ಗದ್ದುಗೆ ಗುದ್ದಾಟ: ಬೆಳಗಾವಿ ತೋಟದ ಮನೆಯಲ್ಲಿ ಡಿಕೆಶಿ ಡಿನ್ನರ್; ಬಲ ಪ್ರದರ್ಶನ’ವಿಫಲವಾಯಿತೇ?
ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭವನ್ನೇ ಬಳಸಿಕೊಂಡ ಡಿ.ಕೆ. ಶಿವಕುಮಾರ್, ಬುಧವಾರ ರಾತ್ರಿ ಬೆಳಗಾವಿಯ ಹೊರವಲಯದಲ್ಲಿರುವ ಕಾಂಗ್ರೆಸ್ ಮುಖಂಡ ಪ್ರವೀಣ್ ದೊಡ್ಡಣ್ಣನವರ್ ಅವರ ತೋಟದ ಮನೆಯಲ್ಲಿ ವಿಶೇಷ ಔತಣಕೂಟವನ್ನು ಆಯೋಜಿಸಿದ್ದರು.
ಡಿ.ಕೆ. ಶಿವಕುಮಾರ್
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ ನಡೆಸಿದ 'ಡಿನ್ನರ್ ಪಾಲಿಟಿಕ್ಸ್' ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಗಾದಿಗೇರಲು ಕಾಯುತ್ತಿರುವ ಡಿ.ಕೆ.ಶಿ, ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಶಾಸಕರು ಸೇರದಿರುವುದು ಕಾಂಗ್ರೆಸ್ ಪಾಳಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ.
ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭವನ್ನೇ ಬಳಸಿಕೊಂಡ ಡಿ.ಕೆ. ಶಿವಕುಮಾರ್, ಬುಧವಾರ ರಾತ್ರಿ ಬೆಳಗಾವಿಯ ಹೊರವಲಯದಲ್ಲಿರುವ ಕಾಂಗ್ರೆಸ್ ಮುಖಂಡ ಪ್ರವೀಣ್ ದೊಡ್ಡಣ್ಣನವರ್ ಅವರ ತೋಟದ ಮನೆಯಲ್ಲಿ ವಿಶೇಷ ಔತಣಕೂಟವನ್ನು ಆಯೋಜಿಸಿದ್ದರು. ಮೇಲ್ನೋಟಕ್ಕೆ ಇದೊಂದು ಸ್ನೇಹಕೂಟದಂತೆ ಕಂಡರೂ, ಆಂತರಿಕವಾಗಿ ಇದು ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಡಿ.ಕೆ.ಶಿ ಅವರ ಶಕ್ತಿ ಪ್ರದರ್ಶನದ ವೇದಿಕೆಯಾಗಿತ್ತು ಎಂದೇ ವಿಶ್ಲೇಷಿಸಲಾಗುತ್ತಿದೆ.
ಸಂಖ್ಯೆಯ ಲೆಕ್ಕಾಚಾರದಲ್ಲಿ ಹಿನ್ನಡೆ?
ತಮ್ಮ ಆಪ್ತ ಶಾಸಕರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಒಗ್ಗೂಡಿಸಿ, ಹೈಕಮಾಂಡ್‌ಗೆ ಪರೋಕ್ಷ ಸಂದೇಶ ರವಾನಿಸುವುದು ಡಿ.ಕೆ.ಶಿ ಅವರ ತಂತ್ರವಾಗಿತ್ತು. ಇದಕ್ಕಾಗಿ ತಮ್ಮ ಮೂವರು ಆಪ್ತ ಶಾಸಕರಿಗೆ ಔತಣಕೂಟದ ಉಸ್ತುವಾರಿ ಮತ್ತು ಶಾಸಕರನ್ನು ಕರೆತರುವ ಜವಾಬ್ದಾರಿಯನ್ನು ಅವರು ನೀಡಿದ್ದರು ಎಂದು ಹೇಳಲಾಗಿದೆ. ಆದರೆ, ಮೂಲಗಳ ಪ್ರಕಾರ ಈ ಸಭೆಗೆ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ.
ತಡರಾತ್ರಿಯವರೆಗೆ ನಡೆದ ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು (MLCs) ಸೇರಿದಂತೆ ಒಟ್ಟು ಭಾಗವಹಿಸಿದವರ ಸಂಖ್ಯೆ ಕೇವಲ 30ರ ಆಸುಪಾಸಿನಲ್ಲಿತ್ತು. ಇದರಲ್ಲಿ ಶಾಸಕರ ಸಂಖ್ಯೆ ಕೇವಲ 22 ಎಂದು ತಿಳಿದುಬಂದಿದೆ. 136 ಶಾಸಕರ ಬಲವಿರುವ ಆಡಳಿತ ಪಕ್ಷದ ಅಧ್ಯಕ್ಷರ ಕರೆಗೆ ಕೇವಲ 22 ಶಾಸಕರು ಹಾಜರಾಗಿರುವುದು ಡಿ.ಕೆ.ಶಿ ಬಣಕ್ಕೆ ಕೊಂಚ ಮುಜುಗರ ತಂದಿದೆ ಎನ್ನಲಾಗುತ್ತಿದೆ.
ಭಾಗವಹಿಸಿದ ಪ್ರಮುಖರು ಯಾರು?
ಈ ಔತಣಕೂಟದಲ್ಲಿ ಡಿ.ಕೆ.ಶಿ ಅವರ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರಮುಖವಾಗಿ ಭಾಗವಹಿಸಿದ್ದರು. ಇವರಲ್ಲದೆ, ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್, ಮಾಗಡಿ ಶಾಸಕ ಬಾಲಕೃಷ್ಣ, ರಾಮನಗರದ ಇಕ್ಬಾಲ್ ಹುಸೇನ್, ಶಿವಗಂಗ ಬಸವರಾಜು ಸೇರಿದಂತೆ ಡಿ.ಕೆ.ಶಿ ಅವರ ಕಟ್ಟಾ ಬೆಂಬಲಿಗರು ಉಪಸ್ಥಿತರಿದ್ದರು.
ವಿಶೇಷವೆಂದರೆ, ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಹಾಗೂ ಉಚ್ಚಾಟಿತಗೊಂಡಿರುವ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕೂಡ ಈ ಡಿನ್ನರ್ ಮೀಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಹುಬ್ಬೇರಿಸಿದೆ.
ಚರ್ಚೆಯಾದ ವಿಷಯಗಳೇನು?
ಒಂದು ಕಡೆ ಸಿದ್ದರಾಮಯ್ಯ ಬಣದ ಶಾಸಕರು "ಮುಂದಿನ ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ" ಎಂದು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹೇಳಿಕೆಗಳಿಗೆ ಟಕ್ಕರ್ ನೀಡುವಂತೆ ಮತ್ತು ಹೈಕಮಾಂಡ್ ಮಟ್ಟದಲ್ಲಿ ತಮ್ಮ ಬಲವನ್ನು ತೋರಿಸುವ ಉದ್ದೇಶದಿಂದ ಡಿ.ಕೆ.ಶಿ ಈ ಕಸರತ್ತು ನಡೆಸಿದ್ದಾರೆ. ಔತಣಕೂಟದ ನೆಪದಲ್ಲಿ ಸೇರಿದ ಶಾಸಕರ ಜೊತೆ ಡಿ.ಕೆ.ಶಿವಕುಮಾರ್ ಅವರು ಪ್ರಸ್ತುತ ಸಿಎಂ ಸಿದ್ದರಾಮಯ್ಯನವರ ನಡೆ ಮತ್ತು ಹೈಕಮಾಂಡ್‌ನ ನಿಲುವುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.