ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರಿಗೆ ಸಕಾಲದಲ್ಲಿ ವೇತನ, ಕರ್ತವ್ಯ ಲೋಪ ಎಸಗಿದ ಪಿಡಿಒ ಅಮಾನತು
2025-26 ನೇ ಸಾಲಿನಲ್ಲಿ ಮಾರ್ಚ್ 2025 ರಿಂದ ನವೆಂಬರ್ 2025ರವರೆಗೆ ಮೂರು ತ್ರೈಮಾಸಿಕ ಕಂತುಗಳಲ್ಲಿ ಒಟ್ಟು 60.49 ಕೋಟಿ ರೂ. ಗೌರವ ಧನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸಾಂದರ್ಭಿಕ ಚಿತ್ರ
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಮೇಲ್ವಿಚಾರಕರಿಗೆ ನಿಗದಿತ ಸಮಯದಲ್ಲಿ ವೇತನ ಪಾವತಿಯಾಗುವಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸದಸ್ಯ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ವೇತನ ಪಾವತಿ ವಿಳಂಬವಾಗದಂತೆ ಕಳೆದ ನವೆಂಬರ್‌ನಲ್ಲೇ ಎಲ್ಲಾ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
60.49 ಕೋಟಿ ರೂ. ಅನುದಾನ ಬಿಡುಗಡೆ
ವೇತನ ಪಾವತಿಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, 2025-26ನೇ ಸಾಲಿನಲ್ಲಿ (ಮಾರ್ಚ್ 2025 ರಿಂದ ನವೆಂಬರ್ 2025 ರವರೆಗೆ) ಮೂರು ತ್ರೈಮಾಸಿಕ ಕಂತುಗಳಲ್ಲಿ ಒಟ್ಟು 60.49 ಕೋಟಿ ರೂ. ಗೌರವ ಧನವನ್ನು ನೇರವಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಲಾಗಿದೆ.
ಕೆಲವು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿಗಳ ತೆರಿಗೆ ಸಂಗ್ರಹ ಕಡಿಮೆಯಿರುವುದರಿಂದ, ಮೇಲ್ವಿಚಾರಕರ ವೇತನ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ಸಮಸ್ಯೆಯಾಗುತ್ತಿದೆ. ಇಂತಹ ಕಡೆಗಳಲ್ಲಿ ಬಾಕಿ ವೇತನ ಪಾವತಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕರ್ತವ್ಯ ಲೋಪ: ಪಿಡಿಒ ಅಮಾನತು
ವೇತನ ಪಾವತಿಯಲ್ಲಿ ವಿಳಂಬ ಮಾಡಿದ್ದಕ್ಕೆ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದ ಪ್ರಸಂಗವನ್ನೂ ಸಚಿವರು ಪ್ರಸ್ತಾಪಿಸಿದರು. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕಿ ಭಾಗ್ಯವತಿ ಅಗ್ನಿಮಠ ಅವರು ಅಕ್ಟೋಬರ್ 13 ರಂದು ಮೃತಪಟ್ಟಿದ್ದರು. ಇವರಿಗೆ ಎರಡು ತಿಂಗಳ ವೇತನ ಪಾವತಿಯಲ್ಲಿ ವಿಳಂಬವಾಗಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ, ಕರ್ತವ್ಯ ಲೋಪ ಎಸಗಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು (ಪಿಡಿಒ) ಇಲಾಖಾ ವಿಚಾರಣೆಗೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ.
5,880 'ಅರಿವು ಕೇಂದ್ರ'ಗಳು ಮತ್ತು ವೇತನ ಹೆಚ್ಚಳ
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 5,880 ಗ್ರಂಥಾಲಯಗಳನ್ನು 'ಅರಿವು ಕೇಂದ್ರ'ಗಳಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಕೇಂದ್ರಕ್ಕೂ ಒಬ್ಬ ಮೀಸಲಾದ ಗ್ರಂಥಾಲಯ ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಸರ್ಕಾರವು ಇವರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸಿದ್ದು, ಮಾಸಿಕ 15,196 ರೂ. ಮೂಲ ವೇತನದ ಜೊತೆಗೆ ತುಟ್ಟಿ ಭತ್ಯೆಯನ್ನು ಸೇರಿಸಿ ಒಟ್ಟು 17,924 ರೂ. ಪಾವತಿಸಲು ಆದೇಶ ಹೊರಡಿಸಲಾಗಿದೆ.