Toor Dal Procurement| 9.67 ಲಕ್ಷ ಟನ್ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ
ರಾಜ್ಯ ಸರ್ಕಾರವು 12.70 ಲಕ್ಷ ಟನ್ ತೊಗರಿ ಖರೀದಿಗೆ ಬೇಡಿಕೆ ಸಲ್ಲಿಸಿತ್ತು. ಈ ಸಂಬಂಧ ಎರಡು-ಮೂರು ಬಾರಿ ಕೇಂದ್ರ ಸಚಿವರ ಜತೆ ಮಾತುಕತೆ ನಡೆಸಿ, ರೈತರ ಸಂಕಷ್ಟ ಮನವರಿಕೆ ಮಾಡಿಕೊಟ್ಟಿತ್ತು.
ಕರ್ನಾಟಕದಿಂದ 9.67 ಲಕ್ಷ ಟನ್ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಸಂಕಷ್ಟದಲ್ಲಿರುವ ರಾಜ್ಯದ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿದ್ದ ಪರಿಣಾಮ ಎಂಎಸ್‌ಪಿ ಅನ್ವಯ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರವು 12.70 ಲಕ್ಷ ಟನ್ ತೊಗರಿ ಖರೀದಿಗೆ ಬೇಡಿಕೆ ಸಲ್ಲಿಸಿತ್ತು. ಈ ಸಂಬಂಧ ಎರಡು-ಮೂರು ಬಾರಿ ಕೇಂದ್ರ ಸಚಿವರ ಜತೆ ಮಾತುಕತೆ ನಡೆಸಿ, ರೈತರ ಸಂಕಷ್ಟ ಮನವರಿಕೆ ಮಾಡಿಕೊಟ್ಟಿತ್ತು. ಮಂಗಳವಾರ ಹಾಗೂ ಬುಧವಾರ ರಾಜ್ಯದ ಸಂಸದರು ಕೂಡ ಕೇಂದ್ರದ ಕೃಷಿ ಸಚಿವರನ್ನು ಭೇಟಿ ಮಾಡಿ ಒತ್ತಡ ಹಾಕಿದ್ದರಿಂದಾಗಿ ತೊಗರಿ ಖರೀದಿಗೆ ಹಸಿರು ನಿಶಾನೆ ತೋರಿದೆ.
ಬೆಳಗಾವಿ ಸುವರ್ಣಸೌಧದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ನಾವು 12.70 ಲಕ್ಷ ಟನ್ ತೊಗರಿ ಖರೀದಿಗೆ ಬೇಡಿಕೆ ಇಟ್ಟಿದ್ದೆವು. ಕೇಂದ್ರ ಸರ್ಕಾರ 9.67 ಲಕ್ಷ ಟನ್ ಖರೀದಿಗೆ ಅನುಮತಿ ನೀಡಿದೆ. ಮಹಾರಾಷ್ಟ್ರದ ನಂತರ ಕರ್ನಾಟಕದಲ್ಲೇ ಅತಿ ಹೆಚ್ಚು ತೊಗರಿ ಬೆಳೆಯಲಾಗುತ್ತಿದೆ. ಜತೆಗೆ ಬೇಡಿಕೆಯೂ ಇದೆ ಎಂದು ಹೇಳಿದರು.
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದ್ದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈಗ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ. ಅದಕ್ಕಾಗಿ ಬಿಜೆಪಿ ಸಂಸದರು ಹಾಗೂ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ನಾವು ಬಿಜೆಪಿ ಹಾಗೂ ಜೆಡಿಎಸ್ ಅವರಂತೆ ಬರೀ ವಿರೋಧ ಮಾಡುವುದಿಲ್ಲ. ಒಳ್ಳೆಯ ಕೆಲಸ ಮಾಡಿದ್ದರೆ ಧನ್ಯವಾದ ತಿಳಿಸುತ್ತೇವೆ. ಇಲ್ಲವಾದರೆ ವಿರೋಧವನ್ನು ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.
ಮೆಕ್ಕೆಜೋಳ ಸಮಸ್ಯೆಯೂ ವಿಪರೀತವಾಗಿದೆ. ಮೆಕ್ಕೆಜೋಳ ಖರೀದಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಪತ್ರ ಬರೆದರೂ ಈವರೆಗೆ ಸ್ಪಂದಿಸಿಲ್ಲ. ತೊಗರಿ ಖರೀದಿಗೆ ತೋರಿದ ಉತ್ಸಾಹವನ್ನು ಮೆಕ್ಕೆಜೋಳ ಖರೀದಿಗೆ ತೋರಿಸುತ್ತಿಲ್ಲ. ಜೋಶಿ ಅವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗುತ್ತಿದೆ. ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಜೋಶಿ ಅವರು ಮೆಕ್ಕೆಜೋಳ ಖರೀದಿಗೂ ಒತ್ತಡ ಹಾಕಬೇಕು. ರೈತರ ಸಮಸ್ಯೆಗಳನ್ನು ಅರಿತು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಜೋಶಿ ಅವರು ಮೆಕ್ಕೆಜೋಳ ಖರೀದಿಗೂ ಒತ್ತಡ ಹಾಕಿದರೆ ಅವರಿಗೆ ನಾಲ್ಕು ಬಾರಿ ಅಭಿನಂದನೆ ಹೇಳುತ್ತೇನೆ. ರಾಜ್ಯದಲ್ಲಿ 24 ಟನ್ ಮೆಕ್ಕೆಜೋಳ ಖರೀದಿಗೆ ಮನವಿ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಹಾಗೂ ನಾನು ಇಬ್ಬರೂ ಕೂಡ ಜೋಶಿ ಅವರಿಗೆ ಪತ್ರ ಬರೆದಿದ್ದೇವೆ. ಅವರೂ ಕೂಡ ಪ್ರಯತ್ನ ಮಾಡಿದರೆ ಖಂಡಿತ ಫಲ ಸಿಗಲಿದೆ ಎಂದು ಹೇಳಿದರು.
ಪ್ರತಿಭಟನೆ ನಡೆಸುವುದರಿಂದ ರೈತರಿಗೆ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರತಿಭಟನೆಗಳಿಗೆ ಹೋಗಿ ಸುಳ್ಳು ಮಾಹಿತಿ ನೀಡುವುದನ್ನು ಬಿಟ್ಟು ಸಮಸ್ಯೆ ಬಗೆಹರಿಸಲು ಬಿಜೆಪಿ ನಾಯಕರು ಮುಂದಾಗಬೇಕು. ಮೆಕ್ಕೆಜೋಳ ಖರೀದಿಗೆ ಉತ್ತೇಜನ ನೀಡುವ ಸಲುವಾಗಿ ಎಥೆನಾಲ್, ಕೆಎಂಎಫ್, ಪೌಲ್ಟ್ರಿಯವರಿಗೆ ಒತ್ತಡ ಹಾಕಿ ಖರೀದಿಗೆ ಸೂಚಿಸಿದ್ದೇವೆ. ಕೇಂದ್ರ ಸರ್ಕಾರ ಕೂಡ ಮೆಕ್ಕೆಜೋಳ ಖರೀದಿಸಿದರೆ ರೈತರ ಸಂಕಷ್ಟ ಬಗೆಹರಿಯಲಿದೆ ಎಂದು ಚೆಲುವರಾಯಸ್ವಾಮಿ ಹೇಳಿದರು.
ತೊಗರಿ ಖರೀದಿಗೆ ಒತ್ತಡ ಹಾಕಿದ್ದ ಖರ್ಗೆ
ರೈತರಿಗೆ ಎಂಎಸ್‌ಪಿ ದರದಲ್ಲಿ ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದರು.
ತೊಗರಿಗೆ ಎಂಎಸ್‌ಪಿ ದರ 8,000 ರೂ. ಇದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 5,800 ರಿಂದ 6,700 ರಂತೆ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರವು ಖರೀದಿ ಕೇಂದ್ರಗಳನ್ನು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಮಾತ್ರ ತೆರೆಯುತ್ತದೆ. ಏಕಕಾಲದಲ್ಲಿ ಬೆಳೆ ಮಾರುಕಟ್ಟೆಗೆ ಬಂದಿರುವುದರಿಂದ ಬೆಲೆ ಕುಸಿತವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು.
ಕಲಬುರಗಿ ಜಿಲ್ಲೆಯೊಂದರಲ್ಲೇ ತೊಗರಿ ಉತ್ಪಾದನೆ ಶೇ 50 ಕ್ಕಿಂತ ಹೆಚ್ಚಿದೆ. ಇದು ರಾಷ್ಟ್ರೀಯ ಉತ್ಪಾದನೆಯ ಶೇ12-15 ರಷ್ಟು ಕೊಡುಗೆ ನೀಡಲಿದೆ. ತೊಗರಿ ಬೆಳೆ ನಮ್ಮ ಸ್ಥಳೀಯ ಆರ್ಥಿಕತೆಯ ಬೆನ್ನೆಲುಬು. ಸಾವಿರಾರು ಕುಟುಂಬಗಳಿಗೆ ಪ್ರಾಥಮಿಕ ಜೀವನೋಪಾಯ ಕಲ್ಪಿಸಿದೆ ಎಂದು ಹೇಳಿದ್ದರು.