ಕೇಜ್ರಿವಾಲ್ ಬಂಧಿಸಿದ ಸಿಬಿಐ; ಸುಪ್ರೀಂನಿಂದ ಜಾಮೀನು ಅರ್ಜಿ ಹಿಂಪಡೆದ ದೆಹಲಿ ಸಿಎಂ

Update: 2024-06-26 08:23 GMT

ಕೇಜ್ರಿವಾಲ್‌ ಅವರನ್ನುವಿಚಾರಣೆಗೆ ಒಳಪಡಿಸಲು ಮತ್ತು ಔಪಚಾರಿಕವಾಗಿ ಕಸ್ಟಡಿಗೆ ತೆಗೆದುಕೊಳ್ಳಲು ರೋಸ್ ಅವೆನ್ಯೂ ನ್ಯಾಯಾಲಯ ಅನುಮತಿ ನೀಡಿದ ನಂತರ, ದೆಹಲಿ ಮುಖ್ಯಮಂತ್ರಿಯನ್ನು ಸಿಬಿಐ ಬುಧವಾರ (ಜೂನ್ 26) ಬಂಧಿಸಿದೆ.

ಬಂಧನದ ನಂತರ ವಿಚಾರಣೆ ನ್ಯಾಯಾಲಯದ ಜಾಮೀನು ಆದೇಶಕ್ಕೆ ಮಧ್ಯಂತರ ತಡೆ ನೀಡಿರುವ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಯನ್ನುದೆಹಲಿ ಸಿಎಂ ಹಿಂಪಡೆದಿದ್ದಾರೆ. 

ಮೇಲ್ಮನವಿ ಸಲ್ಲಿಕೆ: ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್‌.ವಿ.ಎನ್. ಭಟ್ಟಿ ಅವರ ರಜಾಕಾಲದ ಪೀಠವು ಮನವಿಯನ್ನು ಹಿಂಪಡೆಯಲು ಕೇಜ್ರಿವಾಲ್‌ ಅವರಿಗೆ ಅನುಮತಿ ನೀಡಿದೆ. ನ್ಯಾಯಾಲಯ ಜೂನ್ 25 ರಂದು ವಿವರವಾದ ಆದೇಶ ನೀಡಿರುವುದರಿಂದ, ಕೇಜ್ರಿವಾಲ್‌ ಅವರು ಮೇಲ್ಮನವಿ ಸಲ್ಲಿಸಲು ಬಯಸುತ್ತಾರೆ ಎಂದು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಹೇಳಿದರು.

ʻಪ್ರತಿದಿನ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದೆ. ಎಲ್ಲ ಸಂಬಂಧಿತ ವಿವರ ದಾಖಲಿಸಲು ಮತ್ತು ಜಾಮೀನು ಆದೇಶವನ್ನು ತಡೆಹಿಡಿದ ಹೈಕೋರ್ಟಿನ ಜೂನ್ 25 ರ ಆದೇಶವನ್ನು ಪ್ರಶ್ನಿಸಲು ಮೇಲ್ಮನವಿ ಸಲ್ಲಿಸಲು ಬಯಸುತ್ತೇವೆ,ʼ ಎಂದು ಅವರು ಹೇಳಿದರು. ಸಲ್ಲಿಕೆಯನ್ನು ದಾಖಲಿಸಿಕೊಂಡ ಪೀಠ, ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿತು.

ಜಾಮೀನು ವಿರುದ್ಧ ಹೈಕೋರ್ಟ್ ಆದೇಶ: ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದ ಒಂದು ದಿನದ ನಂತರ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದೆ. ವಿಚಾರಣೆ ನ್ಯಾಯಾಲಯ ಜೂನ್ 20 ರಂದು ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿತ್ತು ಮತ್ತು 1 ಲಕ್ಷ ರೂ.ವೈಯಕ್ತಿಕ ಬಾಂಡ್‌ನಲ್ಲಿ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಆದರೆ, ಹೈಕೋರ್ಟ್‌ ಜಾಮೀನು ವಿರುದ್ಧ ಆದೇಶ ನೀಡಿತು. ಆದರೆ, ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರ ರಜಾಕಾಲದ ಪೀಠವು ಜಾಮೀನು ಆದೇಶಕ್ಕೆ ತಡೆ ನೀಡಿದೆ.

Tags:    

Similar News