ಪ್ರಧಾನಿ ಮೋದಿಗೆ ಅವಹೇಳನ: ಮಡಿಕೇರಿಯಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದ ಮೂವರು ಯುವಕರ ಬಂಧನ
ಬಂಧಿತ ಆರೋಪಿಗಳನ್ನು ಫಾಹಾದ್, ಬಾಸಿಲ್ ಮತ್ತು ಸಮೀರ್ ಎಂದು ಗುರುತಿಸಲಾಗಿದೆ. ಮಡಿಕೇರಿಯ ಸ್ಪೈಸಸ್ (ಸಾಂಬಾರ ಪದಾರ್ಥಗಳ) ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಹೇಳನಕಾರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪದ ಮೇರೆಗೆ ಕೊಡಗು ಜಿಲ್ಲೆಯ ಮಡಿಕೇರಿ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಫಾಹಾದ್, ಬಾಸಿಲ್ ಮತ್ತು ಸಮೀರ್ ಎಂದು ಗುರುತಿಸಲಾಗಿದೆ. ಮಡಿಕೇರಿಯ ಸ್ಪೈಸಸ್ (ಸಾಂಬಾರ ಪದಾರ್ಥಗಳ) ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಥವಾ ಅಲ್ಲಿ ಸೇರಿದ್ದ ಈ ಮೂವರು ಯುವಕರು, ಅಂಗಡಿಯಲ್ಲಿ ಕುಳಿತು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.
ಬಿಜೆಪಿಯಿಂದ ದೂರು, ಜಾಲತಾಣದಲ್ಲಿ ಆಕ್ರೋಶ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದೇಶದ ಪ್ರಧಾನಮಂತ್ರಿಯವರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಹಲವರು ಕಮೆಂಟ್ ಮಾಡಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೊಡಗು ಜಿಲ್ಲಾ ಬಿಜೆಪಿ ಘಟಕವು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ದೂರಿನನ್ವಯ ತಕ್ಷಣವೇ ಕಾರ್ಯಪ್ರವೃತ್ತರಾದ ಮಡಿಕೇರಿ ನಗರ ಠಾಣಾ ಪೊಲೀಸರು, ವಿಡಿಯೋ ಆಧರಿಸಿ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.