ಮಾಜಿ ಸಚಿವ ಹೆಚ್.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಬೈಕ್ ಸವಾರ ಸಾವು

ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿ ರಾಜೇಶ್ (27) ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ, KA 51 MQ 0555 ನಂಬರ್‌ನ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

Update: 2025-12-12 10:58 GMT

ಮೃತಪಟ್ಟ ಬಾಲಕ ಬೈಕ್‌ ಸವಾರ ರಾಜೇಶ್‌

Click the Play button to listen to article

ಮಾಜಿ ಸಚಿವ ಹೆಚ್.ಎಂ. ರೇವಣ್ಣ ಅವರ ಪುತ್ರ ಆರ್. ಶಶಾಂಕ್ ಅವರ ಹೆಸರಿನಲ್ಲಿರುವ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದ ಬಳಿ ಗುರುವಾರ ತಡರಾತ್ರಿ ನಡೆದಿದೆ. ಮೃತ ದುರ್ದೈವಿಯನ್ನು ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿ ರಾಜೇಶ್ (27) ಎಂದು ಗುರುತಿಸಲಾಗಿದೆ.

ಗುರುವಾರ ರಾತ್ರಿ ಸುಮಾರು 10.30 ರ ಸುಮಾರಿಗೆ ರಾಜೇಶ್ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ, KA 51 MQ 0555 ನೋಂದಣಿ ಸಂಖ್ಯೆಯ ಐಷಾರಾಮಿ ಫಾರ್ಚೂನರ್ ಕಾರು ಅವರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ರಾಜೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಕಾರು ಮಾಜಿ ಸಚಿವರ ಪುತ್ರ ಆರ್. ಶಶಾಂಕ್ ಅವರ ಹೆಸರಿನಲ್ಲಿದೆ ಎಂಬುದು ದೃಢಪಟ್ಟಿದೆ.

ಹಿಟ್ ಆ್ಯಂಡ್​ ರನ್ ಮತ್ತು 'ಅವಾಜ್' ಆರೋಪ

ಅಪಘಾತ ಸಂಭವಿಸಿದ ಕೂಡಲೇ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಲಾಗಿದೆ ಎಂದು ಮೃತ ರಾಜೇಶ್ ಅವರ ಕುಟುಂಬಸ್ಥರು ಮತ್ತು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಸುಮಾರು 5 ಕಿಲೋಮೀಟರ್ ದೂರದವರೆಗೆ ಕಾರನ್ನು ಬೆನ್ನಟ್ಟಿ, ಸನ್ ಫ್ಲವರ್ ಫ್ಯಾಕ್ಟರಿ ಬಳಿ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರು ಕೆಳಗಿಳಿದಿದ್ದಾರೆ.

ಸ್ಥಳೀಯರ ಪ್ರಕಾರ, ಕಾರಿನಲ್ಲಿದ್ದ ಶಶಾಂಕ್ ಅವರು "ನಾನು ಯಾರು ಗೊತ್ತಾ? ಹೆಚ್.ಎಂ. ರೇವಣ್ಣ ಅವರ ಮಗ" ಎಂದು ಸಾರ್ವಜನಿಕರಿಗೆ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ನಂತರ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವುದಾಗಿ ಹೇಳಿ, ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆ ಸಮಯದಲ್ಲಿ ಕಾರಿನಲ್ಲಿ ರೇವಣ್ಣ ಅವರ ಕುಟುಂಬದ ಇತರ ಸದಸ್ಯರೂ ಇದ್ದರು ಎಂದು ಹೇಳಲಾಗುತ್ತಿದೆ.

ಪೊಲೀಸ್ ತನಿಖೆ

ವಿಷಯ ತಿಳಿಯುತ್ತಿದ್ದಂತೆ ಕುದೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿಯಲ್ಲಿ ಅಪಘಾತ ಎಸಗಿದ ಫಾರ್ಚೂನರ್ ಕಾರನ್ನು ಠಾಣೆಗೆ ತರಲಾಗಿದೆ. ಸದ್ಯ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಸಮಯದಲ್ಲಿ ಕಾರನ್ನು ಖುದ್ದು ಶಶಾಂಕ್ ಅವರೇ ಚಲಾಯಿಸುತ್ತಿದ್ದರೇ ಅಥವಾ ಬೇರೆ ಯಾರಾದರೂ ಇದ್ದರೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

Tags:    

Similar News