Delhi excise scam | ಕೇಜ್ರಿವಾಲ್‌ಗೆ ಸುಪ್ರೀಂ ಜಾಮೀನು

ʻಸಿಬಿಐ ಪಂಜರದ ಗಿಳಿ ಎಂಬ ಕಲ್ಪನೆಯಿದ್ದು, ಅದನ್ನು ಹೋಗಲಾಡಿಸಬೇಕು. ತಾನು ಸ್ವತಂತ್ರ ಗಿಳಿ ಎಂದು ತೋರಿಸಬೇಕು. ಸೀಸರ್‌ನ ಪತ್ನಿಯಂತೆ ಸಂಶಯಕ್ಕೆ ಹೊರತಾಗಿರಬೇಕು,ʼ ಎಂದು ನ್ಯಾ.ಭುಯಾನ್ ಹೇಳಿದರು.

Update: 2024-09-13 06:17 GMT

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಸೆಪ್ಟೆಂಬರ್ 13) ಜಾಮೀನು ನೀಡಿದೆ. ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಿಬಿಐ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿತ್ತು.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠ 10 ಲಕ್ಷ ರೂ. ಜಾಮೀನು ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ನೀಡಬೇಕೆಂದು ಆದೇಶಿಸಿತು. ಪ್ರಕರಣದ ಅರ್ಹತೆ ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆ ನೀಡಬಾರದು ಎಂದು ಸುಪ್ರೀಂ ಕೇಜ್ರಿವಾಲ್‌ಗೆ ಸೂಚಿಸಿದೆ. ʻಕೇಜ್ರಿವಾಲ್ ಜಾಮೀನು ಮಂಜೂರು ಮಾಡಲು ವಿಧಿಸಿದ ಮೂರು ಷರತ್ತುಗಳನ್ನು ಪೂರೈಸಿದ್ದಾರೆ,ʼ ಎಂದು ಪೀಠ ಹೇಳಿದೆ. 

ನ್ಯಾ. ಭುಯಾನ್ ಅವರು ಸಿಬಿಐ ವಿರುದ್ಧ ಕೆಲವು ಕಠಿಣ ಟೀಕೆ ಮಾಡಿದ್ದಾರೆ. ʻಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ನೀಡಿದ ಜಾಮೀನನ್ನು ವಿಫಲಗೊಳಿಗೊಳಿಸಲುʼ ಸಿಬಿಐ ಕೇಜ್ರಿವಾಲ್ ಅವರನ್ನು ಬಂಧಿಸಿದೆʼ ಎಂದು ಹೇಳಿದ್ದಾರೆ. 

ಸಿಬಿಐಗೆ ಸುಪ್ರೀಂ ಟೀಕೆ: ʻಸಿಬಿಐ ಪ್ರಭಾವಗಳಿಗೆ ಈಡಾಗಬಾರದು ಮತ್ತು ಬಂಧನಕ್ಕೆ ಬೇರೆ ಕಾರಣಗಳಿವೆ ಎಂಬ ಅನುಮಾನ ಬಾರದಂತೆ ಎಲ್ಲ ಪ್ರಯತ್ನ ಮಾಡಬೇಕು. ದೇಶವೊಂದರಲ್ಲಿ ದೃಷ್ಟಿಕೋನಗಳು ಮುಖ್ಯವಾಗಲಿವೆ ಮತ್ತು ಸಿಬಿಐ ಪಂಜರದ ಗಿಳಿ ಎಂಬ ಕಲ್ಪನೆಯನ್ನು ಹೋಗಲಾಡಿಸಬೇಕು ಮತ್ತು ತಾನು ಸ್ವತಂತ್ರವಾಗಿರುವ ಗಿಳಿ ಎಂದು ತೋರಿಸಬೇಕು. ಸಿಬಿಐ ಸೀಸರ್‌ನ ಪತ್ನಿಯಂತೆ ಸಂಶಯಕ್ಕೆ ಹೊರತಾಗಿರಬೇಕು, ʼಎಂದು ನ್ಯಾ.ಭುಯಾನ್ ಹೇಳಿದರು.

ʻಬಂಧನದ ಅಗತ್ಯಕ್ಕೆ ಸಂಬಂಧಿಸಿದಂತೆ, ಸಿಬಿಐನಿಂದ ಬಂಧನವು ಅದು ಉತ್ತರಿಸುವುದಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ! ಸಿಬಿಐ ಮಾರ್ಚ್ 2023 ರಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಆಗ ಅವರನ್ನು ಬಂಧಿಸಲಿಲ್ಲ; ನ್ಯಾಯಾಲಯ ಇಡಿ ಪ್ರಕರಣದಲ್ಲಿ ಜಾಮೀನು ನೀಡಿದ ನಂತರ ಬಂಧಿಸಿತು. ಸಿಬಿಐ ಅವರನ್ನು ಬಂಧಿಸಿದ ಸಮಯವು ಗಂಭೀರವಾದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ನೀಡಲಾದ ಜಾಮೀನನ್ನು ವಿಫಲಗೊಳಿಸಲು ಸಿಬಿಐ ಅವರನ್ನು ಬಂಧಿಸಿದೆ,ʼ ಎಂದು ನ್ಯಾ.ಭುಯಾನ್ ಹೇಳಿದರು.

ಎರಡು ಪ್ರತ್ಯೇಕ ಅರ್ಜಿ: ಜಾಮೀನು ನಿರಾಕರಣೆಯನ್ನು ಪ್ರಶ್ನಿಸಿ ಮತ್ತು ಸಿಬಿಐ ತಮ್ಮನ್ನು ಬಂಧಿಸಿರುವುದರ ವಿರುದ್ಧ ಕೇಜ್ರಿವಾಲ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ಮೇಲೆ ತೀರ್ಪನ್ನು ಎಸ್‌ಸಿ ಸೆಪ್ಟೆಂಬರ್ 5 ರಂದು ಕಾಯ್ದಿರಿಸಿತ್ತು.

ಕೇಜ್ರಿವಾಲ್ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಸಿಬಿಐ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌.ವಿ. ರಾಜು ನಡುವೆ ತೀವ್ರ ವಾದ ವಿವಾದ ನಡೆದಿತ್ತು.

ಆಗಸ್ಟ್ 14 ರಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನಿರಾಕರಿಸಿತ್ತು. ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿತ್ತು.

Tags:    

Similar News