಹಮಾನ್, ಮಥೀಶ ಪತಿರಾನ ಮತ್ತು ದೀಪಕ್ ಚಹಾರ್ ಅವರ ಉಪಸ್ಥಿತಿಯಲ್ಲಿ ಕೊರತೆಯನ್ನು ತುಂಬಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರ ಸ್ಪೂರ್ತಿದಾಯಕ ಉಪಸ್ಥಿತಿ ತಂಡಕ್ಕೆ ಉತ್ತೇಜನ ನೀಡಲಿದೆ. ಅವರು ಗಾಯದ ಹಿನ್ನೆಲೆಯಲ್ಲಿ ಅವರು ಎಷ್ಟು ದೊಡ್ಡ ಪಾತ್ರ ವಹಿಸುತ್ತಾರೆ ಎಂಬುದನ್ನು ಕಾದುನೋಡ ಬೇಕಿದೆ.

ತಂಡಗಳು:

ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (c), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್), ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕುರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್ ಮತ್ತು ಸೌರವ್ ಚೌಹಾಣ್.

ಸಿಎಸ್‌ಕೆ: ರುತುರಾಜ್ ಗಾಯಕ್‌ವಾಡ್ (ಸಿ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಶೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್‌ ಕೀಪ‌ರ್‌), ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಶಾರ್ದೂಲ್ ಠಾಕೂರ್, ಶೇಕ್ ರಶೀದ್, ಮೊಯಿನ್ ಸಿಂಧು, ಮಿಶೆಲ್ ಸ್ಯಾಂಟ್ನರ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ಆರ್‌ ಎಸ್ ಹಂಗರ್ಗೇಕರ್ ಮತ್ತು ಅರವೆಲ್ಲಿ ಅವನೀಶ್.

ಪಂದ್ಯ ಆರಂಭ: ಸಂಜೆ 7.30 

Tags:    

Similar News