
ಡಿಕೆಶಿ ಸಿಎಂ ಆಗುವುದು ಖಚಿತ; ಜ.6 ಅಥವಾ 9ರವರೆಗೆ ಕಾಯಿರಿ ಎಂದ ಡಿಕೆಶಿ ಆಪ್ತ
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದು ಖಚಿತ. ಜ.6 ಅಥವಾ 9 ರವರೆಗೆ ಕಾದು ನೋಡಿ ಎಂದು ಹೇಳುವುದರೊಂದಿಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸ್ಫೋಟಕ ನೀಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಗೊಂದಲಕ್ಕೆ ತಾತ್ಕಾಲಿಕ ವಿರಾಮ ದೊರೆತು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಂಡಿದೆ. ಆದರೆ, ಅಧಿವೇಶನದ ಮೊದಲ ದಿನವೇ ಸಿಎಂ ಸ್ಥಾನದ ವಿಚಾರವಾಗಿ ಡಿಕೆಶಿ ಬೆಂಬಲಿಗ ಶಾಸಕ ನೀಡಿದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದು ಖಚಿತ. ಜ.6 ಅಥವಾ 9 ರವರೆಗೆ ಕಾದು ನೋಡಿ ಎಂದು ಹೇಳುವುದರೊಂದಿಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸ್ಫೋಟಕ ನೀಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡ ಅವರು ʼದ ಫೆಡರಲ್ ಕರ್ನಾಟಕʼದ ಜತೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರವಾಗಿ ಈಗ ನಾನೇನು ಮಾತನಾಡುವುದಿಲ್ಲ. ಜನವರಿ 6 ಅಥವಾ 9 ರಂದು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಲಿದೆ. ಡಿಕೆಶಿ ಸಿಎಂ ಆಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಬಿಕ್ಕಟ್ಟನ್ನು ಹೈಕಮಾಂಡ್ ನಾಯಕರು ಸದ್ಯ ಬಗೆಹರಿಸಿದ್ದಾರೆ. ನಾಯಕತ್ವ ಬದಲಾವಣೆ ಅಥವಾ ಸಿಎಂ ಆಯ್ಕೆ ವಿಚಾರವಾಗಿ ಯಾರೂ ಮಾತನಾಡದಂತೆ ವರಿಷ್ಠರು ಸೂಚಿಸಿದ್ದಾರೆ. ಈ ಹಿಂದೆ ಡಿಕೆಶಿ ಸಿಎಂ ಆಗಲಿದ್ದಾರೆ ಎಂಬ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ. ಆದರೆ, ವರಿಷ್ಠರು ಮಾತುಕತೆ ನಡೆಸಿರುವ ಕಾರಣ ಅವರಿಗೆ ನಾವೆಲ್ಲರೂ ಗೌರವ ನೀಡಬೇಕು. ಅಂತಿಮ ನಿರ್ಧಾರವನ್ನು ವರಿಷ್ಠರ ತೀರ್ಮಾನಕ್ಕೆ ಬಿಡಲಾಗಿದೆ ಎಂದು ಹೇಳಿದ್ದಾರೆ.
ಸಿಎಂ ಹಾಗೂ ಡಿಸಿಎಂ ನಡುವೆ ನಡೆದ ಬ್ರೇಕ್ ಫಾಸ್ಟ್ ಸಭೆ ಬಳಿಕ ಈ ವಿಷಯದ ಕುರಿತು ಯಾರೂ ಮಾತನಾಡದಂತೆ ಸೂಚಿಸಲಾಗಿದೆ. ಹೈಕಮಾಂಡ್ ಹೇಳಿದಂತೆ ನಾವು ಕೇಳುತ್ತೇವೆ, ಅವರ ತೀರ್ಮಾನ, ಶಿಸ್ತಿಗೆ ಬದ್ಧವಾಗಿದ್ದೇವೆ. ವಿನಾಕಾರಣ ಹೇಳಿಕೆ ನೀಡುವುದರಿಂದ ಗುಂಪುಗಾರಿಕೆ ಸೃಷ್ಟಿಯಾಗಲಿದೆ. ಹಾಗಾಗಿ, ಡಿಕೆಶಿ ಸಿಎಂ ಆಗುವ ಬಗ್ಗೆ ಸಂಶಯ ಇಲ್ಲ, ಇದೇ ಅವಧಿಯಲ್ಲಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

