ಬೆಳಗಾವಿ ಅಧಿವೇಶನ: ಪಿಎಸ್‌ಐ ನೇರ ನೇಮಕಾತಿ, ಮುಂಬಡ್ತಿಗೆ ಶೇ.70:30 ಅನುಪಾತವೇ ಪೂರಕ- ಗೃಹ ಸಚಿವ
ಪೊಲೀಸ್ ಕಾನ್‌ಸ್ಟೆಬಲ್ ವೃಂದದ ಸಿಬ್ಬಂದಿ ಕ್ರಮವಾಗಿ ಹೆಡ್ ಕಾನ್‌ಸ್ಟೆಬಲ್ ಮತ್ತು ಎಎಸ್‌ಐ ಹುದ್ದೆಗಳಿಗೆ 2 ಮುಂಬಡ್ತಿ ಹೊಂದಿ ನಂತರ ಪಿಎಸ್‌ಐ (ಸಿವಿಲ್) ಹುದ್ದೆಗೆ ಅರ್ಹರಾಗುತ್ತಾರೆ.
ಡಾ.ಜಿ.ಪರಮೇಶ್ವರ್
ಪೊಲೀಸ್ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಪಿಎಸ್‌ಐ ಹುದ್ದೆಗೆ ಅನುಭವ ಹೊಂದಿರುವ ಮತ್ತು ಯುವ ಅಧಿಕಾರಿಗಳನ್ನು ಪರಿಗಣಿಸಿ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಶೇ 70:30 ಅನುಪಾತ ನಿಗದಿ ಮಾಡಿದ್ದು, ಇದರಿಂದ ಇಲಾಖೆಯ ಕಾರ್ಯನಿರ್ವಹಣೆ ಮತ್ತು ಆಡಳಿತ ಸುಸೂತ್ರವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಬೆಳಗಾವಿಯ ಅಧಿವೇಶನದ ವಿಧಾನ ಪರಿಷತ್ತಿನಲ್ಲಿ ಡಿ.11ರಂದು ಪ್ರಶ್ನೋತರ ವೇಳೆ ಸದಸ್ಯರಾದ ಡಿ.ಟಿ.ಶ್ರೀನಿವಾಸ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪೋಲೀಸ್ ಇಲಾಖೆಯಲ್ಲಿ ಪಿಎಸ್ಐ (ಸಿವಿಲ್) ಹುದ್ದೆಯು ಪ್ರಮುಖ ಹುದ್ದೆಯಾಗಿದೆ. ಠಾಣಾ ವ್ಯಾಪ್ತಿಯ ಸಂಪೂರ್ಣ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ, ಅಪರಾಧ ತಡೆಗಟ್ಟುವಿಕೆ, ಅಪರಾಧ ಪ್ರಕರಣಗಳ ಪತ್ತೆ ಮತ್ತು ತನಿಖೆ, ಸಂಚಾರ ನಿರ್ವಹಣೆಯು ಇವರ ಮುಖ್ಯ ಕರ್ತವ್ಯವಾಗಿದೆ. ಈ ಕರ್ತವ್ಯಗಳನ್ನು ನಿರ್ವಹಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾದ ಹಾಗೂ ತಾಂತ್ರಿಕ ನೈಪುಣ್ಯತೆಯ ಯುವ ಅಧಿಕಾರಿಗಳ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಪೊಲೀಸ್ ಕಾನ್‌ಸ್ಟೆಬಲ್ ವೃಂದದ ಸಿಬ್ಬಂದಿ ಕ್ರಮವಾಗಿ ಹೆಡ್ ಕಾನ್‌ಸ್ಟೆಬಲ್ ಮತ್ತು ಎಎಸ್‌ಐ ಹುದ್ದೆಗಳಿಗೆ 2 ಮುಂಬಡ್ತಿ ಹೊಂದಿ ನಂತರ ಪಿಎಸ್‌ಐ (ಸಿವಿಲ್) ಹುದ್ದೆಗೆ ಅರ್ಹರಾಗುತ್ತಾರೆ. ಇವರ ಶಿಕ್ಷಣವು ಮೂಲ ಹುದ್ದೆಯ ಕನಿಷ್ಠ ಮಟ್ಟದ್ದಾಗಿರುವುದರಿಂದ ಪ್ರಸ್ತುತ ವರದಿಯಾಗುತ್ತಿರುವ ಹೆಚ್ಚಿನ ತಾಂತ್ರಿಕತೆ ಅಪರಾಧ ಪ್ರಕರಣ ಭೇದಿಸುವುದು ಕಷ್ಟಸಾಧ್ಯವಾಗಿದೆ. ಹಾಗಾಗಿ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಶೇ 70:30 ಅನುಪಾತ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕಾಲಮಿತಿಯೊಳಗೆ ಮುಂಬಡ್ತಿ: ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯದ ಘಟಕದಲ್ಲಿ (ಸಂಚಾರಿ ವಿಭಾಗಗಳನ್ನು ಒಳಗೊಂಡಂತೆ) ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ ಗಳಿಗೆ ಪ್ರಸ್ತುತ ಸುಮಾರು 29 ವರ್ಷಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಹಾಗೂ ಎಎಸ್ ಐ ಹುದ್ದೆಯಲ್ಲಿ 5 ವರ್ಷ 10 ತಿಂಗಳ ಸೇವೆ ಪೂರೈಸಿರುವವರಿಗೆ ಕಾಲಮಿತಿಯಲ್ಲಿ ಮುಂಬಡ್ತಿ ನೀಡಲಾಗಿದೆ ಎಂದು ಇದೇ ಗೃಹ ಸಚಿವರು ಮಾಹಿತಿ ನೀಡಿದರು.