ಎಸ್‌ಸಿ ಒಳಮೀಸಲಾತಿಗೆ ಕಾನೂನಿನ ಬಲ: ವಿಧೇಯಕಕ್ಕೆ ಸಂಪುಟ ಅಸ್ತು; 3,600 ಹುದ್ದೆಗಳ ನೇಮಕಾತಿಗೆ ಚಾಲನೆ

ಈ ಹಿಂದೆ ಕೇವಲ ಸರ್ಕಾರಿ ಆದೇಶದ ಮೂಲಕವಷ್ಟೇ ಒಳಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಪ್ರಯತ್ನಿಸಿತ್ತು. ಆದರೆ ಅದು ಕಾನೂನಿನ ತೊಡಕುಗಳನ್ನು ಎದುರಿಸುವ ಸಾಧ್ಯತೆ ಇರುವುದರಿಂದ, ಪ್ರತ್ಯೇಕ ಕಾಯ್ದೆಯನ್ನೇ ರೂಪಿಸಿ ಜಾರಿಗೊಳಿಸಿದೆ.

Update: 2025-12-11 18:37 GMT
Click the Play button to listen to article

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿಯ (ಎಸ್‌ಸಿ) ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಅಂತಿಮ ಮತ್ತು ನಿರ್ಣಾಯಕ ಹೆಜ್ಜೆಯನ್ನಿಟ್ಟಿದೆ. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿದ್ದ ಆದೇಶಕ್ಕೆ ಇದೀಗ ಪೂರ್ಣ ಪ್ರಮಾಣದ ಕಾನೂನಿನ ಮಾನ್ಯತೆ ನೀಡಲು ಸರ್ಕಾರ ಮುಂದಾಗಿದ್ದು, ಗುರುವಾರ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಪರಿಶಿಷ್ಟ ಜಾತಿಗಳು (ಉಪ ವರ್ಗೀಕರಣ) ವಿಧೇಯಕ- 2025’ಕ್ಕೆ ಒಮ್ಮತದ ಅನುಮೋದನೆ ನೀಡಲಾಗಿದೆ.

ಈ ಹಿಂದೆ ಕೇವಲ ಸರ್ಕಾರಿ ಆದೇಶದ ಮೂಲಕವಷ್ಟೇ ಒಳಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ಪ್ರಯತ್ನಿಸಿತ್ತು. ಆದರೆ ಅದು ಕಾನೂನಿನ ತೊಡಕುಗಳನ್ನು ಎದುರಿಸುವ ಸಾಧ್ಯತೆ ಇರುವುದರಿಂದ, ಪ್ರತ್ಯೇಕ ಕಾಯ್ದೆಯನ್ನೇ ರೂಪಿಸಿ ಜಾರಿಗೊಳಿಸಿದರೆ ನ್ಯಾಯಾಲಯದಲ್ಲೂ ಗಟ್ಟಿ ನೆಲೆ ಸಿಗಲಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ. ಸಂಪುಟದ ಒಪ್ಪಿಗೆ ಸಿಕ್ಕಿರುವುದರಿಂದ ಶುಕ್ರವಾರವೇ ವಿಧಾನಸಭೆಯಲ್ಲಿ ವಿಧೇಯಕ ಮಂಡನೆಯಾಗುವ ಸಾಧ್ಯತೆಗಳಿದ್ದು, ಸೋಮವಾರದ ನಂತರ ಸದನದಲ್ಲಿ ಚರ್ಚೆ ನಡೆಸಿ ಅಂಗೀಕಾರ ಪಡೆಯುವ ವಿಶ್ವಾಸದಲ್ಲಿ ಸರ್ಕಾರವಿದೆ.

ವರ್ಗೀಕರಣ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಲಾಗಿತ್ತು. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗದ ವರದಿ ಮತ್ತು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ರಾಜ್ಯಗಳಿಗೆ ಒಳಮೀಸಲಾತಿ ಕಲ್ಪಿಸುವ ಅಧಿಕಾರವಿದೆ ಎಂಬ ಐತಿಹಾಸಿಕ ತೀರ್ಪಿನ ಅನ್ವಯ, ಈ ಶೇ.17ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ವರ್ಗೀಕರಿಸಿದೆ. ಇದರನ್ವಯ ಪ್ರವರ್ಗ-ಎ (ಎಡಗೈ ಸಮುದಾಯ)ಗೆ ಶೇ. 6, ಪ್ರವರ್ಗ-ಬಿ (ಬಲಗೈ ಸಮುದಾಯ)ಗೆ ಶೇ. 6 ಹಾಗೂ ಕೊರಚ, ಕೊರಮ, ಲಂಬಾಣಿ, ಬೋವಿ ಸೇರಿದಂತೆ ಇತರೆ ಸ್ಪರ್ಶ್ಯ ಸಮುದಾಯಗಳು ಇರುವ ಪ್ರವರ್ಗ-ಸಿ ಗೆ ಶೇ. 5ರಷ್ಟು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.

ರಾಜ್ಯ ಸರ್ಕಾರವು ಈಗಾಗಲೇ ಈ ನೂತನ ಮೀಸಲಾತಿ ಸೂತ್ರದ ಅನ್ವಯವೇ ಸುಮಾರು 3,600 ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಆದರೆ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಅಂತಿಮ ತೀರ್ಪಿಗೆ ಬದ್ಧರಾಗಿರುವ ಷರತ್ತಿನೊಂದಿಗೆ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಸರ್ಕಾರಕ್ಕೆ ಹಸಿರು ನಿಶಾನೆ ತೋರಿದೆ. ನ್ಯಾಯಾಲಯದಿಂದ ಭಾಗಶಃ ಜಯ ಸಿಕ್ಕಂತಾಗಿರುವುದರಿಂದ, ಇದೀಗ ವಿಧೇಯಕವನ್ನು ಅಂಗೀಕರಿಸುವ ಮೂಲಕ ಕಾನೂನಿನ ಅಧಿಕೃತ ಮುದ್ರೆ ಒತ್ತಲು ಸರ್ಕಾರ ಮುಂದಾಗಿದೆ. ಈ ವಿಧೇಯಕ ಕಾಯ್ದೆಯಾದರೆ, ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ನೇಮಕಾತಿ ಪ್ರಕ್ರಿಯೆಗೆ ವೇಗ ಸಿಗಲಿದ್ದು, ಸಾವಿರಾರು ಉದ್ಯೋಗಾಕಾಂಕ್ಷಿಗಳ ಆತಂಕ ದೂರವಾಗಲಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಏರಿಸಿದ್ದರಿಂದ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣ ಶೇ.50ರ ಮಿತಿಯನ್ನು ಮೀರಿ ಶೇ.56ಕ್ಕೆ ತಲುಪಿತ್ತು. ಇದನ್ನು ಸಮರ್ಥಿಸಿಕೊಳ್ಳಲು ಮತ್ತು ಒಳಮೀಸಲಾತಿಯನ್ನು ವೈಜ್ಞಾನಿಕವಾಗಿ ಹಂಚಿಕೆ ಮಾಡಲು ನ್ಯಾ. ನಾಗಮೋಹನದಾಸ್ ಆಯೋಗದ ವರದಿಯೇ ಸರ್ಕಾರಕ್ಕೆ ಪ್ರಮುಖ ಆಧಾರವಾಗಿದೆ. ಒಟ್ಟಿನಲ್ಲಿ ಈ ವಿಧೇಯಕ ಮಂಡನೆಯಾಗುತ್ತಿರುವುದು ರಾಜ್ಯ ರಾಜಕೀಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

Similar News