ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಈ ಅರ್ಜಿಯನ್ನು ತಿರಸ್ಕರಿಸಿದ್ದು, ಕೆಳ ನ್ಯಾಯಾಲಯದ ನ್ಯಾಯಾಧೀಶರ ಅಭಿಪ್ರಾಯಗಳು ಪೂರ್ವಾಗ್ರಹಪೀಡಿತವಾಗಿವೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಹೇಳಿದೆ.

Update: 2025-12-11 10:57 GMT

ಪ್ರಜ್ವಲ್ ರೇವಣ್ಣ

Click the Play button to listen to article

ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲೂ ಹಿನ್ನೆಡೆಯಾಗಿದೆ. ತಮ್ಮ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಒಂದು ಕೋರ್ಟ್‌ನಿಂದ ಇನ್ನೊಂದು ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ಪ್ರಜ್ವಲ್ ರೇವಣ್ಣ ಅವರು, ತಮ್ಮ ವಿರುದ್ಧ ಬಾಕಿ ಇರುವ ಇನ್ನೂ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು 81ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಿಂದ ಬೇರೆ ಕೋರ್ಟ್‌ಗೆ ವರ್ಗಾಯಿಸುವಂತೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಈ ಅರ್ಜಿಯನ್ನು ತಿರಸ್ಕರಿಸಿದ್ದು, ಕೆಳ ನ್ಯಾಯಾಲಯದ ನ್ಯಾಯಾಧೀಶರ ಅಭಿಪ್ರಾಯಗಳು ಪೂರ್ವಾಗ್ರಹಪೀಡಿತವಾಗಿವೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಹೇಳಿದೆ. ನ್ಯಾಯಾಧೀಶರು ಪ್ರಸ್ತುತ ಪ್ರಕರಣದಲ್ಲಿ ಹಾಜರುಪಡಿಸಲಾಗುವ ಸಾಕ್ಷ್ಯಗಳ ಆಧಾರದ ಮೇಲೆ ತೀರ್ಪು ನೀಡಬೇಕು, ಹಿಂದಿನ ಪ್ರಕರಣದ ತೀರ್ಪಿನ ಆಧಾರದ ಮೇಲೆ ಅಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಜಿಲ್ಲಾ ನ್ಯಾಯಾಂಗದ ನೈತಿಕತೆಯನ್ನು ಎತ್ತಿಹಿಡಿಯುವ ಮಹತ್ವವನ್ನು ಒತ್ತಿ ಹೇಳಿದ ಸುಪ್ರೀಂ ಕೋರ್ಟ್‌ನ ಸಿಜೆ, ʻʻಈ ವ್ಯಕ್ತಿ ಸುಪ್ರೀಂ ಕೋರ್ಟ್‌ಗೆ ಹೋಗಿ ಜಿಲ್ಲಾ ಕೋರ್ಟ್ ವಿರುದ್ಧ ಆದೇಶ ಪಡೆದಿದ್ದಾರೆ ಎಂಬ ಸಂದೇಶವನ್ನು ಕಳುಹಿಸಲು ಸಾಧ್ಯವಿಲ್ಲ. ನಾವು ಜಿಲ್ಲಾ ನ್ಯಾಯಾಂಗದ ನೈತಿಕತೆಯನ್ನು ಉನ್ನತ ಮಟ್ಟದಲ್ಲಿ ಇಡಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಪ್ರಜ್ವಲ್ ರೇವಣ್ಣ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಆದೇಶ ನೀಡಿದೆ.

ಜೀವಾವಧಿ ಶಿಕ್ಷೆ ಪ್ರಶ್ನಿಸಿದ ಮಧ್ಯಂತರ ಅರ್ಜಿ ವಜಾ

ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಅಮಾನತು ಮಾಡುವಂತೆ ಹಾಗೂ ಜಾಮೀನು ನೀಡುವಂತೆ ಕೋರಿ  ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್‌ ಈ ಹಿಂದೆ ವಜಾಗೊಳಿಸಿತ್ತು. ಕೆ.ಆರ್. ನಗರ ಮೂಲದ ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಆರೋಪದ ಮೇಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಚೆಗೆ ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮತ್ತು ಟಿ. ವೆಂಕಟೇಶ್ ನಾಯ್ಕ್ ನೇತೃತ್ವದ ಪೀಠವು ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿ, ಜಾಮೀನು ನೀಡಲು ನಿರಾಕರಿತ್ತು. 

ಪ್ರಕರಣದ ಹಿನ್ನೆಲೆ

ಹೊಳೆನರಸೀಪುರದ ಗನ್ನಿಕಾಡದ ತೋಟದ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಪ್ರಜ್ವಲ್ ರೇವಣ್ಣ ಮೇಲಿತ್ತು. 2021 ರಲ್ಲಿ ಹಾಸನದ ತೋಟದ ಮನೆ ಮತ್ತು ಬೆಂಗಳೂರಿನ ನಿವಾಸದಲ್ಲಿ ಎರಡು ಬಾರಿ ಅತ್ಯಾಚಾರ ನಡೆಸಿದ್ದು, ಈ ಕೃತ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಕಳೆದ ಆಗಸ್ಟ್ 2 ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಪ್ರಜ್ವಲ್‌ ರೇವಣ್ಣಗೆ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ದೋಷಿ ಎಂದು ಪ್ರಕಟಿಸಿ, ಜೀವಾವಧಿ ಶಿಕ್ಷೆ ಹಾಗೂ 11.50 ಲಕ್ಷ ರೂ. ದಂಡ ವಿಧಿಸಿತ್ತು.  

Tags:    

Similar News