ನಲವತ್ತೆರಡು (೪೨) ಪ್ರತಿಷ್ಠಿತ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ (ಜಿಐ ಟ್ಯಾಗ್) ಗೌರವ ಪಡೆದಿರುವ ಕರ್ನಾಟಕದ ಉತ್ಪನ್ನಗಳು ಮತ್ತಷ್ಟು ಜಿಐ ಟ್ಯಾಗ್ ಪಡೆಯಲು ಪ್ರಯತ್ನ ನಡೆಸಿವೆ. ಇವುಗಳ ಮುಂಚೂಣಿಯಲ್ಲಿರುವುದು ಮಸಾಲೆ ದೋಸೆ ಮತ್ತು ಮೈಸೂರು ಪಾಕ್..
ಜಿಐ ಅಂದರೆ, ಉತ್ಪನ್ನವೊಂದರ ಮೂಲ, ಕೃಷಿ-ಹವಾಮಾನ ವ್ಯತ್ಯಾಸ ಮತ್ತು ಸಾಂಪ್ರದಾಯಿಕ ಬೇಸಾಯ ಪದ್ದತಿಯನ್ನು ಆಧರಿಸಿ ನೀಡುವ ಪ್ರಮಾಣಪತ್ರ. ಭೌಗೋಳಿಕ ವೈಶಿಷ್ಟ್ಯ ಅಥವಾ ಕುರುಹು ಎಂದು ಕರೆಯಲ್ಪಡುವ ಇದನ್ನು ಮನುಷ್ಯರ ಕೌಶಲ, ಬಳಸಿದ ವಸ್ತು ಹಾಗೂ ಸಂಪನ್ಮೂಲವನ್ನು ಆಧರಿಸಿ ಕೃಷಿಯೇತರ ಉತ್ಪನ್ನಗಳಾದ ಕರಕುಶಲ ವಸ್ತುಗಳು ಹಾಗೂ ತಿನಿಸುಗಳಿಗೂ ನೀಡಲಾಗುತ್ತದೆ. ಸಾಚಾ ಉತ್ಪನ್ನಗಳನ್ನು ಖರೀದಿಸಲು ಇಚ್ಛಿಸುವ ಗ್ರಾಹಕರಿಗೆ ಜಿಐ ಪ್ರಮಾಣಪತ್ರ ಗುಣಮಟ್ಟದ ಖಾತ್ರಿ ನೀಡುತ್ತದೆ.
ಹಲವು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಡೆದ ಅಧ್ಯಯನಗಳು, ಜಿಐಯಿಂದ ಉತ್ಪಾದಕರಿಗೆ ಲಾಭವಾಗುತ್ತದೆ ಎಂದು ಖಾತ್ರಿಪಡಿಸಿವೆ. ಆದರೆ, ಇದು ನಮ್ಮ ದೇಶದಲ್ಲಿ ನಿಜವಲ್ಲ. ಜಿಐ ನೋದಣಿ ವ್ಯವಸ್ಥೆ ಹಾಗೂ ಮಾರುಕಟ್ಟೆಯಲ್ಲಿನ ಲೋಪಗಳು ಇದಕ್ಕೆ ಕಾರಣ. 1999ರ ಜಿಯಾಗ್ರಫಿಕಲ್ ಇಂಡಿಕೇಷನ್ಸ್ ಆಫ್ ಗೂಡ್ಸ್(ನೋಂದಣಿ ಮತ್ತು ರಕ್ಷಣೆ) ಕಾನೂನು ಹೆಚ್ಚೇನೂ ಪರಿಣಾಮ ಬೀರಿಲ್ಲ ಮತ್ತು ಉತ್ಪಾದಕರಿಗೆ ಆರ್ಥಿಕ ಲಾಭ ತಂದುಕೊಟ್ಟಿಲ್ಲ.
2020ರ ಮಾಹಿತಿ ಪ್ರಕಾರ, ಜಾಗತಿಕವಾಗಿ 65,900 ಜಿಐ ನೀಡಲಾಗಿದೆ. ಮೊದಲ ಸ್ಥಾನದಲ್ಲಿ ಜರ್ಮನಿ(15,560) ಇದ್ದು, ಆನಂತರ ಚೀನಾ(7,247), ಹಂಗರಿ(6,683), ಜೆಕ್ ಗಣರಾಜ್ಯ(6,285),ಇಟಲಿ(6015), ಪೋರ್ಚುಗಲ್ (5988), ಇಂಡಿಯ 390 ಹಾಗೂ ಕರ್ನಾಟಕ 46 ಜಿಐ ಹೊಂದಿವೆ. ತಮಿಳುನಾಡು ಗರಿಷ್ಠ 61 ಹಾಗೂ ಉತ್ತರಪ್ರದೇಶ 56 ಜಿಐ ಹೊಂದಿವೆ. ಜಾಗತಿಕವಾಗಿ ದ್ರಾಕ್ಷಾರಸ-ಮದ್ಯ ಶೇ.51.8, ಕೃಷಿ ಉತ್ಪನ್ನ-ತಿನಿಸು ಶೇ.29.9 ಹಾಗೂ ಕರಕುಶಲ ವಸ್ತುಗಳಿಗೆ ಶೇ.2.7 ಜಿಐ ನೀಡಲಾಗಿದೆ. ಕರ್ನಾಟಕದಲ್ಲಿ ಕರಕುಶಲ ವಸ್ತು ಶೇ.45 ಹಾಗೂ ಕೃಷಿ ಉತ್ಪನ್ನಗಳು ಶೇ.30ರಷ್ಟು ಜಿಐ ಪಡೆದುಕೊಂಡಿವೆ. ಜಿಐಗಳನ್ನು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ)ದ ಟ್ರಿಪ್ಸ್(ವ್ಯಾಪಾರ ಸಂಬಂಧಿ ಬೌದ್ಧಿಕ ಆಸ್ತಿ ಹಕ್ಕುಗಳು) ಒಪ್ಪಂದದಡಿ ನಿರ್ವಹಿಸಲಾಗುತ್ತದೆ. ಒಪ್ಪಂದದ ವಿಧಿ 22(1) ಪ್ರಕಾರ, ಜಿಐ ಎಂದರೆ ʻಉತ್ಪನ್ನದ ಭೌಗೋಳಿಕ ಮೂಲವನ್ನು ಪ್ರತಿನಿಧಿಸುವ ವಿಶಿಷ್ಟ ಗುಣʼ.
ಯುರೋಪಿಯನ್ ರಾಷ್ಟ್ರಗಳಲ್ಲಿ ಜಿಐಗಳನ್ನು ಎರಡು ವಿಧವಾಗಿ ವರ್ಗೀಕರಿಸಲಾಗುತ್ತದೆ- ಸಂರಕ್ಷಿತ ಜಿಐ(ಪಿಜಿಐ) ಹಾಗೂ ಮೂಲಸ್ಥಳದಲ್ಲಿ ಸಂರಕ್ಷಣೆ (ಪ್ರೊಟೆಕ್ಟೆಡ್ ಡೆಸ್ಟಿನೇಷನ್ ಆಫ್ ಆರಿಜಿನ್, ಪಿಡಿಒ). ಭಾರತದಲ್ಲಿರುವುದು ಪಿಜಿಐ ಮಾತ್ರ. ಬೇರೆ ದೇಶಗಳಿಗೆ ಹೋಲಿಸಿದರೆ, ಜಿಐ ನೋಂದಣಿಯಲ್ಲಿ ಭಾರತ ಹಿಂದೆ ಉಳಿದಿದೆ. ಕೇಂದ್ರ ವಾಣಿಜ್ಯ ಮಂತ್ರಾಲಯದ ಪೇಟೆಂಟ್ಸ್, ಡಿಸೈನ್ಸ್ ಮತ್ತು ಟ್ರೇಡ್‌ಮಾರ್ಕ್‌ಗಳ ಮಹಾನಿಯಂತ್ರಕರ ನಿಯಂತ್ರಣದಲ್ಲಿರುವ ಇಂಟೆಲೆಕ್ಚುಯಲ್ ಪ್ರಾಪರ್ಟಿ ಆಫ್ ಇಂಡಿಯಾದಡಿ ಜಿಐ ಬರುತ್ತದೆ. ಈ ಕಚೇರಿ ಪೇಟೆಂಟ್, ವಿನ್ಯಾಸ ಮತ್ತು ಟ್ರೇಡ್‌ಮಾರ್ಕ್‌ಗೆ ಹೆಚ್ಚು ಗಮನ ನೀಡುತ್ತದೆ. ಡಿಸೆಂಬರ್ 2023ರ ಜಿಐ ರಿಜಿಸ್ಟ್ರಿ ಮಾಹಿತಿ ಪ್ರಕಾರ, ಇಂಟೆಲೆಕ್ಚುಯಲ್ ಪ್ರಾಪರ್ಟಿ ಇಂಡಿಯಾ ಸ್ವೀಕರಿಸಿದ್ದು 1,167 ಜಿಐ ಅರ್ಜಿ ಮಾತ್ರ: ಇದರಲ್ಲಿ 547 ಉತ್ಪನ್ನಗಳು ನೋಂದಣಿಯಾಗಿವೆ. ಕಾಯಿದೆ ಕಠಿಣವಾಗಿರುವುದರಿಂದ, ಅಂಗೀಕಾರ್ಹತೆ ಕಡಿಮೆಯಿದೆ. ಇದರಿಂದಾಗಿ, ಆಲ್ಫಾನ್ಸೋ ಮಾವಿನ ಹಣ್ಣಿಗೆ ಜಿಐ ಸಿಗಲು 10 ವರ್ಷ ಬೇಕಾಯಿತು. ಬಾಸ್ಮತಿ ಅಕ್ಕಿಯ ಜಿಐಗೆ ಪಾಕಿಸ್ತಾನ ಪ್ರಯತ್ನಿಸುತ್ತಿದ್ದು, ಯುರೋಪಿಯನ್ ಯೂನಿಯನ್ ಆ ದೇಶವನ್ನು ಬೆಂಬಲಿಸುತ್ತಿದೆ.
ಕರ್ನಾಟಕದಲ್ಲಿರುವ ಜಿಐ ವಿವರ: ಉತ್ಪನ್ನಗಳಲ್ಲದೆ ಲಾಂಛನ(ಲೋಗೋ)ಗಳಿಗೂ ಜಿಐ ನೀಡಲಾಗುತ್ತದೆ. ಉದಾಹರಣೆಗೆ, ಮೈಸೂರು ಸಿಲ್ಕ್.
ಉತ್ಪನ್ನಗಳು-ಮೈಸೂರು ಅಗರಬತ್ತಿ, ಶ್ರೀಗಂಧದೆಣ್ಣೆ, ಸ್ಯಾಂಡಲ್ ಸೋಪು.
ಕರಕುಶಲ ಕಲೆ- ಬಿದರಿ ಕಲೆ, ಚನ್ನಪಟ್ಟಣದ ಗೊಂಬೆ-ಆಟಿಕೆಗಳು, ಮೈಸೂರು ಬಾಗೆ ಮರದ ಕೆತ್ತನೆ ಕಲೆ, ಕಸೂತಿ ಕಲೆ, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಮೈಸೂರು ರೇಷ್ಮೆ(ಲಾಂಛನ), ಇಳಕಲ್/ಮೊಳಕಾಲ್ಮೂರು/ಉಡುಪಿ ಸೀರೆ, ಗಂಜೀಫಾ ಕಾರ್ಡ್ ಮತ್ತು ಲಾಂಛನ, ನವಲಗುಂದ ಜಮಖಾನ ಮತ್ತು ಲಾಂಛನ, ಕರ್ನಾಟಕದ ಕಂಚಿನ ಪರಿಕರಗಳು ಮತ್ತು ಲಾಂಛನ, ಸಂಡೂರು ಲಂಬಾಣಿ ಕಸೂತಿ ಕಲೆ, ಕಿನ್ಹಾಳದ ಗೊಂಬೆಗಳು, ಗುಳೇದಗುಡ್ಡ ರವಿಕೆ ಕಣ, ಕೊಲ್ಹಾಪುರ ಚಪ್ಪಲಿ
ಕೃಷಿ ಉತ್ಪನ್ನಗಳು-ಕೊಡಗಿನ ಕಿತ್ತಳೆ, ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ, ಕಮಲಾಪುರದ ಕೆಂಪು ಬಾಳೆ, ಮೈಸೂರು/ಉಡುಪಿ/ಹಡಗಲಿ ಮಲ್ಲಿಗೆ, ಮಲಬಾರ್ ಅರೇಬಿಕಾ/ಮಲಬಾರ್ ರೊಬಸ್ಟಾ/ಚಿಕ್ಕಮಗಳೂರು ಅರೇಬಿಕಾ/ಬಾಬಾಬುಡನ್ ಗಿರಿ ಅರೇಬಿಕಾ/ಕೂರ್ಗ್ ಅರೇಬಿಕಾ ಕಾಫಿ, ಕೊಡಗಿನ ಹಸಿರು ಏಲಕ್ಕಿ, ದೇವನಹಳ್ಳಿ ಚಕ್ಕೋತ, ಬ್ಯಾಡಗಿ ಮೆಣಸಿನಕಾಯಿ(ಸಂಖ್ಯೆ 129,2011), ಉಡುಪಿ ಮಟ್ಟುಗುಳ್ಳ ಬದನೆ, ಬೆಂಗಳೂರು ನೀಲಿ ದ್ರಾಕ್ಷಿ, ಬೆಂಗಳೂರು ರೋಸ್ ಈರುಳ್ಳಿ, ಗುಲ್ಬರ್ಗದ ತೊಗರಿ ಬೇಳೆ(ಗುಲ್ಸಾಳ, ಚಪ್ಲೆ ಮತ್ತು ಬೆನ್ನೂರ್ ಲೋಕಲ್, ಆಗಸ್ಟ್ 14,2019).
ಜಿಐಯಿಂದ ಉತ್ಪಾದಕರಿಗೆ ಲಾಭವಾಗುತ್ತಿಲ್ಲ: ಆದರೆ, ಜಿಐ ಪ್ರಮಾಣಪತ್ರದಿಂದ ಉತ್ಪಾದಕರಿಗೆ ಪ್ರಯೋಜನ ಆಗುತ್ತಿಲ್ಲ. ಜಿಐ ಬಗ್ಗೆ ಗ್ರಾಹಕರು-ಉತ್ಪಾದಕರಲ್ಲಿ ಜಾಗೃತಿ ಇಲ್ಲದೆ ಇರುವುದು ಇದಕ್ಕೆ ಕಾರಣ.
ಜಿಐ ನೋಂದಣಿ ಮತ್ತು ನೋಂದಣಿ ಬಳಿಕ ಉತ್ಪಾದಕರಿಗೆ ಆರ್ಥಿಕ ಲಾಭ ಆಗಬೇಕಿದೆ. ಉತ್ಪನ್ನಗಳ ಬಗ್ಗೆ ಗ್ರಾಹಕರು-ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೆ ಮಾತ್ರ ಇಂಥ ಲಾಭ ದಕ್ಕುತ್ತದೆ. ಹೆಚ್ಚಿನ ಜಿಐ ಉತ್ಪನ್ನಗಳ ಬಗ್ಗೆ ಸ್ಥಳೀಯರಿಗೆ ಏನೇನೂ ಗೊತ್ತಿಲ್ಲ. ಅರಿವು ಮೂಡಿಸಲು ಸರ್ಕಾರ-ಸಂಸ್ಥೆಗಳು ಏನೇನೂ ಕ್ರಮ ಕೈಗೊಂಡಿಲ್ಲ. ʻನವಲಗುಂದದ ಜಮಖಾನ ಜಿಐ ಪ್ರಮಾಣಪತ್ರ ಪಡೆದಿದೆ. ಆದರೆ ಈ ಬಗ್ಗೆ ಜನರಿಗೇ ಏನೇನೂ ಗೊತ್ತಿಲ್ಲʼ ಎನ್ನುತ್ತಾರೆ ಪತ್ರಕರ್ತ-ಸಂಶೋಧಕ ಮಂಜುನಾಥ ನವಲಗುಂದ. ʻಆರಾಮದಾಯಕ ಭಾವನೆ ಮೂಡಿಸುವ ಈ ಜಮಖಾನಗಳನ್ನು ಹತ್ತಿಯಿಂದ, ಸ್ವಾಭಾವಿಕ ಬಣ್ಣಗಳನ್ನು ಬಳಸಿ ತಯಾರಿಸುತ್ತಾರೆ. ಜಿಐ ಮಾನ್ಯತೆಯಿಂದ ಇಲ್ಲಿನ ಉತ್ಪಾದಕರಿಗೆ ಯಾವುದೇ ಲಾಭವಾಗಿಲ್ಲ. ಅಷ್ಟು ಮಾತ್ರವಲ್ಲ; ಜನರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಜಮಖಾನವನ್ನು ಹೇಗೆ ನೇಯುತ್ತಾರೆ, ಅದರ ವೈಶಿಷ್ಟ್ಯ ಏನು ಎಂಬ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಹೊಸ ಪೀಳಿಗೆ ಸಾಂಪ್ರದಾಯಿಕ ಉದ್ಯೋಗಗಳನ್ನು ತೊರೆಯುತ್ತಿದ್ದು, ಇಂಥ ಸಂದರ್ಭದಲ್ಲಿ ನೇಯ್ಗೆಯಿಂದ ಆರ್ಥಕ ಸ್ವಾವಲಂಬನೆ ಸಾಧ್ಯವಿದೆ ಎಂದು ಸಾಬೀತಾದಲ್ಲಿ ಈ ಉದ್ದಿಮೆ ಉಳಿಯುತ್ತದೆʼ ಎಂದವರು ಹೇಳುತ್ತಾರೆ.
ಚನ್ನಪಟ್ಟಣದ ಗೊಂಬೆಗಳದ್ದೂ ಇದೇ ಕಥೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಿಂದ ಚನ್ನಪಟ್ಟಣದ ಬೊಂಬೆ ತಯಾರಕರು ಹಿನ್ನಡೆ ಅನುಭವಿಸುತ್ತಿದ್ದಾರೆ. ಆದರೆ, ಆನ್‌ಲೈನ್ ಮೂಲಕ ಬೊಂಬೆ ವ್ಯಾಪಾರ ಮಾಡುತ್ತಿರುವವರಿಗೆ ಹೆಚ್ಚೇನೂ ಹೊಡೆತ ಬಿದ್ದಿಲ್ಲ. ʻಈ ಗೊಂಬೆ-ಆಟದ ಸಾಮಾನುಗಳಿಗೆ ಜಿಐ ಮಾನ್ಯತೆ ಇದೆ ಎನ್ನುವ ವಿಷಯ ಬಹುತೇಕರಿಗೆ ಗೊತ್ತಿಲ್ಲʼ ಎನ್ನುತ್ತಾರೆ ಸ್ಥಳೀಯರಾದ ಸು.ನಾ.ನಂದಕುಮಾರ್.ʻಚನ್ನಪಟ್ಟಣದ ಗೊಂಬೆ ಉದ್ಯಮ ಅಗ್ಗದ ಚೀನಿ ಗೊಂಬೆಗಳಿಂದ ಪೈಪೋಟಿ ಎದುರಿಸುತ್ತಿದೆ. ಈ ಗೊಂಬೆ-ಆಟದ ಸಾಮಾನುಗಳನ್ನು ಹಾಲೆ ಮರದಿಂದ ತಯಾರಿಸುತ್ತಾರೆ. ಆದರೆ, ಸ್ಥಳೀಯವಾಗಿ ಹಾಲೆ ಮರಗಳ ಲಭ್ಯತೆ ಕಡಿಮೆಯಾಗಿದೆ. ಹೀಗಾಗಿ, ಚಾಮರಾಜನಗರದಿಂದ ಮರ ತರಿಸಲಾಗುತ್ತಿದೆ. ಇದರಿಂದ ತಯಾರಿಕೆ ವೆಚ್ಚ ಹೆಚ್ಚಿದೆʼ ಎನ್ನುತ್ತಾರೆ. ಜಿಐ ಮಾನ್ಯತೆ ಬಗ್ಗೆ ಜನರು-ಉತ್ಪಾದಕರಲ್ಲಿ ಅರಿವು ಮೂಡಿಸಬೇಕಿದೆ ಎನ್ನುವ ಅವರು,ʻ ಅರಗು, ಸ್ವಾಭಾವಿಕ ಬಣ್ಣ, ಬೀಟ್ರೂಟ್ ಮತ್ತಿತರ ರಸವನ್ನು ಬಳಸುವುದರಿಂದ ಈ ಬೊಂಬೆಗಳು ದೀರ್ಘಕಾಲ ತಮ್ಮ ಹೊಳಪು ಉಳಿಸಿಕೊಳ್ಳುತ್ತವೆ. ನರೇಗಾದಡಿ ಹಾಲೆ ಮರ ಬೆಳೆಸುವ ಯೋಜನೆ ರೂಪಿಸಲಾಗಿದೆ. ಆದರೆ, ಚನ್ನಪಟ್ಟಣದ ಬೊಂಬೆಗಳ ವೈಶಿಷ್ಟ್ಯ, ಜಿಐ ಬಗ್ಗೆ ಸಾಮಾಜಿಕ ಮಾಧ್ಯಮ-ಜಾಹೀರಾತುಗಳಿಂದ ಅರಿವು ಮೂಡಿಸಿದಲ್ಲಿ ಸ್ಥಳೀಯ ಉತ್ಪಾದಕರು ಬದುಕಿಕೊಳ್ಳುತ್ತಾರೆ. ಈ ಪರಂಪರೆ ಉಳಿದುಕೊಳ್ಳುತ್ತದೆʼ ಎಂದವರು ಹೇಳುತ್ತಾರೆ. ಪೂರಕ ಸಾಂಸ್ಥಿಕ ಸಂರಚನೆಗಳು ಅಭಿವೃದ್ಧಿಯಾಗಬೇಕಿದೆ. ʻಉತ್ಪಾದಕರುʼ ಎಂದರೆ ಯಾರು ಎಂಬ ವ್ಯಾಖ್ಯಾನ ಸ್ಪಷ್ಟವಾಗಿಲ್ಲ. ಇದರಿಂದ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ.
ಕಾಯಿದೆಗೆ 20 ವರ್ಷ: ಜಿಐ ಕಾಯಿದೆ ದೇಶದಲ್ಲಿ ಸೆಪ್ಟೆಂಬರ್ 15,2003 ರಿಂದ ಜಾರಿಗೊಂಡಿದ್ದು, 20 ವರ್ಷ ಕಳೆದಿದೆ. ಜಿಐ ಅರ್ಜಿ ಸ್ವರೂಪ ಮತ್ತು ಪರಿಷ್ಕರಣೆ ಅವಧಿಗೆ ಸಂಬಂಧಿಸಿದಂತೆ, ಬದಲಾವಣೆಗಳು ಆಗಬೇಕಿದೆ. ಇದಕ್ಕೆ ಅನುಗುಣವಾಗಿ ಸಾಂಸ್ಥಿಕ ಸಂರಚನೆಗಳನ್ನು ರೂಪಿಸಬೇಕು. ಪೇಟೆಂಟ್, ಟ್ರೇಡ್‌ಮಾರ್ಕ್ ಮತ್ತು ಕಾಪಿರೈಟ್‌ಗೆ ಹೋಲಿಸಿದರೆ, ಜಿಐಗೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿಲ್ಲ. ಡಬ್ಲ್ಯುಟಿಒದ 22 ವಾರ್ಷಿಕ ವರದಿಗಳ ವಿಶ್ಲೇಷಣೆ ಪ್ರಕಾರ, ದೇಶಗಳು ಜಿಐಗಳ ರಾಷ್ಟ್ರೀಯ ರಿಜಿಸ್ಟರ್(ಜಿಯಾಗ್ರಫಿಕಲ್ ಇಂಡಿಕೇಷನ್ ರಿಜಿಸ್ಟ್ರಿ) ನಿರ್ವಹಣೆಗೆ ಹೆಚ್ಚು ಗಮನ ನೀಡುತ್ತಿವೆಯೇ ಹೊರತು, ಜಿಐಗಳ ನೋಂದಣಿಗೆ ಹಾಗೂ ದ್ವಿಪಕ್ಷೀಯ ಒಪ್ಪಂದಗಳನ್ನು ಉತ್ತೇಜಿಸಲು ಆದ್ಯತೆ ಕೊಟ್ಟಿಲ್ಲ. ಗ್ರಾಹ ಕರು ಹಾಗೂ ಉತ್ಪಾದಕರ ಹಿತಾಸಕ್ತಿಗಳನ್ನು ಕಾಯ್ದುಕೊಂಡು, ಭಾಗಿದಾರ ದೇಶಗಳೊಂದಿಗೆ ಜಿಐಗಳನ್ನು ಉತ್ತೇಜಿಸಬೇಕಿದೆ.
ಜಿಐ ಸಾಂಪ್ರದಾಯಿಕ ಜ್ಞಾನ, ಕರಕುಶಲತೆ, ಸಂಸ್ಕೃತಿಯನ್ನು ರಕ್ಷಿಸಲು ಬಳಸಬಹುದಾದ ಪರಿಣಾಮಕಾರಿ ಸಾಧನ. ಇದರಿಂದ, ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬಹುದು. ಆದರೆ, ಉತ್ಪಾದಕರ ಆದಾಯವನ್ನು ಉತ್ತೇಜಕ ಉಪಕ್ರಮಗಳ ಮೂಲಕ ಹೆಚ್ಚಿಸಬೇಕಿದೆ. ಇದಕ್ಕೆ ಮಾಡಬೇಕಿರುವುದೇನೆಂದರೆ,
* ಜಿಐಗಳ ಉತ್ಪಾದಕರಿಗೆ ನೇರವಾಗಿ ಲಾಭ ಸಿಗಬೇಕು. ಉತ್ಪಾದಕರು-ಕಾರ್ಮಿಕರಲ್ಲಿ ತಂತ್ರಜ್ಞಾನದ ಬಳಕೆ, ಕೌಶಲ ನಿರ್ಮಾಣ ಮತ್ತು ಡಿಜಿಟಲ್ ಸಾಕ್ಷರತೆಯನ್ನು ಬೆಳೆಸಬೇಕು.
* ಕೇಂದ್ರ ಸರ್ಕಾರದ ʻಒಂದು ಜಿಲ್ಲೆ-ಒಂದು ಉತ್ಪನ್ನʼ ಉಪಕ್ರಮವನ್ನು ಜಿಐಯೊಡನೆ ಏಕತ್ರಗೊಳಿಸಬೇಕು.
* ಕೃಷಿ ಉತ್ಪನ್ನಗಳ ಆನ್‌ಲೈನ್ ವೇದಿಕೆ ಇ-ನಾಮ್ ನಲ್ಲಿ ಜಿಐ ಉತ್ಪನ್ನಗಳಿಗೆ ಪ್ರತ್ಯೇಕ ಸ್ಥಳ ಒದಗಿಸಿದರೆ, ಗ್ರಾಹಕರು-ಉತ್ಪಾದಕರ ಮುಖಾಮುಖಿಗೆ ಅವಕಾಶ ಕಲ್ಪಿಸಿದಂತೆ ಆಗಲಿದೆ. ʻವೋಕಲ್ ಫಾರ್ ಲೋಕಲ್ʼ ಉಪಕ್ರಮದಲ್ಲಿ ಕೂಡ ಜಿಐಗಳಿಗೆ ಉತ್ತೇಜನ ನೀಡಬಹುದು.
* ಜಿಐ ಉತ್ಪನ್ನಗಳ ಮಾರುಕಟ್ಟೆ-ಬ್ರಾಂಡಿಂಗ್ ಆಗಬೇಕಿದೆ. ಪ್ರವಾಸಿಗಳು ಹೆಚ್ಚು ಭೇಟಿ ನೀಡುವ ಜಾತ್ರೆ-ಮೇಳ-ಉತ್ಸವಗಳಲ್ಲಿ ಜಿಐ ಉತ್ಪನ್ನಗಳ ಪ್ರದರ್ಶನಕ್ಕೆ ಅವಕಾಶ ನೀಡಿದರೆ, ಉತ್ಪಾದಕರಿಗೆ ಅನುಕೂಲ ಆಗಲಿದೆ; ಉತ್ಪನ್ನಗಳು ಕಣ್ಣಿಗೆ ಬೀಳಲಿವೆ.
* ಪ್ರಯೋಗಾಲಯಗಳ ಸ್ಥಾಪನೆ ಮೂಲಕ ಜಿಐ ಉತ್ಪನ್ನಗಳ ಗುಣಮಟ್ಟ ಖಾತ್ರಿಗೊಳಿಸಬೇಕಿದೆ.
* ಜಿಐ ಅಡಿ ಇನ್ನಷ್ಟು ಉತ್ಪನ್ನಗಳನ್ನು ತರಬೇಕಿದೆ. ಉತ್ಪಾದಕರಿಗೆ ಸಬ್ಸಿಡಿ ಮತ್ತು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮೇಳಗಳಲ್ಲಿ ಉತ್ತೇಜನ ನೀಡಬೇಕಿದೆ.
ರಾಜ್ಯದ ಮಸಾಲೆ ದೋಸೆ ಕಥೆ ಏನು? ಮೈಸೂರು ಪಾಕ್? ದಾವಣಗೆರೆ ಬೆಣ್ಣೆ ದೋಸೆ, ಬೆಳಗಾವಿ ಕುಂದ, ಗೋಕಾಕದ ಕರದಂಟು, ಗದಗದ ಕೌದಿಗೆ ಜಿಐ ಮಾನ್ಯತೆ ಸಿಗಬೇಕಿದೆ. ಈಮೂಲಕ ಸ್ಥಳೀಯ ತಿನಿಸುಗಳನ್ನು ಜಾಗತಿಕ ಮಟ್ಟಕ್ಕೆ ಏರಿಸಬಹುದು: ಸ್ಥಳೀಯ ಆರ್ಥಿಕತೆಗೆ ಪ್ರೇರಣೆ ನೀಡಬಹುದು ಮತ್ತು ಉದ್ಯೋಗಾವಕಾಶ ಸೃಷ್ಟಿಸಬಹುದು. ವಿದ್ಯಾವಂತ ಯುವಜನರ ವಲಸೆಯನ್ನು ತಡೆಯಬಹುದು. ಇಲ್ಲವಾದಲ್ಲಿ ಅಪಾರ ಜೀವವೈವಿಧ್ಯವಿರುವ ದೇಶದ ಸ್ವಾಭಾವಿಕ-ಮಾನವ ಸಂಪನ್ಮೂಲ ವ್ಯರ್ಥವಾಗಲಿದೆ. ನಂದಕುಮಾರ್ ಮತ್ತು ಮಂಜುನಾಥ್ ಹೇಳಿದಂತೆ, ಜಿಐ ಉತ್ಪನ್ನಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕಿದೆ. ಈ ಉತ್ನನ್ನಗಳು ನಮ್ಮ ಹೆಮ್ಮೆ ಮತ್ತು ಇವುಗಳಿಂದ ಆರ್ಥಿಕ ಲಾಭವೂ ಇದೆ ಎಂಬ ಜಾಗೃತಿ ಮೂಡಿಸಿದಲ್ಲಿ, ಇಂಥ ಉತ್ಪನ್ನಗಳಿಗೆ ಭವಿಷ್ಯವಿದೆ; ಉತ್ಪಾದಕರಿಗೂ ಲಾಭ ಆಗಲಿದೆ.