ಕೋಲಾರ ಯದರೂರು ಕೈಗಾರಿಕಾ ಪ್ರದೇಶ| ಜೆ.ಎಂ.ಸಿ. ಸರ್ವೆ ನಂತರ ಅಂತಿಮ ಅಧಿಸೂಚನೆ ಬಿಡುಗಡೆ; ಎಂ.ಬಿ. ಪಾಟೀಲ್

ವೆಂಕಟಶಿವರೆಡ್ಡಿ ಅವರು ಅಡ್ಡಿಪಡಿಸದಂತೆ ಕ್ರಮ ಕೈಗೊಳ್ಳುವುದಾಗಿ ಸದನದಲ್ಲಿ ತಿಳಿಸಿದ ನಂತರ, ಸಚಿವರು ಸದನ ಮುಗಿದ ಬಳಿಕ ಮತ್ತೊಮ್ಮೆ ಜೆ.ಎಂ.ಸಿ ಸರ್ವೆಗೆ ಸರ್ವೆ ತಪಾಸಕರನ್ನು ಕಳುಹಿಸುವ ಭರವಸೆ ನೀಡಿದರು.

Update: 2025-12-12 12:49 GMT

 ಎಂ.ಬಿ.ಪಾಟೀಲ್

Click the Play button to listen to article

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯದರೂರು ಗ್ರಾಮದಲ್ಲಿ 1273 ಎಕರೆ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಸಲುವಾಗಿ ಭೂ-ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ತಿಳಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಶ್ರೀನಿವಾಸಪುರ ಕ್ಷೇತ್ರದ ಶಾಸಕ ವೆಂಕಟಶಿವರೆಡ್ಡಿ ಜಿ.ಕೆ. ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಭೂ-ಸ್ವಾಧೀನಗೊಳಿಸಲು ಸರ್ವೆ ತಪಾಸಕರು ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಮತ್ತು ಭೂ ಮಾಲೀಕರು ಜೆ.ಎಂ.ಸಿ (ಜಾಯಿಂಟ್ ಮೆಜರ್ಮೆಂಟ್ ಕ್ಯಾಂಪ್) ಕಾರ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಗ್ರಾಮಸ್ಥರು ಮತ್ತು ಭೂ ಮಾಲೀಕರು ಅಡ್ಡಿಪಡಿಸದಂತೆ ಕ್ರಮ ವಹಿಸಲಾಗುವುದು ಎಂದು ಶಾಸಕ ವೆಂಕಟಶಿವಾರೆಡ್ಡಿ ಅವರು ಸದನದಲ್ಲಿ ತಿಳಿಸಿದ ನಂತರ, ಸದನ ಮುಗಿದ ಬಳಿಕ ಮತ್ತೊಮ್ಮೆ ಜೆ.ಎಂ.ಸಿ ಸರ್ವೆ ಕಾರ್ಯಕ್ಕೆ ಸರ್ವೆ ತಪಾಸಕರನ್ನು ಕಳುಹಿಸಲಾಗುವುದು ಎಂದು ಅವರು ಭರವಸೆ ನೀಡಿದರು. 

ಡಿಫೆನ್ಸ್ ಕಾರಿಡಾರ್‌ಗೆ ಸರ್ಕಾರದಿಂದ ಯತ್ನ

 ಬೆಳಗಾವಿ, ವಿಜಯಪುರ, ಧಾರವಾಡ ಜಿಲ್ಲೆಗಳನ್ನು ಒಳಗೊಂಡಂತೆ ಉತ್ತರ ಕರ್ನಾಟಕದಲ್ಲಿ ಡಿಫೆನ್ಸ್ ಕಾರಿಡಾರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ನಡೆಸಿದೆ. ದೇಶದ ಏರೋಸ್ಪೇಸ್ ಹಾಗೂ ಡಿಫೆನ್ಸ್ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಶೇ. 65 ರಷ್ಟು ಕೊಡುಗೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಡಿಫೆನ್ಸ್ ಕಾರಿಡಾರ್ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಯೋಜನೆ ಸಾಕಾರಗೊಳಿಸಲು ಸರ್ವ ಪಕ್ಷ ಶಾಸಕರುಗಳ ಬೆಂಬಲ ಅಗತ್ಯವಿದೆ ಎಂದು ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಪ್ರಶ್ನೆಗೆ ಉತ್ತರಿಸಿದರು. 

ಹಸಿರು ವಲಯ ಘೋಷಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕಾಗಿ 13 ಗ್ರಾಮಗಳಿಂದ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯಿಂದ ಕೈಬಿಡಲು ಡಿ. 06 ರಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಸಂಪೂರ್ಣ ಪ್ರದೇಶವನ್ನು ಹಸಿರು ವಲಯವನ್ನಾಗಿ ಮುಂದುವರೆಸುವ ಸಲುವಾಗಿ ವಿಶೇಷ ಕೃಷಿ ವಲಯ ಎಂದು ಘೋಷಿಸಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು. 

ಉತ್ತರ ಕರ್ನಾಟಕದಲ್ಲಿ ಅವಕಾಶ

ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಮೆ: ಏಕಸ್ ಎಸ್.ಇ.ಝೆಡ್ ಪ್ರೈ.ಲಿ. ಅವರು ಏರೋಸ್ಪೇಸ್ ಕಾಂಪೋನೆಂಟ್‍ಗಳ ಎಸ್.ಇ.ಝೆಡ್ ಸ್ಥಾಪಿಸಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಬೆಳಗಾವಿಯಲ್ಲಿ ಏರೋಸ್ಪೇಸ್ ಕಾಂಪೋನೆಂಟ್‍ಗಳ ತಯಾರಿಕೆಯಲ್ಲಿ ಎಕೋ ಸಿಸ್ಟಂ ಅಭಿವೃದ್ಧಿಯಾಗಿದ್ದು, ಬಂಡವಾಳ ಆಕರ್ಷಿಸಲು ವಿಪುಲ ಅವಕಾಶಗಳಿವೆ. ಬೆಂಗಳೂರು-ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಅಂದಾಜು 3 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸುತ್ತಿದ್ದು, ಇಲ್ಲಿ ಏರೋಸ್ಪೇಸ್ ಕಾಂಪೋನೆಂಟ್‍ಗಳ ತಯಾರಿಕಾ ಘಟಕಗಳಿಗೆ ಅಗತ್ಯ ಭೂಮಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ.

ಹೊಸ ಕೈಗಾರಿಕಾ ನೀತಿಯಡಿ ನಂಜುಂಡಪ್ಪ ವರದಿಯಲ್ಲಿ ಅತಿ ಹಿಂದುಳಿದ ತಾಲ್ಲೂಕುಗಳು ಎಂದು ಘೋಷಿಸಲಾಗಿರುವ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪಿಸ ಬಯಸುವವರಿಗೆ ಪ್ರೋತ್ಸಾಹದ ಜೊತೆಗೆ ಹೆಚ್ಚುವರಿಯಾಗಿ ಶೇ. 3 ರಿಂದ 5 ರಷ್ಟು ವಿಶೇಷ ನೆರವು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. 

Tags:    

Similar News