ಕೇಜ್ರಿವಾಲ್‌ ಜಾಮೀನು ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

ಅರವಿಂದ್ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿಯನ್ನು ಜುಲೈ 29ರಂದು ಹೈಕೋರ್ಟ್ ಪಟ್ಟಿ ಮಾಡಿದೆ.

Update: 2024-07-17 11:07 GMT

ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐನಿಂದ ತಮ್ಮ ಬಂಧನವನ್ನು ಪ್ರಶ್ನಿಸಿ ಮತ್ತು ಮಧ್ಯಂತರ ಜಾಮೀನು ಕೋರಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿಗಳ ತೀರ್ಪನ್ನು ದೆಹಲಿ ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ.

ಕೇಜ್ರಿವಾಲ್‌ ಅವರನ್ನು ಸಿಬಿಐ ಬಂಧಿಸಿರುವುದನ್ನು ಖಂಡಿಸಿದ ವಕೀಲರು, ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿದರು.

ಮೊಹರಂ ನಿಮಿತ್ತ ರಜೆಯಿದ್ದರೂ ವಿಚಾರಣೆ ನಡೆಸಿದ ನ್ಯಾ.ನೀನಾ ಬನ್ಸಾಲ್ ಕೃಷ್ಣ ಅವರು ಕೇಜ್ರಿವಾಲ್ ಮತ್ತು ಸಿಬಿಐ ವಕೀಲರ ವಾದವನ್ನು ಆಲಿಸಿ, ಆದೇಶವನ್ನು ಕಾಯ್ದಿರಿಸಿದರು. ನ್ಯಾಯಾಲಯ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿಯನ್ನು ಜುಲೈ 29 ರಂದು ಪಟ್ಟಿ ಮಾಡಿದೆ.

ಕೇಜ್ರಿವಾಲ್‌ ಪರ ವಕೀಲ ಅಭಿಷೇಕ್ ಸಿಂಘ್ವಿ, ದೆಹಲಿ ಸಿಎಂ ಜೈಲಿನಿಂದ ಹೊರಬರುವುದನ್ನು ತಡೆಯಲು ಸಿಬಿಐ ಅವರನ್ನು ಬಂಧಿಸಿದೆ ಎಂದು ಹೇಳಿದರು.

ʻ3 ಇಡಿ ಪ್ರಕರಣಗಳಲ್ಲಿ ನಾನು ಬಿಡುಗಡೆ ಆದೇಶ ಪಡೆದಿದ್ದೇನೆ. ಈ ಆದೇಶಗಳು ಅವರು ಬಿಡುಗಡೆಗೆ ಅರ್ಹರೆಂದು ತೋರಿಸುತ್ತವೆ. ಅವರನ್ನು ಬಿಡುಗಡೆ ಮಾಡಬಹುದಿತ್ತು. ಅವರು ಭಯೋತ್ಪಾದಕರಲ್ಲ. ದೆಹಲಿಯ ಮುಖ್ಯಮಂತ್ರಿ. ಅವರ ಬಂಧನ ಕಾನೂನಿಗೆ ಅನುಗುಣವಾಗಿಲ್ಲ ಮತ್ತು ಅವರು ಮುಖ್ಯಮಂತ್ರಿಯಾಗಿರುವುದರಿಂದ ಜಾಮೀನು ಪಡೆಯಲು ಅರ್ಹರು,ʼ ಎಂದು ಹೇಳಿದರು.

ಸಿಬಿಐ ಪರ ವಕೀಲ ಡಿ.ಪಿ. ಸಿಂಗ್ ಅವರು ಕೇಜ್ರಿವಾಲ್ ಅವರ ಎರಡು ಮನವಿಗಳನ್ನು ವಿರೋಧಿಸಿದರು. ಬಂಧನವನ್ನು ʻವಿಮಾ ಬಂಧನʼ ಎಂದು ಕರೆಯುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದರು.

ಕೇಜ್ರಿವಾಲ್ ಅವರನ್ನು ಜೂನ್ 26 ರಂದು ತಿಹಾರ್ ಜೈಲಿನಿಂದ ಸಿಬಿಐ ಬಂಧಿಸಿತು. ಅವರು ಜಾರಿ ನಿರ್ದೇಶನಾಲಯ ದಾಖಲಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Tags:    

Similar News