ಒಳ ಮೀಸಲಾತಿ ನಮೂದು ಎಡವಟ್ಟು| ಕೆ-ಸೆಟ್ ದಾಖಲೆ ಪರಿಶೀಲನೆ ಬಳಿಕ ಕ್ರಮ - ಕೆಇಎ ಸ್ಪಷ್ಟನೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏನೇ ಮಾಡಿದರೂ ಪಾರದರ್ಶಕ ತೀರ್ಮಾನ ಮಾಡುತ್ತದೆ. ಇದರಲ್ಲಿ ಯಾರಿಗೂ ಅನುಮಾನ ಬೇಡ. ಕ್ಲೇಮ್ ಪ್ರಕಾರ ದಾಖಲೆಗಳೇ ಇಲ್ಲದವರಿಗೆ ಪ್ರಮಾಣ ಪತ್ರ ನೀಡುವುದು ಕೂಡ ನಿಯಮಬಾಹಿರವಾಗಲಿದೆ ಎಂದು ಕೆಇಎ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕೆ-ಸೆಟ್ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ದಾಖಲೆ ಪರಿಶೀಲನೆ ಸಮಯದಲ್ಲಿ ಕೆಲ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಒಳ ಮೀಸಲಾತಿಯನ್ನು ತಪ್ಪಾಗಿ ಕ್ಲೇಮ್ ಮಾಡಿರುವ ಬಗ್ಗೆ ಅಳಲು ತೋಡಿಕೊಂಡಿದ್ದು, ದಾಖಲೆ ಪರಿಶೀಲನೆ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಕೆಇಎ ಭರವಸೆ ನೀಡಿದೆ.
ಕೆ-ಸೆಟ್- 2025ರಲ್ಲಿ ಅರ್ಹರಾಗಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಒಳಮೀಸಲಾತಿ ನಮೂದಿಸುವ ವೇಳೆ ತಪ್ಪಾಗಿ ಕ್ಲೇಮ್ ಮಾಡಿದ್ದರು. ಅಂತಹವರ ಮನವಿಗಳನ್ನು ದಾಖಲೆ ಪರಿಶೀಲನೆ ಬಳಿಕ ಪರಿಗಣಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.
ಅಭ್ಯರ್ಥಿಗಳು ಕ್ಲೇಮ್ ಮಾಡಿರುವ ಒಳ ಮೀಸಲಾತಿ (ಎಸ್‌ಸಿ ʼಎʼ, ಎಸ್‌ಸಿ ʼಬಿʼ, ಎಸ್‌ಸಿ ʼಸಿʼ) ಆಧಾರದ ಮೇಲೆಯೇ ದಾಖಲೆ ಪರಿಶೀಲಿಸಿ, ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ. ಪ್ರವರ್ಗ ʼಎʼ ಗುಂಪಿನಡಿ ಮೀಸಲಾತಿ ಪಡೆಯುವವರು ತಪ್ಪಾಗಿ ʼಬಿʼ ಹಾಗೂ ʼಸಿʼ ಗುಂಪಿನಡಿ ಮೀಸಲಾತಿ ಕ್ಲೇಮ್ ಮಾಡಿದ್ದಾರೆ. ದಾಖಲೆ ಪರಿಶೀಲನೆ ವೇಳೆ ತಮಲ್ಮ ಅಚಾತುರ್ಯದ ಬಗ್ಗೆ ಅಭ್ಯರ್ಥಿಗಳು ಹೇಳಿಕೊಂಡಿದ್ದು, ಇದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಆ.22ರಂದು ಕೆ-ಸೆಟ್ ಅಧಿಸೂಚನೆ ಹೊರಡಿಸಿದ ನಂತರ ಆ.25ರಂದು ಸಮಾಜ ಕಲ್ಯಾಣ ಇಲಾಖೆಯು ಒಳಮೀಸಲಾತಿ ಜಾರಿ ಸಂಬಂಧ ಆದೇಶ ಹೊರಡಿಸಿತ್ತು. ನಂತರ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಜತೆಗೂ ಮಾತುಕತೆ ನಡೆಸಿ, ಆರ್‌ಡಿ ಸಂಖ್ಯೆ ಇರುವ ಪ್ರಮಾಣ ಪತ್ರಗಳ ಲಭ್ಯತೆ ಬಗ್ಗೆ ಮಾಹಿತಿ ಕಲೆ ಹಾಕಿದೆ. ಆದರೆ, ತಕ್ಷಣಕ್ಕೆ ಆರ್‌ಡಿ ಸಂಖ್ಯೆಯ ಪ್ರಮಾಣ ಪತ್ರಗಳು ಲಭ್ಯವಾಗುವುದು ಕಷ್ಟ ಎನ್ನುವ ಮಾಹಿತಿ ಸಿಕ್ಕ ನಂತರ ಹೇಗಿದ್ದರೂ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರಗಳು ಇರುತ್ತವೆ.
ಪ್ರವೇಶ ಪತ್ರ ಡೌನ್‌ಲೋಡ್ ಸಂದರ್ಭದಲ್ಲಿ ಒಳ ಮೀಸಲಾತಿಯ ಪ್ರವರ್ಗಗಳ ಮಾಹಿತಿ ಸಂಗ್ರಹಿಸಲು ನಿರ್ಧರಿಸಿ, ಆ ಪ್ರಕಾರ ಮಾಡಲಾಯಿತು. ಅದೇ ರೀತಿ ಬಹುತೇಕ ಮಂದಿ ತಮ್ಮ ಪ್ರವರ್ಗ ನಮೂದಿಸಿದ್ದಾರೆ. ಕೆಲವರು ತಪ್ಪು ಹಾಕಿರುವುದಾಗಿ ಹೇಳುತ್ತಿದ್ದು, ಈ ಹಂತದಲ್ಲಿ ಪರಿಶೀಲಿಸಿ, ಪ್ರಮಾಣ ಪತ್ರ ನೀಡುವುದು ಕಷ್ಟ. ಹೀಗಾಗಿ ಪರಿಶೀಲನೆ ಬಳಿಕ ಲಭ್ಯವಾಗುವ ಮಾಹಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಪ್ರಸನ್ನ ವಿವರಿಸಿದ್ದಾರೆ.
ಪಾರದರ್ಶಕ ತೀರ್ಮಾನ
ಪ್ರಾಧಿಕಾರ ಏನೇ ಮಾಡಿದರೂ ಪಾರದರ್ಶಕ ತೀರ್ಮಾನ ಮಾಡುತ್ತದೆ. ಇದರಲ್ಲಿ ಯಾರಿಗೂ ಅನುಮಾನ ಬೇಡ. ಕ್ಲೇಮ್ ಪ್ರಕಾರ ದಾಖಲೆಗಳೇ ಇಲ್ಲದವರಿಗೆ ಪ್ರಮಾಣ ಪತ್ರ ನೀಡುವುದು ಕೂಡ ನಿಯಮಬಾಹಿರವಾಗಲಿದೆ. ಎಲ್ಲವನ್ನೂ ಪರಿಶೀಲಿಸಿ, ಸೂಕ್ತವಾದ ಕ್ರಮ ತೆಗೆದುಕೊಳ್ಳಲಾಗುವುದು. ಈ ವಿಷಯದಲ್ಲಿ ತಾಳ್ಮೆ ಮುಖ್ಯ ಎಂದು ಟೀಕೆ ಮಾಡುವವರಿಗೆ ಹಿತವಚನ ಹೇಳಿದರು.
31 ವಿಶೇಷ ಚೇತನ ಅಭ್ಯರ್ಥಿಗಳು ಅನರ್ಹ
ಕೆಲ ವಿಶೇಷ ಚೇತನ ಅಭ್ಯರ್ಥಿಗಳು ಕೂಡ ತಮಗೆ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ದೂರುತ್ತಿರುವುದು ಗಮನಕ್ಕೆ ಬಂದಿದ್ದು, ತಜ್ಞ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ ತಪಾಸಣೆ ಮಾಡಿಯೇ ಅರ್ಹತೆ ತೀರ್ಮಾನಿಸಲಿದೆ. ಜಿಲ್ಲಾ ಮಟ್ಟದಲ್ಲಿ ಕೊಟ್ಟಿರುವ ವಿಶೇಷ ಚೇತನ ಕಾರ್ಡ್ ಇದೆ ಎನ್ನುವ ಕಾರಣಕ್ಕೆ ಇಲ್ಲಿ ಪ್ರಮಾಣ ಪತ್ರಗಳನ್ನು ನೀಡಲು ಆಗುವುದಿಲ್ಲ. ಹಿಂದೆಲ್ಲ ಕೆಲವರು ನಕಲಿ ವಿಶೇಷಚೇತನ ಪ್ರಮಾಣ ಪತ್ರಗಳನ್ನು ತಂದು ವೈದ್ಯಕೀಯ ಸೀಟುಗಳಿಗೆ ಕ್ಲೇಮ್ ಮಾಡಿದ್ದರು. ಪರಿಶೀಲನೆ ವೇಳೆ ಈ ರೀತಿಯ 21 ಮಂದಿ ನಕಲಿ ಪ್ರಮಾಣ ಪತ್ರ ಹೊಂದಿರುವುದು ಗೊತ್ತಾಗಿ, ಕ್ರಮ ತೆಗೆದುಕೊಳ್ಳಲಾಗಿದೆ. ಕೆ-ಸೆಟ್‌ನಲ್ಲೂ ಆ ರೀತಿ ಅನರ್ಹರಿಗೆ ಇದರ ಲಾಭ ಆಗಬಾರದು ಎನ್ನುವ ಕಾರಣಕ್ಕೆ ಪರಿಶೀಲಿಸಿದಾಗ ಇದುವರೆಗೆ 31 ಅನರ್ಹರಾಗಿದ್ದಾರೆ. ಅಂತಹ ಅನರ್ಹರು ಶೇ 40ಕ್ಕಿಂತ ಹೆಚ್ಚಿನ ಅಂಗವೈಕಲ್ಯದ ಪ್ರಮಾಣ ಪತ್ರ ಹೇಗೆ ಪಡೆದರು ಎಂಬುದರ ಬಗ್ಗೆಯೂ ತನಿಖೆ ನಡೆಸಲು ಆರೋಗ್ಯ ಇಲಾಖೆಯನ್ನು ಕೋರಲಾಗುವುದು ಎಂದು ವಿವರಿಸಿದರು.
ಆರೋಪವೇನು ?
ಸಾಮಾಜಿಕ ಜಾಲತಾಣದಲ್ಲಿ ಹಲವರು "ಕೆಸೆಟ್ ಪ್ರಮಾಣಪತ್ರ ಪರಿಶೀಲನೆ ವೇಳೆ ಅಭ್ಯರ್ಥಿಗಳು ಮಾಡಿಕೊಂಡಿರುವ ಎಡವಟ್ಟುಗಳನ್ನು ಉಲ್ಲೇಖಿಸಿದ್ದರು. ಈ ಬಗ್ಗೆ ಅಭ್ಯರ್ಥಿಯೊಬ್ಬರು ಫೇಸ್‌ಬುಕ್‌ನಲ್ಲಿ ಆಗಿರುವ ಸಮಸ್ಯೆಯನ್ನು ಬರೆದುಕೊಂಡಿದ್ದರು.
ಪರಿಶಿಷ್ಟ ಜಾತಿ ಪ್ರವರ್ಗ ʼಬಿʼ ಹಾಗೂ ʼಸಿʼಗಿಂತ ʼಎʼ ನಲ್ಲೇ ಅಧಿಕ ಕಟ್ ಆಫ್ ನಿಂತಿತ್ತು. ಇದು ಹೇಗೆ ಸಾಧ್ಯ ಎಂಬುದನ್ನು ಪ್ರಶ್ನಿಸಿದಾಗ ಹೊಸ ನಿಯಮದಂತೆ ನಮೂನೆ ʼಡಿʼ ನಲ್ಲಿ ಮೂಲ ಜಾತಿ ಪ್ರಮಾಣ ಪತ್ರದೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಸೂಚಿಸಲಾಗಿತ್ತು. ನೂರಾರು ಅಭ್ಯರ್ಥಿಗಳ ಗುಂಪು ತಮ್ಮ ಅಸಮಾಧಾನ ಹೊರ ಹಾಕುತ್ತಿತ್ತು.
ದಾಖಲೆ ಪರಿಶೀಲನೆಗೆ ಬಂದಿದ್ದವರಲ್ಲಿ ಬಹುತೇಕರು ನಾವು ಪ್ರವರ್ಗ ʼಬಿʼ ಮತ್ತು ʼಸಿʼ ವರ್ಗಕ್ಕೆ ಬರುತ್ತೇವೆ. ಆದರೆ ತಿಳಿಯದೇ ಪ್ರವರ್ಗ ʼಎʼ ನಮೂದಿಸಿದ್ದೇವೆ. ಈಗ ನಮಗೆ ಕೆ-ಸೆಟ್ ಪ್ರಮಾಣ ಪತ್ರ ತಡೆ ಹಿಡಿಯಲಾಗಿದೆ. ಇದು ಅನ್ಯಾಯ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದರು. ವಿಚಿತ್ರ ಯಾರೊಬ್ಬರೂ ಪ್ರವರ್ಗ ʼಎʼ ಅಭ್ಯರ್ಥಿ ʼಬಿʼ ಮತ್ತು ʼಸಿʼ ನಮೂದಿಸಿ ಆಯ್ಕೆಯಾದಂತಿರಲಿಲ್ಲ. ಹೀಗೆ ತಪ್ಪು ನಮೂದಿಸಿದ್ದವರು ʼಬಿʼ ಮತ್ತು ʼಸಿʼ ನವರೇ ಆಗಿದ್ದರು. ನಾನು ʼಎʼ ಎಂದು ಸರಿಯಾಗೆ ನಮೂದಿಸಿದ್ದೆ. ನನ್ನ ಪ್ರಮಾಣಪತ್ರ ತೋರಿಸಿದ ತಕ್ಷಣ ಚಕಾರವೆತ್ತದೆ ನನ್ನ ಕೆ-ಸೆಟ್ ಪ್ರಮಾಣಪತ್ರ ಕೊಟ್ಟು ಕಳುಹಿಸಿದರು ಎಂದು ಅಭ್ಯರ್ಥಿಯೊಬ್ಬರು ಬರೆದುಕೊಂಡಿದ್ದಾರೆ.
ಅಭ್ಯರ್ಥಿಯ ಸಾಮಾಜಿಕ ಜಾಲತಾಣದ ಪೋಸ್ಟ್