ಹಿಂದಿ ಶಿಕ್ಷಕರ ಹಿತದೃಷ್ಟಿಯಿಂದ ತ್ರಿಭಾಷಾ ಸೂತ್ರ ಮುಂದುವರಿಸಿ: ಸಿಎಂಗೆ ಸಭಾಪತಿ ಹೊರಟ್ಟಿ ಪತ್ರ
ರಾಷ್ಟ್ರೀಯತೆ ಏಕತೆಯ ದೃಷ್ಟಿಯಿಂದ ಹಾಗೂ ಬಹು ಭಾಷೆಗಳ ಕಲಿಕೆ ಉತ್ತೇಜಿಸಲು ತ್ರಿಭಾಷಾ ಸೂತ್ರ ಜಾರಿಗೆ ತರಲಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.;
ರಾಜ್ಯದಲ್ಲಿ 15 ಸಾವಿರ ಹಿಂದಿ ಶಿಕ್ಷಕರು ಹಾಗೂ ಅವರ ಕುಟುಂಬದವರ ಹಿತದೃಷ್ಟಿಯಿಂದ ದ್ವಿಭಾಷಾ ನೀತಿ ಕೈಬಿಟ್ಟು ತ್ರಿಭಾಷಾ ಸೂತ್ರ ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ದ್ವಿಭಾಷಾ ನೀತಿ ಅಳವಡಿಸಿಕೆಗೆ ಒತ್ತಾಯ ಹೆಚ್ಚಾದ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಅವರು, "ರಾಷ್ಟ್ರೀಯತೆ, ಏಕತೆ ಹಾಗೂ ಬಹು ಭಾಷೆಗಳ ಕಲಿಕೆ ಉತ್ತೇಜಿಸಲು ಸಲುವಾಗಿ ತ್ರಿಭಾಷಾ ಸೂತ್ರ ಜಾರಿ ಅಗತ್ಯವಾಗಿದೆ. ಹೆಚ್ಚು ಭಾಷೆ ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ವಿವಿಧ ಭಾಷೆಗಳಲ್ಲಿ ಪರಿಣಾಮಕಾರಿ ಸಂವಹನ ಸಾಧ್ಯವಾಗಲಿದೆ" ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು ರಾಜ್ಯದ ಹಿಂದಿ ಶಿಕ್ಷಕರು ಹಾಗೂ ಕುಟುಂಬದವರ ರಕ್ಷಣೆ ಮಾಡಬೇಕು ಎಂದಿದ್ದಾರೆ.
ದ್ವಿಭಾಷಾ ನೀತಿ ಅನುಸರಿಸಲು ಚಿಂತನೆ: ಸಿಎಂ
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ ಇತ್ತೀಚೆಗೆ ಭಾಷಾ ಸಮಸ್ಯೆ ತಲೆದೋರಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ತ್ರಿಭಾಷಾ ಸೂತ್ರ ಕೈಬಿಟು ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳವ ಚಿಂತನೆ ಇದೆ ಎಂದು ತಿಳಿಸಿವೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳ ಜತೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ತ್ರಿಭಾಷಾ ಸೂತ್ರಕ್ಕೆ ಮನ್ನಣೆ ನೀಡದೆ ರಾಜ್ಯದಲ್ಲಿ ದ್ವಿಭಾಷಾ ನೀತಿ ಅನುಸರಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದರು.
ಹಿಂದಿಯಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಫೇಲ್
ರಾಜ್ಯದಲ್ಲಿ ತ್ರಿಭಾಷಾ ಸೂತ್ರದಿಂದ ಈಗಾಗಲೇ 1.42 ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್ ಆಗಿದ್ದಾರೆ ಎಂಬ ಆಘಾತಕಾರಿ ಅಂಕಿ-ಅಂಶ ಶಿಕ್ಷಣ ಇಲಾಖೆ ತಿಳಿಸಿದೆ. ಮಕ್ಕಳ ಮೇಲೆ ಹಲವಾರು ಭಾಷೆಗಳನ್ನು ಹೇರದೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು. ತೃತೀಯ ಭಾಷೆ ಐಚ್ಛಿಕವಾಗಿರಬೇಕೆ ಹೊರತು ಕಡ್ಡಾಯವಾಗಿರಬಾರದು ಎಂದು ಶಿಕ್ಷಣ ತಜ್ಞರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲೂ ದ್ವಿಭಾಷಾ ಸೂತ್ರಕ್ಕೆ ಮಣೆ
ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರದಲ್ಲಿಯೂ ತ್ರಿಭಾಷಾ ಸೂತ್ರಕ್ಕೆ ಸಚಿವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದಲೇ ಮುಖ್ಯಮಂತ್ರಿ ದೇವೇಂದ್ರ ಪಢ್ನವೀಸ್ ಅವರು ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳುವ ಕುರಿತು ಅಧ್ಯಯನ ನಡೆಸುವಂತೆ ಸಮಿತಿ ರಚಿಸಿ ಆದೇಶಿಸಿದ್ದಾರೆ.