ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ/ಟಿಎಸ್‌ಪಿ ಅನುದಾನ: ಸರ್ಕಾರದ ಸಮರ್ಥನೆ

ಸೆಕ್ಷನ್ 7(ಸಿ) ಪ್ರಕಾರ ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ನೀರಾವರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಯೋಜನೆ ಹಾಗೂ ಇಂಧನ ಇಲಾಖೆಗಳಲ್ಲಿ ಎಲ್ಲರಿಗೂ ಅನ್ವಯವಾಗುವ ಯೋಜನೆಗಳು ಜಾರಿಯಲ್ಲಿವೆ ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.

Update: 2025-12-12 14:37 GMT

ಸಚಿವ ಹೆಚ್‌.ಸಿ. ಮಹದೇವಪ್ಪ

Click the Play button to listen to article

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಬಳಸಿಕೊಳ್ಳಲಾಗಿದ್ದು, ಇದು ಹಣದ ದುರ್ಬಳಕೆಯಲ್ಲ, ಬದಲಾಗಿ ಕಾನೂನುಬದ್ಧ ಕ್ರಮ ಎಂದು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ. ಆದರೆ, ಸರ್ಕಾರದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ಬಿಜೆಪಿ, ಇದು ತಳ ಸಮುದಾಯಗಳಿಗೆ ಮಾಡಿದ ಅನ್ಯಾಯ ಎಂದು ಆರೋಪಿಸಿದೆ.

ಕಾನೂನುಬದ್ಧ ಬಳಕೆ: ಸಚಿವರ ಸಮರ್ಥನೆ

ವಿಧಾನ ಪರಿಷತ್‌ನಲ್ಲಿ ಸದಸ್ಯೆ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಹದೇವಪ್ಪ, "ಎಸ್‌ಸಿಪಿ ಹಾಗೂ ಟಿಎಸ್‌ಪಿ ಕಾಯ್ದೆಯ ಸೆಕ್ಷನ್ 7(ಸಿ) ಅಡಿಯಲ್ಲಿ, ಸಾಮಾನ್ಯ ಯೋಜನೆಗಳ ಫಲಾನುಭವಿಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಹಂಚಿಕೆ ಮಾಡಲು ಅವಕಾಶವಿದೆ. ಇದೇ ನಿಯಮದ ಅನ್ವಯ ಗ್ಯಾರಂಟಿ ಯೋಜನೆಗಳಿಗೆ ಹಣ ಬಳಸಲಾಗಿದೆಯೇ ಹೊರತು, ದುರ್ಬಳಕೆ ಮಾಡಿಲ್ಲ" ಎಂದು ಸಮರ್ಥಿಸಿಕೊಂಡರು.

"ಹಿಂದಿನಿಂದಲೂ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಇದೇ ರೀತಿ ಅನುದಾನವನ್ನು ಬಳಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಲಾಭ ಎಸ್‌ಸಿ/ಎಸ್‌ಟಿ ಸಮುದಾಯದ ಜನರಿಗೂ ತಲುಪುತ್ತಿರುವುದರಿಂದ, ಅವರ ಜನಸಂಖ್ಯೆಗೆ ಅನುಗುಣವಾಗಿ ಹಣ ಬಳಕೆ ಮಾಡುವುದು ನ್ಯಾಯಸಮ್ಮತ" ಎಂದು ಅವರು ಹೇಳಿದರು.

ತಳ ಸಮುದಾಯಕ್ಕೆ ಅನ್ಯಾಯ: ಬಿಜೆಪಿ ಆರೋಪ

ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, "ಎಸ್‌ಸಿ/ಎಸ್‌ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟ ಸುಮಾರು ₹25,000 ಕೋಟಿ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದೆ. ಇದು ಆ ಸಮುದಾಯಗಳಿಗೆ ಮಾಡಿದ ದೊಡ್ಡ ದ್ರೋಹ" ಎಂದು ಆರೋಪಿಸಿದೆ.

"ನಾವು ಗ್ಯಾರಂಟಿ ಯೋಜನೆಗಳ ವಿರೋಧಿಗಳಲ್ಲ. ಆದರೆ, ಅದಕ್ಕೆ ಬೇಕಾದ ₹56,000 ಕೋಟಿ ಹಣವನ್ನು ಸರ್ಕಾರ ಬೇರೆ ಮೂಲಗಳಿಂದ ಹೊಂದಿಸಬೇಕು. ಎಸ್‌ಸಿ/ಎಸ್‌ಟಿ ಕಲ್ಯಾಣಕ್ಕಾಗಿ ಮೀಸಲಿಟ್ಟ ಶೇ. 24.8ರಷ್ಟು ಹಣವನ್ನು ಬೇರೆ ಯಾವುದೇ ಕಾರಣಕ್ಕೂ ಬಳಸಬಾರದು" ಎಂದು ಬಿಜೆಪಿ ಆಗ್ರಹಿಸಿದೆ.

Tags:    

Similar News