ನಗರಸಭೆ ವ್ಯಾಪ್ತಿಯಿಂದ ಹಳ್ಳಿಗಳನ್ನು ಕೈಬಿಡುವುದು ಕಷ್ಟ; ಸಚಿವ ಬಿ.ಎಸ್.ಸುರೇಶ್
ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಹೊಸದಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸುವ ಪ್ರಸ್ತಾವನೆಯನ್ನು ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಿದೆ.
ಗ್ರಾಮ ಪಂಚಾಯಿತಿ ಕಾರ್ಯಾಲಯ ಗೋಕಾರ್ಣ
ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಗಳನ್ನು ಉನ್ನತೀಕರಿಸುವ ಸಂದರ್ಭದಲ್ಲಿ ಹತ್ತಿರದ ಗ್ರಾಮಾಂತರ ಪ್ರದೇಶಗಳನ್ನು ಸೇರ್ಪಡೆಗೊಳಿಸಿ ಸರಹದ್ದು ನಿಗದಿಪಡಿಸುವುದು ಅನಿವಾರ್ಯ ಪ್ರಕ್ರಿಯೆಯಾಗಿದೆ. ಆದರೆ, ಒಮ್ಮೆ ಸೇರ್ಪಡೆಗೊಂಡ ನಂತರ ಆ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಯಿಂದ ಕೈಬಿಡುವಂತೆ ಶಾಸಕರು ಮನವಿ ಮಾಡುವುದು ಸಮಂಜಸವಲ್ಲ ಮತ್ತು ಇದು ಕಷ್ಟದ ಕೆಲಸ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರದ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಕುಮಟಾ ಶಾಸಕ ದಿನಕರ್ ಕೇಶವ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರ ವ್ಯಾಪ್ತಿಗೆ ಸೇರ್ಪಡೆಯಾದ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಶಾಸಕರು ತಾಳ್ಮೆ ವಹಿಸಬೇಕು ಎಂದು ಕಿವಿಮಾತು ಹೇಳಿದರು. ರಾಜ್ಯದ ಏಳು ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ ತಲಾ 200 ಕೋಟಿ ರೂಪಾಯಿಯಂತೆ ಒಟ್ಟು 1,400 ಕೋಟಿ ರೂ. ವಿಶೇಷ ಅನುದಾನವನ್ನು ಒದಗಿಸಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಹೊನ್ನಾವರ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ತಿರಸ್ಕೃತ
ಹೊನ್ನಾವರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಮಾತನಾಡಿದ ಸಚಿವರು, ಕರ್ನಾಟಕ ಪೌರಸಭೆಗಳ ಅಧಿನಿಯಮದ ಮಾನದಂಡಗಳನ್ನು ಉಲ್ಲೇಖಿಸಿದರು. ಪುರಸಭೆಯಾಗಿ ಬದಲಾಗಲು ಕನಿಷ್ಠ 20,000 ದಿಂದ 50,000 ಜನಸಂಖ್ಯೆ, ಚದರ ಮೀಟರ್‌ಗೆ 1,500 ಜನಸಾಂದ್ರತೆ, 9 ಲಕ್ಷ ರೂ. ರಾಜಸ್ವ ಆದಾಯ ಹಾಗೂ ಶೇ.50 ರಷ್ಟು ಕೃಷಿಯೇತರ ಚಟುವಟಿಕೆ ಇರಬೇಕು. ಆದರೆ 2011ರ ಜನಗಣತಿಯ ಅನ್ವಯ ಹೊನ್ನಾವರದಲ್ಲಿ 19,109 ಜನಸಂಖ್ಯೆ ಇದ್ದು, ನಿಗದಿತ ಮಾನದಂಡ ತಲುಪದ ಕಾರಣ ಪ್ರಸ್ತಾವನೆಯನ್ನು ಸದ್ಯಕ್ಕೆ ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ದಿನಕರ್ ಶೆಟ್ಟಿ, ಪ್ರಸ್ತುತ ಹೊನ್ನಾವರದಲ್ಲಿ ಜನಸಂಖ್ಯೆ 20 ಸಾವಿರ ದಾಟಿದೆ ಮತ್ತು ವ್ಯಾಪಾರ ವಹಿವಾಟುಗಳು ಹೆಚ್ಚಿವೆ. ಜನರು ಕೃಷಿಯೇತರ ಆದಾಯವನ್ನೇ ನಂಬಿದ್ದಾರೆ. ಆದ್ದರಿಂದ ಹಳೆಯ ಜನಗಣತಿ ಬಿಟ್ಟು ವಾಸ್ತವ ಸ್ಥಿತಿ ಪರಿಗಣಿಸಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಪ್ರಸಿದ್ಧ ಪ್ರವಾಸಿ ತಾಣವಾದ ಹಾಗೂ 33 ಸದಸ್ಯರನ್ನು ಹೊಂದಿರುವ ದೊಡ್ಡ ಗ್ರಾಮ ಪಂಚಾಯಿತಿಯಾದ ಗೋಕರ್ಣವನ್ನು 'ಪಟ್ಟಣ ಪಂಚಾಯಿತಿ'ಯಾಗಿ ಪರಿವರ್ತಿಸಬೇಕೆಂದು ಸರ್ಕಾರವನ್ನು ಕೋರಿದರು.
ಅವಳಿ ನಗರ ವಿಭಜನೆ: ರಾಜ್ಯಪಾಲರ ಭೇಟಿಗೆ ನಿರ್ಧಾರ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಕುರಿತು ಶಾಸಕ ಅಬ್ಬಯ್ಯ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವಳಿ ನಗರವನ್ನು ವಿಭಜಿಸಿ ಪ್ರತ್ಯೇಕವಾಗಿ 'ಧಾರವಾಡ ಮಹಾನಗರ ಪಾಲಿಕೆ' ರಚಿಸುವ ಪ್ರಸ್ತಾವನೆ ಅಂತಿಮ ಹಂತದಲ್ಲಿದೆ ಎಂದರು. ಜನವರಿ 21ರಂದೇ ಈ ಕುರಿತು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಸಾರ್ವಜನಿಕರ ಆಕ್ಷೇಪಣೆ ಮತ್ತು ಸಲಹೆಗಳ ವರದಿಯನ್ನು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗಿದೆ. ಆದರೆ, ರಾಜ್ಯಪಾಲರಿಂದ ಇನ್ನೂ ಅನುಮೋದನೆ ದೊರೆತಿಲ್ಲ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಪಕ್ಷಾತೀತವಾಗಿ ಎಲ್ಲಾ ಶಾಸಕರ ನಿಯೋಗದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಬೈಂದೂರು ವ್ಯಾಪ್ತಿ ಮರುನಿಗದಿ ಪರಿಶೀಲನೆ
ಇದೇ ವೇಳೆ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಕೆಲವು ಪ್ರದೇಶಗಳನ್ನು ಕೈಬಿಡುವಂತೆ ಕೋರಿಕೆಗಳು ಬಂದಿವೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಯಾವ ಪ್ರದೇಶಗಳನ್ನು ಕೈಬಿಡಬಹುದು ಎಂಬ ಬಗ್ಗೆ ಸಮರ್ಪಕತೆಯನ್ನು ಪರಿಶೀಲಿಸಲು ಮಾಹಿತಿ ಕೋರಲಾಗಿದೆ. ವರದಿ ಬಂದ ನಂತರ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಿತಿಯನ್ನು ಮರುನಿಗದಿಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.