ಶಿಕ್ಷಕ ವೃತ್ತಿಯ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ; ಏಕಲವ್ಯ ವಸತಿ ಶಾಲೆಗಳಲ್ಲಿ 7,267 ಹುದ್ದೆಗಳಿಗೆ ಅರ್ಜಿ

ಪ್ರಾಂಶುಪಾಲರು 225, ಸ್ನಾತಕೋತ್ತರ ಪದವೀಧರ ಶಿಕ್ಷಕರು 1,460, ತರಬೇತಿ ಪಡೆದ ಪದವೀಧರ ಶಿಕ್ಷಕರು 3,962, ಮಹಿಳಾ ಶುಶ್ರೂಕ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

Update: 2025-09-22 10:56 GMT

ಸಾಂದರ್ಭಿಕ ಚಿತ್ರ

Click the Play button to listen to article

ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (EMRS) ಖಾಲಿ ಇರುವ ಬರೋಬ್ಬರಿ 7,267 ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಬೃಹತ್ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 23 ಕೊನೆಯ ದಿನಾಂಕ.

ದೇಶಾದ್ಯಂತ ಇರುವ ಏಕಲವ್ಯ ಶಾಲೆಗಳಲ್ಲಿ ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಗುರಿಯೊಂದಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇದು ಕೇಂದ್ರ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಕ ವೃತ್ತಿಯ ಕನಸು ಕಾಣುತ್ತಿರುವವರಿಗೆ ಒಂದು ಸುವರ್ಣಾವಕಾಶವಾಗಿದೆ.

ಯಾವೆಲ್ಲ ಹುದ್ದೆಗಳು?

ಈ ನೇಮಕಾತಿಯಲ್ಲಿ ಒಟ್ಟು 7,267 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ ಪ್ರಾಂಶುಪಾಲರ 225 ಹುದ್ದೆಗಳು, ಸ್ನಾತಕೋತ್ತರ ಪದವೀಧರ ಶಿಕ್ಷಕರ (PGT) 1,460 ಹುದ್ದೆಗಳು, ಮತ್ತು ತರಬೇತಿ ಪಡೆದ ಪದವೀಧರ ಶಿಕ್ಷಕರ (TGT) 3,962 ಹುದ್ದೆಗಳು ಸೇರಿವೆ. ಬೋಧಕೇತರ ವಿಭಾಗದಲ್ಲಿ, ಮಹಿಳಾ ಶುಶ್ರೂಷಕರ 550 ಹುದ್ದೆಗಳು, ವಸತಿ ನಿಲಯ ಪಾಲಕರ 633 ಹುದ್ದೆಗಳು, ಕಿರಿಯ ಸಹಾಯಕ ಹುದ್ದೆಗಳು 228, ಲ್ಯಾಬ್ ಸಹಾಯಕರ 146 ಹುದ್ದೆಗಳು ಹಾಗೂ 61 ಲೆಕ್ಕಿಗರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಯಾವ ಪದವಿ ಪಡೆದಿರಬೇಕು?

ವಿದ್ಯಾರ್ಹತೆಗೆ ಸಂಬಂಧಿಸಿದಂತೆ, ಪ್ರಾಂಶುಪಾಲರು ಮತ್ತು ಸ್ನಾತಕೋತ್ತರ ಪದವೀಧರ ಶಿಕ್ಷಕರ ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ. ಕಡ್ಡಾಯವಾಗಿದೆ. ಪದವೀಧರ ಶಿಕ್ಷಕರ ಹುದ್ದೆಗಳಿಗೆ ಪದವಿ ಮತ್ತು ಬಿ.ಇಡಿ. ಅಥವಾ ಎಂ.ಇಡಿ. ಪೂರ್ಣಗೊಳಿಸಿರಬೇಕು. ಮಹಿಳಾ ಶುಶ್ರೂಷಕರ ಹುದ್ದೆಗಳಿಗೆ ಬಿ.ಎಸ್ಸಿ (ನರ್ಸಿಂಗ್), ವಸತಿ ನಿಲಯ ಪಾಲಕರ ಹುದ್ದೆಗಳಿಗೆ ಯಾವುದೇ ಪದವಿ, ಹಾಗೂ ಕಿರಿಯ ಸಹಾಯಕ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಜೊತೆಗೆ ಕಂಪ್ಯೂಟರ್ ಟೈಪಿಂಗ್ ಜ್ಞಾನ ಅಗತ್ಯವಾಗಿದೆ. ಲ್ಯಾಬ್ ಸಹಾಯಕ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ (ವಿಜ್ಞಾನ) ಜೊತೆಗೆ ಲ್ಯಾಬ್ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಪಡೆದಿರಬೇಕು.

ವಯೋಮಿತಿ ಇದೆಯೇ?

ವಯೋಮಿತಿಯನ್ನು ಪ್ರಾಂಶುಪಾಲರ ಹುದ್ದೆಗೆ ಗರಿಷ್ಠ 50 ವರ್ಷ, ಸ್ನಾತಕೋತ್ತರ ಪದವೀಧರ ಶಿಕ್ಷಕರಿಗೆ 40 ವರ್ಷ, ಪದವೀಧರ ಶಿಕ್ಷಕರು, ಮಹಿಳಾ ಶುಶ್ರೂಷಕರು ಮತ್ತು ವಸತಿ ನಿಲಯ ಪಾಲಕರಿಗೆ 35 ವರ್ಷ ಹಾಗೂ ಇತರ ಹುದ್ದೆಗಳಿಗೆ 30 ವರ್ಷ ಎಂದು ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ವಿಕಲಚೇತನರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ವೇತನ ಎಷ್ಟು?

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಅನ್ವಯ ಆಕರ್ಷಕ ವೇತನ ನೀಡಲಾಗುವುದು. ಪ್ರಾಂಶುಪಾಲರಿಗೆ ಮಾಸಿಕ 78,800 ರಿಂದ 2,09,200 ರೂಪಾಯಿ, ಸ್ನಾತಕೋತ್ತರ ಪದವೀಧರ ಶಿಕ್ಷಕರಿಗೆ 47,600 ರಿಂದ 1,51,100 ರೂಪಾಯಿ ಹಾಗೂ ಪದವೀಧರ ಶಿಕ್ಷಕರಿಗೆ 44,900 ರಿಂದ 1,42,400 ರೂಪಾಯಿ ರವರೆಗೆ ವೇತನವಿರುತ್ತದೆ. ಇದರೊಂದಿಗೆ ಭವಿಷ್ಯದಲ್ಲಿ ಬಡ್ತಿ, ಭತ್ಯೆ ಮತ್ತು ಇತರೆ ಸೌಲಭ್ಯಗಳೂ ಲಭ್ಯವಿರುತ್ತವೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಯ್ಕೆ ಪ್ರಕ್ರಿಯೆಯು ಒಎಂಆರ್ ಆಧಾರಿತ ಎರಡು ಹಂತದ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಆಸಕ್ತ ಅಭ್ಯರ್ಥಿಗಳು ಏಕಲವ್ಯ ಮಾದರಿ ವಸತಿ ಶಾಲೆಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಧಿಸೂಚನೆಯನ್ನು ಓದಿಕೊಂಡು, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರಾಂಶುಪಾಲರ ಹುದ್ದೆಗೆ 2,000 ರೂಪಾಯಿ, ಶಿಕ್ಷಕರ ಹುದ್ದೆಗಳಿಗೆ 1,500 ರೂಪಾಯಿ ಮತ್ತು ಇತರ ಹುದ್ದೆಗಳಿಗೆ 1,000 ರೂಪಾಯಿ ಅರ್ಜಿ ಶುಲ್ಕ ಹಾಗೂ 500 ರೂಪಾಯಿ ನಿರ್ವಹಣಾ ಶುಲ್ಕವನ್ನು ಪಾವತಿಸಬೇಕಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 19, 2025 ರಂದು ಆರಂಭವಾಗಿದ್ದು, ಅಕ್ಟೋಬರ್ 23, 2025 ಕೊನೆಯ ದಿನಾಂಕವಾಗಿದೆ. ಪರೀಕ್ಷಾ ದಿನಾಂಕ ಮುಂದಿನ ದಿನಗಳಲ್ಲಿ ಪ್ರಕಟಗೊಳ್ಳಲಿದೆ

Tags:    

Similar News