ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಮೊದಲ ರೈಲು ಆಗಮನ: 2026ರಲ್ಲಿ ಸಂಚಾರ ಆರಂಭ!

ಜೂನ್ 2026ರಂದು ಎಲಿವೇಟೆಡ್ (ಮೇಲ್ಸೇತುವೆ) ಮಾರ್ಗದಲ್ಲಿ ಮೊದಲ ಹಂತದ ಸೇವೆ ಆರಂಭವಾಗಲಿದ್ದು, ಇದಕ್ಕಾಗಿ 5 ರೈಲುಗಳನ್ನು ಬಳಸಿಕೊಳ್ಳಲಾಗುವುದು.

Update: 2025-12-11 10:32 GMT

ಪಿಂಕ್‌ ಮೆಟ್ರೋ 

Click the Play button to listen to article

ಬೆಂಗಳೂರಿನ ವಾಹನ ದಟ್ಟಣೆ ನಿವಾರಣೆಗೆ ಬಹುಮುಖ್ಯ ಎನ್ನಲಾಗಿರುವ 'ನಮ್ಮ ಮೆಟ್ರೋ'ದ ಪಿಂಕ್ ಲೈನ್ ಯೋಜನೆಯು ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ 21 ಕಿ.ಮೀ ಮಾರ್ಗದಲ್ಲಿ ಸಂಚರಿಸಲಿರುವ ಮೊದಲ ಆರು ಬೋಗಿಗಳ (6-coach) ರೈಲು ಇಂದು (ಡಿಸೆಂಬರ್ 11) ಅನಾವರಣಗೊಂಡಿದೆ.

ಭಾರತೀಯ ಸಾರ್ವಜನಿಕ ವಲಯದ ಉದ್ದಿಮೆ ಬಿಇಎಂಎಲ್, ಈ ರೈಲನ್ನು ತಯಾರಿಸಿದ್ದು, ಒಟ್ಟು 3,177 ಕೋಟಿ ರೂಪಾಯಿ ವೆಚ್ಚದ ಒಪ್ಪಂದದಡಿ ಇದನ್ನು ಪೂರೈಸಲಾಗಿದೆ. ವಿಶೇಷವೆಂದರೆ, ಈ ರೈಲುಗಳು ಚಾಲಕರಹಿತ ತಂತ್ರಜ್ಞಾನವನ್ನು ಹೊಂದಿವೆ. ಆರಂಭಿಕ ಹಂತದಲ್ಲಿ ಚಾಲಕರ ನೆರವಿನೊಂದಿಗೆ (GoA-2) ಸೆಮಿ-ಆಟೋಮ್ಯಾಟಿಕ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ರೈಲುಗಳು, ಭವಿಷ್ಯದಲ್ಲಿ ಸಂಪೂರ್ಣ ಚಾಲಕರಹಿತ (GoA-4) ವ್ಯವಸ್ಥೆಗೆ ಬದಲಾಗುವ ಸಾಮರ್ಥ್ಯ ಹೊಂದಿವೆ.

ಯೋಜನೆಯ ಪ್ರಮುಖ ಹಂತಗಳು

ಜೂನ್ 2026ರಂದು ಎಲಿವೇಟೆಡ್ (ಮೇಲ್ಸೇತುವೆ) ಮಾರ್ಗದಲ್ಲಿ ಮೊದಲ ಹಂತದ ಸೇವೆ ಆರಂಭವಾಗಲಿದ್ದು, ಇದಕ್ಕಾಗಿ 5 ರೈಲುಗಳನ್ನು ಬಳಸಿಕೊಳ್ಳಲಾಗುವುದು. ಡಿಸೆಂಬರ್ 2026ರಂದು ಉಳಿದ 11 ರೈಲುಗಳು ಸೇರ್ಪಡೆಯಾಗಲಿದ್ದು, ಒಟ್ಟು 16 ರೈಲುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿವೆ.

ಈ ಪಿಂಕ್ ಲೈನ್ ಮಾರ್ಗವು ನಗರದ ಪ್ರಮುಖ ವಾಣಿಜ್ಯ ಮತ್ತು ವಸತಿ ಪ್ರದೇಶಗಳಾದ ಕೋರಮಂಗಲ, ಇಂದಿರಾನಗರ, ಎಂ.ಜಿ. ರಸ್ತೆ ಮತ್ತು ಶಿವಾಜಿನಗರಗಳನ್ನು ಸಂಪರ್ಕಿಸಲಿದೆ. ಇದೇ ಮೊದಲ ಬಾರಿಗೆ ರೈಲುಗಳ ನಿರ್ವಹಣೆಗಾಗಿ 15 ವರ್ಷಗಳ ದೀರ್ಘಾವಧಿಯ ನಿರ್ವಹಣಾ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಈ ಯೋಜನೆಯು ಪೂರ್ಣಗೊಂಡರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ದೊರೆಯಲಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.

 ನಮ್ಮ ಮೆಟ್ರೋದ ಬಹುನಿರೀಕ್ಷಿತ 'ಪಿಂಕ್ ಲೈನ್' (ಗುಲಾಬಿ ಮಾರ್ಗ) 2026ರ ಮೇ ತಿಂಗಳಿನಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಕಾಳೇನ ಅಗ್ರಹಾರ ಮತ್ತು ನಾಗವಾರವನ್ನು ಸಂಪರ್ಕಿಸುವ 21 ಕಿಲೋಮೀಟರ್ ಉದ್ದದ ಈ ಮಾರ್ಗವು ನಗರದ ಪ್ರಯಾಣಿಕರಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡುವ ಭರವಸೆ ಮೂಡಿಸಿದೆ. 

ನಗರದ ಅತಿ ಉದ್ದದ ಭೂಗತ ಮಾರ್ಗ

ಪಿಂಕ್ ಲೈನ್, ನಮ್ಮ ಮೆಟ್ರೋ ಇತಿಹಾಸದಲ್ಲೇ ಅತ್ಯಂತ ಸಂಕೀರ್ಣ ಮತ್ತು ಸವಾಲಿನ ಯೋಜನೆಗಳಲ್ಲಿ ಒಂದಾಗಿದೆ. ಈ ಮಾರ್ಗದ ಒಟ್ಟು 21 ಕಿಲೋಮೀಟರ್‌ಗಳಲ್ಲಿ, ಸುಮಾರು 13.76 ಕಿಲೋಮೀಟರ್‌ಗಳಷ್ಟು ಬೃಹತ್ ಭೂಗತ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಉಳಿದಂತೆ, ಕಾಳೇನ ಅಗ್ರಹಾರ ಮತ್ತು ತಾವರೆಕೆರೆ ನಡುವೆ 2.5 ಕಿಲೋಮೀಟರ್ ಎತ್ತರಿಸಿದ ಮಾರ್ಗವೂ ಇದರ ಭಾಗವಾಗಿದೆ. 

ದಕ್ಷಿಣ ಬೆಂಗಳೂರಿನ ಪ್ರಮುಖ ಪ್ರದೇಶಗಳಿಗೆ ಸಂಪರ್ಕ

ಈ ಹೊಸ ಮಾರ್ಗವು ದಕ್ಷಿಣ ಬೆಂಗಳೂರಿನ ಪ್ರಮುಖ ವಸತಿ ಮತ್ತು ವಾಣಿಜ್ಯ ಪ್ರದೇಶಗಳಾದ ಕಾಳೇನ ಅಗ್ರಹಾರ, ಹುಳಿಮಾವು, ಪ್ರತಿಷ್ಠಿತ ಐಐಎಂ-ಬೆಂಗಳೂರು, ಜೆ.ಪಿ. ನಗರ 4ನೇ ಹಂತ, ಜಯದೇವ ಮತ್ತು ತಾವರೆಕೆರೆ ಮೂಲಕ ಹಾದುಹೋಗಲಿದೆ. 

ಇತರ ಮೆಟ್ರೋ ಮಾರ್ಗಗಳೊಂದಿಗೆ ಸುಲಭ ಸಂಪರ್ಕ

ಪಿಂಕ್ ಲೈನ್‌ನ ಅತಿ ದೊಡ್ಡ ಅನುಕೂಲವೆಂದರೆ, ಇದು ನಗರದ ಬಹುತೇಕ ಎಲ್ಲಾ ಮೆಟ್ರೋ ಮಾರ್ಗಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಯಾಣಿಕರು ಜಯದೇವ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ, ಎಂ.ಜಿ. ರಸ್ತೆಯಲ್ಲಿ ನೇರಳೆ ಮಾರ್ಗಕ್ಕೆ, ನಾಗವಾರದಲ್ಲಿ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗಕ್ಕೆ, ಡೈರಿ ಸರ್ಕಲ್‌ನಲ್ಲಿ ಕೆಂಪು ಮಾರ್ಗಕ್ಕೆ ಮತ್ತು ಜೆ.ಪಿ. ನಗರ 4ನೇ ಹಂತದಲ್ಲಿ ಆರೆಂಜ್ ಮಾರ್ಗಕ್ಕೆ ಸುಲಭವಾಗಿ ಬದಲಾಯಿಸಿಕೊಳ್ಳಬಹುದು. 

Tags:    

Similar News