ರಾಮೇಶ್ವರಂ ಕೆಫೆ ಮೇಲೆ ಆಹಾರ ಇಲಾಖೆ ದಾಳಿ: ಅವಧಿ ಮುಗಿದ ಆಹಾರ ಸಾಮಗ್ರಿ ಪತ್ತೆ
ಆಹಾರ ಸುರಕ್ಷತಾ ಇಲಾಖೆ ಪ್ರಕಾರ ಅಡುಗೆಮನೆಯಲ್ಲಿ ಅವಧಿ ಮುಗಿದ 100 ಕೆ.ಜಿ ಉದ್ದಿನ ಬೇಳೆ, 10 ಕೆಜಿ ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲು ಪತ್ತೆಯಾಗಿದೆ.;
ದಕ್ಷಿಣ ಭಾರತದ ಊಟ-ತಿನಿಸುಗಳಿಗೆ ಜನಪ್ರಿಯವಾಗಿರುವ ಬೆಂಗಳೂರು ಮೂಲದ ರಾಮೇಶ್ವರಂ ಕೆಫೆಯ ಹೈದರಾಬಾದ್ ಶಾಖೆಯ ಮೇಲೆ ತೆಲಂಗಾಣ ಆಹಾರ ಇಲಾಖೆಯ ಅಧಿಕಾರಿಗಳು ಗುರುವಾರ (ಮೇ 23) ದಾಳಿ ನಡೆಸಿದ್ದು, ರೆಸ್ಟೋರೆಂಟ್‌ನಲ್ಲಿ ಅವಧಿ ಮೀರಿದ ಮತ್ತು ಲೇಬಲ್ ಮಾಡದ ಆಹಾರ ಪದಾರ್ಥಗಳು ಭಾರೀ ಪ್ರಮಾಣದಲ್ಲಿ ಪತ್ತೆಯಾಗಿವೆ.
ಆಹಾರ ಸುರಕ್ಷತಾ ಇಲಾಖೆ ಪ್ರಕಾರ ಅವಧಿ ಮುಗಿದ 16,000 ರೂ ಮೌಲ್ಯದ 100 ಕೆ.ಜಿ ಉದ್ದಿನ ಬೇಳೆ, 10 ಕೆಜಿ ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲನ್ನು ರೆಸ್ಟೋರೆಂಟಿನ ಅಡುಗೆಮನೆಯಿಂದ ವಶಕ್ಕೆ ಪಡೆಯಲಾಗಿದೆ. ಬ್ರಾಂಡ್ ಲೇಬಲ್ ಇಲ್ಲದ ಕೆಲವು ಆಹಾರ ಸಾಮಗ್ರಿಗಳನ್ನೂ ಕೂಡ ಈ ದಾಳಿ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 450 ಕೆ.ಜಿ ಅಕ್ಕಿ, 300 ಕೆಜಿ ಲೇಬಲ್ ಮಾಡದ ಬೆಲ್ಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ. ಈ ಮಧ್ಯೆ, ಅಡುಗೆ ಮಾಡುವವರ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವನ್ನು ಸಲ್ಲಿಸಲಾಗಿಲ್ಲ ಮತ್ತು ಕಸದ ಬುಟ್ಟಿಗಳನ್ನು ಮುಚ್ಚಳಗಳಿಂದ ಮುಚ್ಚಲಾಗಿಲ್ಲ ಎಂದೂ ಅಧಿಕಾರಿಗಳು ಇಲಾಖೆಯ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಹೈದರಾಬಾದ್ನ ಅನೇಕ ಸ್ಥಳಗಳಲ್ಲಿ ಗುರುವಾರ ದಾಳಿ ನಡೆಸಿದ್ದರು. ಆ ದಾಳಿ ವೇಳೆ ನಗರದ ಹಲವು ಜನಪ್ರಿಯ ತಿನಿಸು ಅಂಗಡಿಗಳಲ್ಲಿ ನೈರ್ಮಲ್ಯ ಮಾನದಂಡಗಳನ್ನು ಗಾಳಿಗೆ ತೂರಿರುವುದು ಕಂಡುಬಂದಿತ್ತು.
ಅದೇ ದಿನ, ಬಾಹುಬಲಿ ಕಿಚನ್ ಎಂಬ ರೆಸ್ಟೋರೆಂಟ್ ಮೇಲೂ ದಾಳಿ ನಡೆಸಲಾಗಿದೆ. ಅಲ್ಲಿ ಸಂಗ್ರಹಿಸಿದ ಆಹಾರ ಪದಾರ್ಥಗಳಲ್ಲಿ ಜಿರಳೆಗಳು ಕಂಡುಬಂದಿದ್ದವು. ರೆಸ್ಟೋರೆಂಟ್ನ ಅಡುಗೆಮನೆಯ ಆವರಣವು ತುಂಬಾ ಕೊಳಕು ಸ್ಥಿತಿಯಲ್ಲಿ ಕಂಡುಬಂದಿದ್ದು, ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ ಈ ವರ್ಷದ ಜನವರಿಯಲ್ಲಿ ಹೈದರಾಬಾದ್ನ ಮಾಧಾಪುರದಲ್ಲಿ ತಮ್ಮ ಹೊಸ ಶಾಖೆಯನ್ನು ತೆರೆದಿದ್ದು, ಈ ಕೆಫೆ ದಕ್ಷಿಣ ಭಾರತದ ಜನಪ್ರಿಯ ಇಡ್ಲಿ ದೋಸೆಗಳಿಗೆ ಹೆಸರುವಾಸಿಯಾಗಿದೆ.
ಬಾಂಬ್ ಸ್ಫೋಟ ಪ್ರಕರಣ
ಮಾರ್ಚ್ 1 ರಂದು ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಸಂಭವಿಸಿದ್ದು, ರಾಷ್ಟ್ರ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ಈ ಸ್ಪೋಟದಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದರು. ಈ ಪ್ರಕರಣದ ಕುರಿತು ಎನ್‌ಐಎ ತನಿಖೆ ನಡೆಯುತ್ತಿದ್ದ ಈವರೆಗೆ ಹಲವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಬೆಂಗಳೂರಿನ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಬಾಂಬ್ ದಾಳಿ ಪ್ರಕರಣದ ಮೂಲಕ ರಾಮೇಶ್ವರಂ ಕೆಫೆ ದೇಶ್ಯಾದ್ಯಂತ ಭಾರೀ ಚರ್ಚೆಗೆ ಒಳಗಾಗಿತ್ತು.