Language Policy Part 3 | ಉತ್ತರದವರು ಪಾಲಿಸದ ʼತ್ರಿಭಾಷಾ ಸೂತ್ರʼ ದಕ್ಷಿಣದವರ ಮೇಲೆ ಹೇರುವುದೇಕೆ?
x

Language Policy Part 3 | ಉತ್ತರದವರು ಪಾಲಿಸದ ʼತ್ರಿಭಾಷಾ ಸೂತ್ರʼ ದಕ್ಷಿಣದವರ ಮೇಲೆ ಹೇರುವುದೇಕೆ?

ತ್ರಿಭಾಷಾ ಸೂತ್ರವನ್ನು ಉತ್ತರ ಭಾರತದವರು ಪಾಲಿಸುತ್ತಿಲ್ಲ. ದಕ್ಷಿಣ ರಾಜ್ಯಗಳ ಮೇಲಷ್ಟೇ ʼತ್ರಿಭಾಷಾ ಸೂತ್ರʼ ಹೇರುತ್ತಿರುವ ಕೇಂದ್ರದ ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕನ್ನಡಿಗರು ʼದ್ವಿಭಾಷಾ ಸೂತ್ರʼಕ್ಕೆ ಪಟ್ಟು ಹಿಡಿದಿದ್ದಾರೆ.


ದೇಶಾದ್ಯಂತ ʼತ್ರಿಭಾಷಾ ಸೂತ್ರʼದ ಅನುಷ್ಟಾನದಲ್ಲಿ ಏಕರೂಪತೆ ಕಾಯ್ದುಕೊಳ್ಳದೇ ಬಲವಂತವಾಗಿ ಹಿಂದಿ ಹೇರುವ ಪ್ರಯತ್ನ ನಡೆಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೋರಾಟ ಆರಂಭವಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆ ತರುವ ನಿಟ್ಟಿನಲ್ಲಿ 1964 ರಲ್ಲಿ ರಚನೆಯಾದ ರಾಷ್ಟ್ರೀಯ ಶಿಕ್ಷಣ ಆಯೋಗ (ಕೊಠಾರಿ ಆಯೋಗ) ದೇಶಾದ್ಯಂತ ತ್ರಿಭಾಷಾ ನೀತಿ ಜಾರಿಗೆ ಶಿಫಾರಸು ಮಾಡಿತ್ತು.ಅದರಂತೆ ಕೇಂದ್ರ ಸರ್ಕಾರ 2020 ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ತ್ರಿಭಾಷಾ ನೀತಿ ಜಾರಿಗೊಳಿಸಿದೆ.

ಕೇಂದ್ರ ಸರ್ಕಾರ ಜಾರಿ ಮಾಡಿರುವ ತ್ರಿಭಾಷಾ ಸೂತ್ರವನ್ನು ಉತ್ತರ ಭಾರತದ ಯಾವ ರಾಜ್ಯಗಳೂ ಕೂಡ ಪಾಲಿಸುತ್ತಿಲ್ಲ. ದಕ್ಷಿಣ ಭಾರತದ ರಾಜ್ಯಗಳ ಮೇಲಷ್ಟೇ ʼತ್ರಿಭಾಷಾ ಸೂತ್ರʼ ಹೇರಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಧೋರಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕನ್ನಡಿಗರು ʼದ್ವಿಭಾಷಾ ಸೂತ್ರʼ ಜಾರಿಗೆ ಪಟ್ಟು ಹಿಡಿದಿದ್ದಾರೆ.

ʼತ್ರಿಭಾಷಾ ಸೂತ್ರʼಕ್ಕೆ ಬದ್ಧವಾಗದ 'ಉತ್ತರ'

ʼತ್ರಿಭಾಷಾ ಸೂತ್ರʼದಡಿ ದಕ್ಷಿಣ ಭಾರತದ ರಾಜ್ಯಗಳ ಮಕ್ಕಳು ಹಿಂದಿ ಕಲಿತರೆ, ಉತ್ತರ ಭಾರತ ಮಕ್ಕಳು ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆ ಕಲಿಯಬೇಕಿತ್ತು. ತಮಿಳುನಾಡು ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳು ತ್ರಿಭಾಷಾ ನೀತಿಯನ್ನು ಪಾಲಿಸುತ್ತಿವೆ. ಆದರೆ, ಉತ್ತರ ಭಾರತದ ಯಾವ ರಾಜ್ಯವೂ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳನ್ನು ತ್ರಿಭಾಷಾ ನೀತಿಯಡಿ ಕಲಿಯುತ್ತಿಲ್ಲ. ಇದೇ ವಿಚಾರ ದಕ್ಷಿಣ ರಾಜ್ಯಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ತ್ರಿಭಾಷಾ ನೀತಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ತಮ್ಮದೇ ಪ್ರಾದೇಶಿಕ ಭಾಷೆ ಒಳಗೊಂಡ ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಒಲವು ತೋರುತ್ತಿವೆ.

ʼಹಿಂದೂ, ಹಿಂದಿ, ಹಿಂದೂಸ್ತಾನ್ʼ ಎಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ( ಆರ್‌ಎಸ್‌ಎಸ್‌) ಗುಪ್ತ ಕಾರ್ಯಸೂಚಿ. ಇದರಡಿಯಲ್ಲೇ ಕೇಂದ್ರ ಸರ್ಕಾರ ʼಒಂದು ರಾಷ್ಟ್ರ, ಒಂದು ಚುನಾವಣೆ, ಒಂದು ಸಂಸ್ಕೃತಿ, ಒಂದು ಭಾಷೆʼಯ ಕಾರ್ಯಸೂಚಿ ಅನುಷ್ಠಾನಕ್ಕೆ ಮುಂದಾಗಿದೆ. ಭಾಷಾ ವೈವಿದ್ಯತೆ ಹೊಂದಿರುವ ಬಹುತ್ವದ ಭಾರತದಲ್ಲಿ ಏಕರೂಪದ ಭಾಷೆ ಬೇಕಿಲ್ಲ ಎಂಬುದು ದಕ್ಷಿಣ ಭಾರತೀಯರ ವಾದ.

ಪ್ರಾದೇಶಿಕ ಭಾಷೆಯ ಉಳಿವಿಗೆ ದ್ವಿಭಾಷಾ ನೀತಿ ಅಗತ್ಯ

ಪ್ರಾದೇಶಿಕ ಭಾಷೆಗಳು ಉಳಿಯಬೇಕಾದರೆ ʼದ್ವಿಭಾಷಾ ಸೂತ್ರʼ ಪಾಲನೆ ಅತ್ಯಗತ್ಯ. ತ್ರಿಭಾಷಾ ನೀತಿ ಹೇರಿಕೆಯಿಂದಾಗಿ ಈಗಾಗಲೇ ಹಲವು ಪ್ರಾದೇಶಿಕ ಭಾಷೆಗಳು ನಶಿಸಿ ಹೋಗಿವೆ. ಯುನೆಸ್ಕೋ ವರದಿ ಪ್ರಕಾರ ಭಾರತದ 344 ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಈ ಭಾಷೆಗಳ ಉಳಿವು, ಬೆಳವಣಿಗೆಗೆ ದ್ವಿಭಾಷಾ ನೀತಿ ನೆರವಾಗಲಿದೆ ಎಂಬುದು ಭಾಷಾತಜ್ಞರ ಅಭಿಮತವಾಗಿದೆ.

"ತ್ರಿಭಾಷಾ ನೀತಿ ಜಾರಿಯಿಂದ ಹಿಂದಿ ಭಾಷಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಮಾತೃ ಭಾಷೆ ಹಿಂದಿಯೇ ಆಗಿರುವುದರಿಂದ ಅವರು ಶೇ 95 ರಷ್ಟು ಫಲಿತಾಂಶ ಪಡೆಯಬಹುದು. ಆದರೆ, ಕರ್ನಾಟಕ ಮಕ್ಕಳು ಹಿಂದಿಯಲ್ಲಿ ಪರಿಣಿತರಲ್ಲ. ಹಾಗಾಗಿ ಕಡಿಮೆ ಫಲಿತಾಂಶ ಪಡೆಯುತ್ತಾರೆ, ಕೆಲವರು ಅನುತ್ತೀರ್ಣರಾಗುವುದು ಸಹಜ. ಹಿಂದಿಯನ್ನು ಕೇವಲ ಆಯ್ಕೆ ಭಾಷೆಯನ್ನಾಗಿ ಬಳಸಲು ಅಭ್ಯಂತರ ಇಲ್ಲ. ಆದರೆ, ಜನಸಂಪರ್ಕ ಭಾಷೆಯಾಗಿ ಕನ್ನಡ, ಜಾಗತಿ ಸಂಪರ್ಕ ಭಾಷೆಯನ್ನಾಗಿ ಇಂಗ್ಲಿಷ್‌ ಕಲಿಸಬೇಕು" ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ )ಅಧ್ಯಕ್ಷ ಶಿವರಾಮೇಗೌಡ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ದ್ವಿಭಾಷಾ ಸೂತ್ರ ಜಾರಿಯಾದರೆ ರಾಜ್ಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿ ಮಾಡುವಂತೆ ಈಗಾಗಲೇ ಶಿಕ್ಷಣ ಸಚಿವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇವೆ. ಶೀಘ್ರವೇ ಅಧಿವೇಶನದಲ್ಲಿ ಮಸೂದೆ ಅಂಗೀಕರಿಸುವ ಭರವಸೆ ನೀಡಿದ್ದಾರೆ. ದ್ವಿಭಾಷಾ ನೀತಿಯಿಂದ ರಾಜ್ಯದ ವಿದ್ಯಾರ್ಥಿಗಳ ಮೇಲೆ ಒತ್ತಡವೂ ಕಡಿಮೆಯಾಗಲಿದೆ. ಜತೆಗೆ ಕನ್ನಡ ಭಾಷೆಗೆ ಆದ್ಯತೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಅಚ್ಚೊತ್ತಿದ ಹಿಂದಿ ಹೇರಿಕೆಯ ಪ್ರಭಾವ

ʼತ್ರಿಭಾಷಾ ನೀತಿʼಯ ಪ್ರಭಾವ ಹಲವು ಕ್ಷೇತ್ರಗಳಲ್ಲಿ ಅಚ್ಚೊತ್ತಿದೆ. ಕೇಂದ್ರ ಸರ್ಕಾರ ನಡೆಸುವ ಯುಪಿಎಸ್‌ಸಿ, ಎಸ್‌ಎಸ್‌ಸಿ (ಸಿಬ್ಬಂದಿ ನೇಮಕ ಆಯೋಗ), ಆರ್‌ಆರ್‌ಬಿ, ಬ್ಯಾಂಕಿಂಗ್‌ ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳು ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲೇ ನಡೆಯುತ್ತಿದ್ದವು. ಇದರಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ವ್ಯಾಪ್ತಿಯ ಇಲಾಖೆಗಳಲ್ಲಿ ಹಿಂದಿ ಭಾಷಿಕರೇ ತುಂಬಿದ್ದಾರೆ. ಸ್ಥಳೀಯರ ಜೊತೆ ಕೇವಲ ಹಿಂದಿ ಹಾಗೂ ಇಂಗ್ಲಿಷ್‌ನಲ್ಲೇ ವ್ಯವಹರಿಸುವುದರಿಂದ ಹಲವು ಸಂದರ್ಭಗಳಲ್ಲಿ ಘರ್ಷಣೆಗಳಿಗೂ ಕಾರಣವಾಗಿದೆ.

ಕೇಂದ್ರ ಸರ್ಕಾರದ ನೀತಿಗಳು ಹೆಚ್ಚಾಗಿ ಹಿಂದಿ ಭಾಷಿಕರನ್ನು ಬೆಂಬಲಿಸುವಂತಿವೆ. ಇದರಿಂದ ಹಿಂದಿಯೇತರ ಭಾಷಿಕರಿಗೆ ಅನಾನುಕೂಲವಾಗಲಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಕರ್ನಾಟಕದಲ್ಲಿ ಉತ್ತರ ಭಾರತೀಯರ ದರ್ಪ

ರಾಜಧಾನಿ ಬೆಂಗಳೂರಿನಲ್ಲಿ ಪದೇ ಪದೇ ಭಾಷೆ ವಿಚಾರವಾಗಿ ಉತ್ತರ ಭಾರತೀಯರು ಹಾಗೂ ಕನ್ನಡಿಗರ ಮಧ್ಯೆ ಘರ್ಷಣೆಗಳು ನಡೆಯುತ್ತಿವೆ. ಉತ್ತರ ಭಾರತೀಯರಿಂದಲೇ ಐಟಿ-ಬಿಟಿ ಕ್ಷೇತ್ರದಿಂದ ಸಾವಿರಾರು ಕೋಟಿ ರೂ. ತೆರಿಗೆ ಬೊಕ್ಕಸಕ್ಕೆ ಹರಿದು ಬರುತ್ತಿದೆ. ನಾವೆಲ್ಲಾ ಬೆಂಗಳೂರು ಬಿಟ್ಟು ಹೋದರೆ ಐಟಿ ಬಿಟಿ ನಿಂತು ಹೋಗಲಿದೆ ಎಂಬಂತಹ ದರ್ಪದ ಹೇಳಿಕೆಗಳನ್ನು ಉತ್ತರ ಭಾರತೀಯ ಮೂಲಕ ಟೆಕ್ಕಿಗಳು ನೀಡಿದ್ದರು. ಅಲ್ಲದೇ ಕನ್ನಡ ಭಾಷೆ ವಿಚಾರಕ್ಕಾಗಿ ಕನ್ನಡಿಗರೊಂದಿಗೆ ಕಿರಿಕ್ ಮಾಡಿಕೊಂಡಿದ್ದ ನಿದರ್ಶನಗಳೂ ಇವೆ.

ʼಕನ್ನಡ ಕಲಿಯಿರಿ ಎಂಬ ಕನ್ನಡಿಗರ ಆಗ್ರಹಕ್ಕೆ ಉತ್ತರ ಭಾರತೀಯರು ʼನೀವು ಮೊದಲು ಹಿಂದಿ ಕಲಿಯಿರಿ. ಇದು ಭಾರತ. ಭಾರತದಲ್ಲಿದ್ದುಕೊಂಡು ಹಿಂದಿ ಭಾಷೆ ಬರುವುದಿಲ್ಲವೆಂದರೆ ಏನರ್ಥʼ ಎಂಬ ದುರಹಂಕಾರ ಮಾತುಗಳನ್ನಾಡಿದ್ದರು.

ಉತ್ತರ ಭಾರತೀಯರಿಗೆ ಸೂಕ್ತ ತಿರುಗೇಟು ಕೊಟ್ಟಿದ್ದ ಕನ್ನಡಿಗರು, ʼಹಿಂದಿ ರಾಷ್ಟ್ರಭಾಷೆಯೇನಲ್ಲ. ಅದನ್ನು ಕಲಿಯುವ ಅಗತ್ಯವೂ ಇಲ್ಲ. ಕನ್ನಡಿಗರು ದೆಹಲಿ, ಇತರೆ ಹಿಂದಿ ರಾಜ್ಯಗಳಿಗೆ ಬಂದಾಗ ಅಲ್ಲಿಯವರು ನಮ್ಮೊಂದಿಗೆ ಕನ್ನಡ ಮಾತನಾಡಿದರೆ ನಾವೂ ಕೂಡ ಹಿಂದಿ ಕಲಿಯುತ್ತೇವೆ’ ಎಂದು ಠಕ್ಕರ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ತ್ರಿಭಾಷಾ ಹಾಗೂ ದ್ವಿಭಾಷಾ ಸೂತ್ರ ಕುರಿತಾದ ಚರ್ಚೆಗಳು ಹೆಚ್ಚಾಗಿವೆ.

Read More
Next Story