ಮಲೆನಾಡು ಕೃಷಿಕರಿಗೆ ಸಿಹಿ ಸುದ್ದಿ: ಮೂಡಿಗೆರೆಯ 'ಬೆಟ್ಟದಮನೆ'ಯಲ್ಲಿ ತಲೆ ಎತ್ತಲಿದೆ ಸುಸಜ್ಜಿತ 'ಸ್ಪೈಸ್ ಪಾರ್ಕ್'

ಸಾಂಬಾರು ಪದಾರ್ಥಗಳ ರಫ್ತು ಅಭಿವೃದ್ಧಿ ಮತ್ತು ಬೆಳವಣಿಗೆಗೆ ಅಗತ್ಯವಾದ ಮೂಲಸೌಕರ್ಯ ಒದಗಿಸುವ ಸ್ಪೈಸ್ ಪಾರ್ಕ್ ಅನ್ನು ಆದಷ್ಟು ಬೇಗ ಅಭಿವೃದ್ಧಿಪಡಿಸುವಂತೆ ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಟಿ.ಡಿ. ಅವರು ವಿಧಾನಸಭೆಯಲ್ಲಿ ಮನವಿ ಮಾಡಿದರು.

Update: 2025-12-12 12:58 GMT

ರಾಮಲಿಂಗ ರೆಡ್ಡಿ 

Click the Play button to listen to article

ಚಿಕ್ಕಮಗಳೂರು ಜಿಲ್ಲೆಯ ಸಾಂಬಾರು ಬೆಳೆಗಾರರ ಬಹುದಿನಗಳ ಕನಸಾದ 'ಸ್ಪೈಸ್ ಪಾರ್ಕ್' (Spice Park) ಯೋಜನೆಗೆ ಕೊನೆಗೂ ಜೀವ ಬಂದಿದೆ. ಮೂಡಿಗೆರೆ ತಾಲೂಕಿನ ಬೆಟ್ಟದಮನೆ ಗ್ರಾಮದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಈ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಈ ಸಂಬಂಧ ಏಕಗವಾಕ್ಷಿ ಏಜೆನ್ಸಿಯಿಂದ ಅನುಮೋದನೆ ದೊರೆತಿದ್ದು, ಯೋಜನೆಯ ರೂಪುರೇಷೆ ಸಿದ್ಧಪಡಿಸಲು ಬೆಂಗಳೂರಿನ ಐಡೆಕ್ (IDeCK) ಸಂಸ್ಥೆಯನ್ನು ವ್ಯವಹರಣಾ ಸಮಾಲೋಚಕರನ್ನಾಗಿ ನೇಮಿಸಲಾಗಿದೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರ ಪ್ರಶ್ನೆಗೆ, ತೋಟಗಾರಿಕಾ ಸಚಿವರ ಪರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಉತ್ತರಿಸುವ ಮೂಲಕ ಈ ಮಹತ್ವದ ಮಾಹಿತಿಯನ್ನು ಸದನಕ್ಕೆ ತಿಳಿಸಿದರು.

ಹಳೆ ಜಾಗ ತಿರಸ್ಕಾರ, ಹೊಸ ಜಾಗದ ಆಯ್ಕೆ

ಸ್ಪೈಸ್ ಪಾರ್ಕ್ ನಿರ್ಮಾಣಕ್ಕೆ ಈ ಹಿಂದೆ ಗುರುತಿಸಲಾಗಿದ್ದ ಜಾಗವು ಭೌಗೋಳಿಕವಾಗಿ ಸೂಕ್ತವಾಗಿರಲಿಲ್ಲ. ಸಾಂಬಾರು ಮಂಡಳಿ, ತೋಟಗಾರಿಕೆ ಇಲಾಖೆ, ಕಂದಾಯ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳ ಜಂಟಿ ಪರಿಶೀಲನಾ ತಂಡವು ಆ ಜಾಗವನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಪರ್ಯಾಯ ಭೂಮಿಯ ಹುಡುಕಾಟ ನಡೆಸಿ, ಅಂತಿಮವಾಗಿ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಬೆಟ್ಟದಮನೆ ಗ್ರಾಮದಲ್ಲಿ ಸೂಕ್ತ ಜಾಗವನ್ನು ಗುರುತಿಸಲಾಗಿದೆ. ಈ ಜಮೀನನ್ನು ಈಗ ಅಧಿಕೃತವಾಗಿ ತೋಟಗಾರಿಕಾ ಇಲಾಖೆಗೆ ವರ್ಗಾಯಿಸಿ ಆದೇಶವನ್ನೂ ಹೊರಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ತ್ವರಿತಗತಿಯಲ್ಲಿ ಕಾಮಗಾರಿ ಭರವಸೆ

ಶಾಸಕ ರಾಜೇಗೌಡ ಅವರು, "ಸಾಂಬಾರು ಪದಾರ್ಥಗಳ ರಫ್ತು ಮತ್ತು ಮೌಲ್ಯವರ್ಧನೆಗೆ ಈ ಪಾರ್ಕ್ ಅತ್ಯಗತ್ಯವಾಗಿದ್ದು, ವಿಳಂಬ ಮಾಡದೆ ಕಾಮಗಾರಿ ಆರಂಭಿಸಬೇಕು," ಎಂದು ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು, "ಈಗಾಗಲೇ ಜಮೀನಿನ ಹದ್ದುಬಸ್ತು ಕಾರ್ಯ ಪೂರ್ಣಗೊಂಡಿದೆ. ಐಡೆಕ್ ಸಂಸ್ಥೆಯು ವರದಿ ನೀಡಿದ ತಕ್ಷಣವೇ ಮುಂದಿನ ಪ್ರಕ್ರಿಯೆಗಳನ್ನು ವೇಗಗೊಳಿಸಿ, ಆದಷ್ಟು ಶೀಘ್ರವಾಗಿ ಸ್ಪೈಸ್ ಪಾರ್ಕ್ ಅನ್ನು ಲೋಕಾರ್ಪಣೆ ಮಾಡಲಾಗುವುದು," ಎಂದು ಭರವಸೆ ನೀಡಿದರು.

ಏನಿದು ಸ್ಪೈಸ್ ಪಾರ್ಕ್? ಏನು ಲಾಭ?

ಈ ಸ್ಪೈಸ್ ಪಾರ್ಕ್‌ನಲ್ಲಿ ಸಾಂಬಾರು ಪದಾರ್ಥಗಳ ಸಂಸ್ಕರಣೆ, ಪ್ಯಾಕೇಜಿಂಗ್, ಗುಣಮಟ್ಟ ಪರಿಶೀಲನೆ ಮತ್ತು ರಫ್ತಿಗೆ ಅಗತ್ಯವಾದ ಮೂಲಸೌಕರ್ಯಗಳು ಒಂದೇ ಸೂರಿನಡಿ ಲಭ್ಯವಿರುತ್ತವೆ. ಇದರಿಂದ ಕಾಫಿ, ಮೆಣಸು, ಏಲಕ್ಕಿ ಸೇರಿದಂತೆ ಮಲೆನಾಡಿನ ಪ್ರಮುಖ ಬೆಳೆಗಳಿಗೆ ಉತ್ತಮ ಬೆಲೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಸಿಗಲು ಹಾದಿ ಸುಗಮವಾಗಲಿದೆ.  

Tags:    

Similar News