ಅರಣ್ಯದಲ್ಲಿ ಅಕ್ರಮ ರೆಸಾರ್ಟ್‌ಗಳು: ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ ಶ್ರೀಮಂತರ ಮೋಜು ಮಸ್ತಿ
ರೈತರ ಮೇಲೆ ಅಕ್ರಮ ರೆಸಾರ್ಟ್‌ಗಳ ಹಾವಳಿಯ ನೇರ ಪರಿಣಾಮವಾಗಿದೆ. ಯಾವಾಗ ರೆಸಾರ್ಟ್‌ಗಳು ಪ್ರಾಣಿಗಳ ಓಡಾಟದ ಜಾಗವನ್ನು ಆಕ್ರಮಿಸಿಕೊಂಡವೋ, ಆಗ ಪ್ರಾಣಿಗಳು ಪರ್ಯಾಯ ಮಾರ್ಗದಿಂದ ರೈತರ ಜಮೀನಿಗೆ ನುಗ್ಗುತ್ತಿವೆ.
ರಾಜ್ಯವು ತನ್ನ ಶ್ರೀಮಂತ ಜೀವ ವೈವಿಧ್ಯ ಮತ್ತು ದಟ್ಟವಾದ ಅರಣ್ಯ ಸಂಪತ್ತಿಗೆ ಹೆಸರುವಾಸಿಯಾಗಿದೆ. ಬಂಡೀಪುರ, ನಾಗರಹೊಳೆ, ಭದ್ರಾ, ದಾಂಡೇಲಿ ಮತ್ತು ಕುದುರೆಮುಖದಂತಹ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿ ಧಾಮಗಳು ರಾಜ್ಯದ ಹೆಮ್ಮೆಯಾಗಿವೆ. ಆದರೆ, ಈ ನಿಸರ್ಗ ಸಂಪತ್ತಿನ ಅಂಚಿನಲ್ಲಿಯೇ ಈಗ 'ಪ್ರವಾಸೋದ್ಯಮ'ದ ಹೆಸರಿನಲ್ಲಿ ವಿನಾಶದ ಬೀಜ ಬಿತ್ತಲಾಗುತ್ತಿದೆ.
ಅರಣ್ಯದಂಚಿನ ಪರಿಸರ ಸೂಕ್ಷ್ಮ ವಲಯಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಅಕ್ರಮ ರೆಸಾರ್ಟ್‌ಗಳು ಮತ್ತು ಹೋಮ್‌ಸ್ಟೇಗಳು ವನ್ಯಜೀವಿಗಳ ಬದುಕಿಗೆ ಕಂಟಕವಾಗಿ ಪರಿಣಮಿಸಿವೆ. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) 2017ರಲ್ಲೇ ಈ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದರೂ, ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಲು ಬರೋಬ್ಬರಿ ಎಂಟು ವರ್ಷಗಳನ್ನು ತೆಗೆದುಕೊಂಡಿದೆ. ಇದೀಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಅರಣ್ಯ ಇಲಾಖೆ ಅಕ್ರಮ ರೆಸಾರ್ಟ್‌ಗಳ ವಿರುದ್ಧ ಚಾಟಿ ಬೀಸಲು ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಈಶ್ವರ ಖಂಡ್ರೆ ಪ್ರಸ್ತಾಪಿಸಿರುವಂತೆ, ಈ ರೆಸಾರ್ಟ್‌ಗಳು ಕೇವಲ ಭೂಮಿಯ ಒತ್ತುವರಿ ಸಮಸ್ಯೆಯಲ್ಲ, ಬದಲಾಗಿ ಅವು ವನ್ಯಜೀವಿಗಳ ನೈಸರ್ಗಿಕ ವರ್ತನೆಯನ್ನೇ ಬದಲಿಸುತ್ತಿವೆ. ಕಾಡು ಪ್ರಾಣಿಗಳಿಗೆ ರಾತ್ರಿ ವೇಳೆ ಅತ್ಯಂತ ನಿರ್ಣಾಯಕ.
ಆದರೆ, ರೆಸಾರ್ಟ್‌ಗಳಲ್ಲಿ ನಡೆಯುವ ಲೇಟ್ ನೈಟ್ ಪಾರ್ಟಿಗಳು, ಡಿಜೆ ಸೌಂಡ್ ಸಿಸ್ಟಮ್‌ಗಳ ಕರ್ಕಶ ಶಬ್ದ ಪ್ರಾಣಿಗಳ ಸ್ವಚ್ಛಂದ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. ಆನೆಗಳು ಮತ್ತು ಹುಲಿಗಳಂತಹ ಪ್ರಾಣಿಗಳು ಶಬ್ದ ಮಾಲಿನ್ಯದಿಂದ ತೀವ್ರ ಒತ್ತಡಕ್ಕೆ ಒಳಗಾಗುತ್ತವೆ. ಅರಣ್ಯದಂಚಿನಲ್ಲಿ ರಾತ್ರಿಯಿಡೀ ಉರಿಯುವ ಹೈ-ಬೀಮ್ ಲೈಟ್‌ಗಳು ಮತ್ತು ಲೇಸರ್ ದೀಪಗಳು ನಿಶಾಚರಿ ಪ್ರಾಣಿಗಳ ದಾರಿ ತಪ್ಪಿಸುತ್ತಿವೆ. ಕೃತಕ ಬೆಳಕು ಕೀಟಗಳಿಂದ ಹಿಡಿದು ಪಕ್ಷಿಗಳವರೆಗೆ ಎಲ್ಲ ಜೀವಿಗಳ ಜೈವಿಕ ಗಡಿಯಾರವನ್ನು ಏರುಪೇರು ಮಾಡುತ್ತಿದೆ. ವನ್ಯಜೀವಿಗಳು ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಸಂಚರಿಸುವ 'ಆನೆ ದಾರಿ' ಅಥವಾ ಕಾರಿಡಾರ್‌ಗಳನ್ನೇ ಒತ್ತುವರಿ ಮಾಡಿಕೊಂಡು ರೆಸಾರ್ಟ್‌ಗಳು ಫೆನ್ಸಿಂಗ್ ಹಾಕಿಕೊಂಡಿವೆ. ಇದರಿಂದ ಪ್ರಾಣಿಗಳ ವಲಸೆ ಮಾರ್ಗ ಬಂದ್ ಆಗಿದೆ ಎಂದು ಹೇಳಲಾಗಿದೆ.
ರೈತರ ಆಕ್ರೋಶ ಮತ್ತು ಮಾನವ-ವನ್ಯಜೀವಿ ಸಂಘರ್ಷ
ಸ್ಥಳೀಯ ರೈತರ ಮೇಲೆ ಅಕ್ರಮ ರೆಸಾರ್ಟ್‌ಗಳ ಹಾವಳಿಯ ನೇರ ಪರಿಣಾಮ ಬೀರುತ್ತದೆ. ಯಾವಾಗ ರೆಸಾರ್ಟ್‌ಗಳು ಪ್ರಾಣಿಗಳ ಓಡಾಟದ ಜಾಗವನ್ನು ಆಕ್ರಮಿಸಿಕೊಂಡವೋ, ಆಗ ಸಹಜವಾಗಿಯೇ ಪ್ರಾಣಿಗಳು ಪರ್ಯಾಯ ಮಾರ್ಗ ಹುಡುಕಿಕೊಂಡು ರೈತರ ಜಮೀನುಗಳಿಗೆ ನುಗ್ಗುತ್ತಿವೆ. ರೆಸಾರ್ಟ್‌ಗಳಲ್ಲಿನ ಶಬ್ದ ಮತ್ತು ಬೆಳಕಿನಿಂದ ಬೆದರುವ ಆನೆಗಳು ದಿಕ್ಕಾಪಾಲಾಗಿ ಓಡಿ, ಹತ್ತಿರದ ಹಳ್ಳಿಗಳನ್ನು ಪ್ರವೇಶಿಸುತ್ತಿವೆ. ರೈತರು ಬೆಳೆದ ಬೆಳೆ ನಾಶವಾಗುತ್ತಿದ್ದು, ಪ್ರಾಣಹಾನಿಯೂ ಸಂಭವಿಸುತ್ತಿದೆ. ಜಮೀನಿಗೆ ಆನೆ ಬರುವ ಕುರಿತು ಅರಣ್ಯ ಇಲಾಖೆ ಪ್ರಕರಣ ದಾಖಲಿಸುತ್ತದೆ. ಆದರೆ ಪಕ್ಕದಲ್ಲೇ ಇರುವ ರೆಸಾರ್ಟ್‌ನವರು ಎಲೆಕ್ಟ್ರಿಕ್ ಫೆನ್ಸಿಂಗ್ ಹಾಕಿ ಪಾರ್ಟಿ ಮಾಡಿದರೂ ಕೇಳುವವರಿಲ್ಲ ಎಂಬ ರೈತರ ದೂರುಗಳು ನ್ಯಾಯಯುತವಾಗಿವೆ. ಈ ತಾರತಮ್ಯ ನೀತಿಯೇ ರೈತರನ್ನು ಸಿಡಿದೇಳುವಂತೆ ಮಾಡಿದೆ ಮತ್ತು ಸಚಿವರ ಗಮನ ಸೆಳೆಯಲು ಕಾರಣವಾಗಿದೆ ಎಂಬುದು ಪರಿಸರ ಪ್ರೇಮಿಗಳ ಅಭಿಮತವಾಗಿದೆ.
ಪರಿಸರ ಸೂಕ್ಷ್ಮ ವಲಯ ನಿಯಮಗಳೇನು?
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಸಂರಕ್ಷಿತ ಅರಣ್ಯದ ಸುತ್ತಮುತ್ತಲಿನ ನಿರ್ದಿಷ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲಾಗುತ್ತದೆ. ಅಲ್ಲಿ ವಾಣಿಜ್ಯ ಉದ್ದೇಶದ ಬೃಹತ್ ಹೋಟೆಲ್ ಅಥವಾ ರೆಸಾರ್ಟ್ ನಿರ್ಮಾಣಕ್ಕೆ ನಿರ್ಬಂಧವಿದೆ. ರಾತ್ರಿ ವೇಳೆ ಕೃತಕ ಬೆಳಕು ಮತ್ತು ಶಬ್ದ ಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕೃಷಿ ಭೂಮಿಯನ್ನು ವಾಣಿಜ್ಯ ಬಳಕೆಗೆ ಪರಿವರ್ತಿಸುವುದನ್ನು ನಿಯಂತ್ರಿಸಲಾಗುತ್ತದೆ. ಆದರೆ, ರಾಜ್ಯದಲ್ಲಿ ಈ ನಿಯಮಗಳು ಕೇವಲ ಕಾಗದದ ಮೇಲಿದ್ದು, ಸ್ಥಳೀಯ ಪಂಚಾಯಿತಿ ಮಟ್ಟದ ಭ್ರಷ್ಟಾಚಾರದಿಂದಾಗಿ ಅನುಷ್ಠಾನಗೊಂಡಿಲ್ಲ ಎಂದು ಅರಣ್ಯ ಇಲಾಖೆಯ ಮೂಲಗಳು ಹೇಳಿವೆ.
2017ರ ಸಿಎಜಿ ವರದಿ ಏನು ಹೇಳುತ್ತದೆ?
ರಾಜ್ಯದ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಸಂರಕ್ಷಣೆಯ ಇತಿಹಾಸವನ್ನು ಅವಲೋಕಿಸಿದಾಗ, 2017ರಲ್ಲಿ ಸಿಎಜಿ ನೀಡಿದ ವರದಿಯು ಒಂದು ಕರಾಳ ಅಧ್ಯಾಯವಾಗಿ ಗೋಚರಿಸುತ್ತದೆ. ಈ ವರದಿಯು ಕೇವಲ ಅಂಕಿಅಂಶಗಳ ಕಡತವಾಗಿರದೆ, ರಾಜ್ಯದ ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಯು ಪರಿಸರ ಸಂರಕ್ಷಣೆಯ ವಿಷಯದಲ್ಲಿ ತೋರಿದ ಘೋರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ರೆಸಾರ್ಟ್‌ಗಳ ಕುರಿತು ಸಿಎಜಿ ಬಯಲಿಗೆಳೆದ ಸತ್ಯಗಳು ಆಘಾತಕಾರಿಯಾಗಿದ್ದವು.
2017ರಲ್ಲಿ ಸಿಎಜಿ ನೀಡಿದ ವರದಿಯು ರಾಜ್ಯದ ಅರಣ್ಯ ಸಂರಕ್ಷಣೆಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಂತಿದೆ. ಸಿಎಜಿ ಸಲ್ಲಿಸಿದ ವರದಿಯಲ್ಲಿ, ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶವಾದ ಬಂಡೀಪುರದ ಪರಿಸರ ಸೂಕ್ಷ್ಮ ವಲಯದಲ್ಲಿ ಕಾರ್ಯಾಚರಿಸುತ್ತಿರುವ 19 ರೆಸಾರ್ಟ್‌ಗಳ ಪೈಕಿ ಬರೋಬ್ಬರಿ 13 ರೆಸಾರ್ಟ್‌ಗಳಿಗೆ ಅರಣ್ಯ ಇಲಾಖೆಯ ಅನುಮೋದನೆಯೇ ಇರಲಿಲ್ಲ ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿತ್ತು. ಅಂದರೆ, ಶೇ. 70ರಷ್ಟು ವಾಣಿಜ್ಯ ಚಟುವಟಿಕೆಗಳು ಕಾನೂನುಬಾಹಿರವಾಗಿ ನಡೆಯುತ್ತಿದ್ದವು. ಕೇವಲ ಬಂಡೀಪುರವಲ್ಲದೆ, ರಾಜ್ಯದ ಇತರೆ ಅಭಯಾರಣ್ಯಗಳ ಅಂಚಿನಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದು ಸಿಎಜಿ ಎಚ್ಚರಿಸಿತ್ತು. ಕಂದಾಯ ಭೂಮಿ ಅಥವಾ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸುವಾಗ ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಪರಿಸರ ಸೂಕ್ಷ್ಮ ವಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬೃಹತ್ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಒಂದು ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಇಷ್ಟೆಲ್ಲಾ ದಾಖಲೆಗಳಿದ್ದರೂ, ಕಳೆದ ಎಂಟು ವರ್ಷಗಳಿಂದ ಸರ್ಕಾರಗಳು ಈ ವರದಿಯನ್ನು ಗಂಭೀರವಾಗಿ ಪರಿಗಣಿಸದೆ, ಅಕ್ರಮ ರೆಸಾರ್ಟ್ ಮಾಲೀಕರ ಲಾಬಿಗೆ ಮಣಿದಿದ್ದವು ಎಂದು ಸಿಎಜಿಯ ಮೂಲಗಳು ಹೇಳಿವೆ.
ಕಾಯ್ದೆಗಳ ಉಲ್ಲಂಘನೆ ಮತ್ತು ವ್ಯವಸ್ಥಿತ ಪಿತೂರಿ
ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಗಳ ಅಡಿಯಲ್ಲಿ, ಅರಣ್ಯದಂಚಿನ ಜಮೀನುಗಳನ್ನು ವಾಣಿಜ್ಯ ಉದ್ದೇಶಗಳಿಗೆ ಪರಿವರ್ತಿಸುವಾಗ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ, ಈ 13 ಅಕ್ರಮ ರೆಸಾರ್ಟ್‌ಗಳ ವಿಷಯದಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ನಡುವೆ ಒಂದು ರೀತಿಯ ಅಘೋಷಿತ ಹೊಂದಾಣಿಕೆ ಅಥವಾ ಸಮನ್ವಯದ ಕೊರತೆ ಎದ್ದು ಕಾಣುತ್ತಿತ್ತು. ಕಂದಾಯ ಅಧಿಕಾರಿಗಳು ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯದೆಯೇ ಭೂ ಪರಿವರ್ತನೆಗೆ ಅವಕಾಶ ನೀಡಿದ್ದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಮೂಗು ಕೆಳಗೇ ನಡೆಯುತ್ತಿದ್ದ ಬೃಹತ್ ನಿರ್ಮಾಣ ಕಾಮಗಾರಿಗಳನ್ನು ತಡೆಯುವಲ್ಲಿ ವಿಫಲರಾಗಿದ್ದರು. ಇದು ಕೇವಲ ನಿರ್ಲಕ್ಷ್ಯವಷ್ಟೇ ಅಲ್ಲ, ಪ್ರಭಾವಿ ವ್ಯಕ್ತಿಗಳು ಮತ್ತು ಹಣದ ಬಲದ ಮುಂದೆ ಕಾನೂನು ಮಂಡಿಯೂರಿದ ಸ್ಪಷ್ಟ ನಿದರ್ಶನವಾಗಿತ್ತು.
ಸಿಎಜಿ ವರದಿಯು ಎತ್ತಿ ತೋರಿಸಿದ ಈ ಅಕ್ರಮ ರೆಸಾರ್ಟ್‌ಗಳು ಬಂಡೀಪುರದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಅಪಾರ ಹಾನಿಯುಂಟುಮಾಡಿವೆ. ಹುಲಿ, ಆನೆ ಮತ್ತು ಚಿರತೆಗಳಂತಹ ಪ್ರಾಣಿಗಳ ಮುಕ್ತ ಸಂಚಾರಕ್ಕೆ ಅಗತ್ಯವಿರುವ ವಲಸೆ ಮಾರ್ಗಗಳನ್ನು ಈ ರೆಸಾರ್ಟ್‌ಗಳು ಕಾಂಪೌಂಡ್ ಗೋಡೆಗಳು ಮತ್ತು ವಿದ್ಯುತ್ ಬೇಲಿಗಳ ಮೂಲಕ ಬಂದ್ ಮಾಡಿವೆ. ಅನುಮತಿಯಿಲ್ಲದ ಈ ರೆಸಾರ್ಟ್‌ಗಳಲ್ಲಿ ನಡೆಯುತ್ತಿದ್ದ ಮೋಜು-ಮಸ್ತಿ, ರಾತ್ರಿಯಿಡೀ ಉರಿಯುವ ದೀಪಗಳು ಮತ್ತು ವಾಹನಗಳ ಸಂಚಾರ ಶಬ್ದವು ವನ್ಯಜೀವಿಗಳ ನೈಸರ್ಗಿಕ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿವೆ. ಇದು ಅಂತಿಮವಾಗಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಲು ಕಾರಣವಾಯಿತು ಎನ್ನಲಾಗಿದೆ.
ಕಠಿಣ ಕ್ರಮ ಕೈಗೊಳ್ಳಲು ಎದುರಾಗುವ ಸವಾಲುಗಳು
ಸಚಿವರ ಇಚ್ಛಾಶಕ್ತಿ ಪ್ರಬಲವಾಗಿದ್ದರೂ, ವಾಸ್ತವದಲ್ಲಿ ಈ ಆದೇಶವನ್ನು ಜಾರಿಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ರಾಜ್ಯದ ಬಹುತೇಕ ಅರಣ್ಯದಂಚಿನ ರೆಸಾರ್ಟ್‌ಗಳು ಸಾಮಾನ್ಯ ವ್ಯಕ್ತಿಗಳ ಒಡೆತನದಲ್ಲಿಲ್ಲ. ಇವುಗಳ ಹಿಂದೆ ಪ್ರಭಾವಿ ರಾಜಕಾರಣಿಗಳು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ಬೃಹತ್ ಉದ್ಯಮಿಗಳ ಕೈವಾಡವಿರುತ್ತದೆ. ಹಲವು ರೆಸಾರ್ಟ್‌ಗಳು 'ಬಿನಾಮಿ' ಹೆಸರಿನಲ್ಲಿ ನಡೆಯುತ್ತಿವೆ. ಸ್ಥಳೀಯ ಅರಣ್ಯಾಧಿಕಾರಿಗಳು ನೋಟಿಸ್ ನೀಡಲು ಮುಂದಾದದರೆ ರಾಜಕೀಯ ಒತ್ತಡಗಳು ಸಹಜವಾಗಿ ಬರುತ್ತವೆ.
ನೋಟಿಸ್ ನೀಡಿದ ತಕ್ಷಣ ರೆಸಾರ್ಟ್ ಮಾಲೀಕರು ಸುಮ್ಮನೆ ಕೂರುವುದಿಲ್ಲ. ಅವರು ದೇಶದ ಅತ್ಯುತ್ತಮ ವಕೀಲರನ್ನು ನೇಮಿಸಿಕೊಂಡು ನ್ಯಾಯಾಲಯದ ಮೊರೆ ಹೋಗುತ್ತಾರೆ. ಸ್ಥಳೀಯರಿಗೆ ಉದ್ಯೋಗ ನೀಡಿರುವುದು ಸೇರಿದಂತೆ ಹಲವು ಅಂಶಗಳನ್ನು ಮುಂದಿಡಲಾಗುತ್ತದೆ. ಏಕಾಏಕಿ ತೆರವುಗೊಳಿಸಿದರೆ ಹೂಡಿಕೆ ನಷ್ಟವಾಗುತ್ತದೆ ಎಂಬ ವಾದವನ್ನು ಮುಂದಿಟ್ಟು ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಸಾಧ್ಯತೆ ಇದೆ. ತಡೆಯಾಜ್ಞೆ ಬಂದರೆ ಅರಣ್ಯ ಇಲಾಖೆಯ ಕೈಕಟ್ಟಿ ಹಾಕಿದಂತಾಗುತ್ತದೆ. ಕಾನೂನು ಹೋರಾಟ ವರ್ಷಗಟ್ಟಲೆ ಎಳೆಯುವುದರಿಂದ ಕಾರ್ಯಾಚರಣೆ ತಣ್ಣಗಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.
ಪ್ರವಾಸೋದ್ಯಮದ ಹೆಸರಿನಲ್ಲಿ ಕೆಲವೇ ಕೆಲವು ಶ್ರೀಮಂತರ ಮೋಜು-ಮಸ್ತಿಗಾಗಿ, ಮೂಕ ಪ್ರಾಣಿಗಳ ಬದುಕನ್ನು ನರಕವಾಗಿಸುವುದು ಮತ್ತು ಅನ್ನದಾತ ರೈತನನ್ನು ಸಂಕಷ್ಟಕ್ಕೆ ದೂಡುವುದು ನಾಗರಿಕ ಸಮಾಜಕ್ಕೆ ಶೋಭೆ ತರುವಂತದ್ದಲ್ಲ. 2017ರ ಸಿಎಜಿ ವರದಿಯ ಎಚ್ಚರಿಕೆಯನ್ನು ಆಗಲೇ ಪಾಲಿಸಿದ್ದರೆ ಇಂದು ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ. ಈಗಲಾದರೂ ಸಚಿವ ಈಶ್ವರ್ ಖಂಡ್ರೆ ಅವರು ತೋರಿಸಿರುವ ಇಚ್ಛಾಶಕ್ತಿಯನ್ನು ಅಧಿಕಾರಿಗಳು ಕಾರ್ಯರೂಪಕ್ಕೆ ತರಬೇಕಿದೆ. ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸಿ, ಅರಣ್ಯದಂಚಿನಲ್ಲಿ ನಿಶಬ್ದ ಮತ್ತು ಕತ್ತಲೆಯನ್ನು ಮರಳಿ ತಂದರೆ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಕಾಡನ್ನು ಉಳಿಸಲು ಸಾಧ್ಯ. ಇಲ್ಲದಿದ್ದರೆ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಇನ್ನಷ್ಟು ವಿಕೋಪಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ.
ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಮತ್ತು ಸರ್ಕಾರ
ಅಕ್ರಮ ರೆಸಾರ್ಟ್‌ಗಳ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ವನ್ಯಜೀವಿ ಸಲಹಾ ಮಂಡಳಿಯ ಮಾಜಿ ಸದಸ್ಯ ಜೋಸೆಫ್ ಹೂವರ್, "ಮೊದಲಿನಿಂದಲೂ ಅರಣ್ಯ ಪ್ರದೇಶದಲ್ಲಿ ರೆಸಾರ್ಟ್‌ಗಳಿಗೆ ಅವಕಾಶ ನೀಡಬಾರದು ಎಂದು ಹೇಳುತ್ತಲೇ ಬಂದಿದ್ದೇವೆ. ಆದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಮೊದಲು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಸಮನ್ವಯ ಇರಲಿಲ್ಲ. ಆದರೆ, ಈಗಿನ ಸರ್ಕಾರದಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಚಿವರ ನಡುವೆ ಸಮನ್ವಯ ಇದೆ. ಆದರೂ ಸಹ ಅಕ್ರಮ ರೆಸಾರ್ಟ್‌ಗೆ ಕಡಿವಾಣ ಹಾಕಲು ಕಷ್ಟಕರವಾಗಿದೆ. ರೆಸಾರ್ಟ್ ಆರಂಭಕ್ಕೆ ಅರಣ್ಯ ಇಲಾಖೆಯ ನಿರಪೇಕ್ಷಣಾ ಪತ್ರ (ಎನ್‌ಒಸಿ) ಬೇಕೇ ಬೇಕು. ಆದರೆ ಎಷ್ಟು ರೆಸಾರ್ಟ್‌ಗಳು ಎನ್‌ಒಸಿ ಪಡೆದುಕೊಂಡಿವೆ. ಸಿಎಜಿ ವರದಿ ನೀಡಿ ಎಂಟು ವರ್ಷಗಳ ಬಳಿಕ ಸರ್ಕಾರ ಈಗಾಲಾದರೂ ಎಚ್ಚೆತ್ತುಕೊಂಡಿದೆ. ಕಠಿಣ ಕ್ರಮ ಕೈಗೊಳ್ಳುವಲ್ಲಿ ಎಷ್ಟರ ಮಟ್ಟಿಗೆ ಮುಂದಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ," ಎಂದು ಹೇಳಿದರು.
"ರೆಸಾರ್ಟ್‌ನಿಂದ ಸಾಕಾಷ್ಟು ಹಣ ಹರಿದು ಬರುತ್ತದೆ. ರ ಆದೇಶದಲ್ಲಿ ಸಂಪಾದಿಸುವ ಹಣದಲ್ಲಿ ರೈತರಿಗೂ ಲಾಭ ಆಗಬೇಕು ಎಂದು ಹೇಳಿದೆ. ಆದರೆ, ಎಷ್ಟರ ಮಟ್ಟಿಗೆ ರೈತರ ಲಾಭವಾಗುತ್ತಿದೆ. ರೆಸಾರ್ಟ್‌ಗಳನ್ನು ನಿಷೇಧ ಮಾಡಬೇಕು. ಅಲ್ಲದೇ, ಫೆನ್ಸ್‌ಗಳನ್ನು ಹಾಕಬಾರದು ಎಂಬ ನಿಯಮ ಇದೆ. ಇದನ್ನು ಉಲ್ಲಂಘನೆ ಮಾಡಲಾಗಿದೆ. ಬಂಡೀಪುರ ಅರಣ್ಯ ಪ್ರದೇಶದಲ್ಲಿನ ಕುಂದುಕೆರೆ ಎಂಬಲ್ಲಿ ಖಾಸಗಿಯವರು ಫೆನ್ಸ್ ಹಾಕಿದ್ದಾರೆ. ಇದು ಸರಿಯಲ್ಲ. ಇದೇ ಕಾರಣಕ್ಕಾಗಿ ಮಾನವ-ವನ್ಯಜೀವಿ ಸಂಘರ್ಷವಾಗುತ್ತಿದೆ. ವನ್ಯಜೀವಿಗಳು ಓಡಾಡುವ ಪ್ರದೇಶದಲ್ಲಿ ಫೆನ್ಸ್ ಹಾಕಿದರೆ ಅವು ಎಲ್ಲಿ ಓಡಾಡಬೇಕು. ವನ್ಯಜೀವಿಗಳು ನಾಡಿಗೆ ಬರುತ್ತಿರುವುದರಿಂದ ರೈತರು ಬೆಳೆದ ಬೆಳೆಗಳು ಹಾನಿಯಾಗುತ್ತವೆ. ರೈತರು ಸಹ ಸಂಕಷ್ಟ ಅನುಭವಿಸುವಂತಾಗಿದೆ," ಎಂದು ಹೂವರ್ ತಿಳಿಸಿದರು.