ಜಿಎಸ್​​ಟಿ ನೋಟಿಸ್‌ಗೆ ಆಕ್ರೋಶ: ಜುಲೈ 25ರಂದು ರಾಜ್ಯಾದ್ಯಂತ ಬೇಕರಿ, ಚಹಾ ಅಂಗಡಿಗಳು ಬಂದ್‌

ವಾಣಿಜ್ಯ ತೆರಿಗೆ ಇಲಾಖೆಯು ರಾಜ್ಯದ ಸಾವಿರಾರು ಕಾಂಡಿಮೆಂಟ್ಸ್, ಬೇಕರಿ, ಚಹಾ, ಕಾಫಿ ಅಂಗಡಿಗಳು, ತರಕಾರಿ ಅಂಗಡಿಗಳು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಲಕ್ಷಾಂತರ, ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಪಾವತಿಸುವಂತೆ ನೋಟಿಸ್ ನೀಡಿದೆ.;

Update: 2025-07-17 07:14 GMT

ಸಭೆಯಲ್ಲಿ ಅಂಗಡಿ ಮಾಲೀಕರು ಭಾಗವಹಿಸಿದ್ದರು. 

ವಾಣಿಜ್ಯ ತೆರಿಗೆ ಇಲಾಖೆಯಿಂದ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸುವಂತೆ ಶೋಕಾಸ್ ನೋಟಿಸ್‌ಗಳನ್ನು ನೀಡಿರುವುದನ್ನು ವಿರೋಧಿಸಿ ರಾಜ್ಯದ ಕಾಂಡಿಮೆಂಟ್ಸ್, ಬೇಕರಿ ಮತ್ತು ಚಹಾ- ಕಾಫಿ ವ್ಯಾಪಾರಿಗಳು ಬೃಹತ್ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಜುಲೈ 25ರಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ತಮ್ಮ ಅಂಗಡಿಗಳನ್ನು ಮುಚ್ಚಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯು ರಾಜ್ಯದ ಸಾವಿರಾರು ಕಾಂಡಿಮೆಂಟ್ಸ್, ಬೇಕರಿ, ಚಹಾ, ಕಾಫಿ ಅಂಗಡಿಗಳು, ತರಕಾರಿ ಅಂಗಡಿಗಳು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಲಕ್ಷಾಂತರ, ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಪಾವತಿಸುವಂತೆ ನೋಟಿಸ್ ನೀಡಿದೆ. ‌

ಜುಲೈ 21ರೊಳಗೆ ತೆರಿಗೆ ಹಣವನ್ನು ಪಾವತಿಸದಿದ್ದಲ್ಲಿ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿ, ಅಂಗಡಿಗಳನ್ನು ಮುಚ್ಚುವ ಎಚ್ಚರಿಕೆಯನ್ನೂ ನೀಡಿದೆ. ಇದರಿಂದ ವ್ಯಾಪಾರಿಗಳು ಕೆರಳಿದ್ದಾರೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜಾಜಿನಗರದ ಖಾಸಗಿ ಹೋಟೆಲ್‌ನಲ್ಲಿ ರಾಜ್ಯದ ಎಲ್ಲಾ ಕಾಂಡಿಮೆಂಟ್ಸ್ ಮಾಲೀಕರ ಸಭೆ ನಡೆಯಿತು. ಸಭೆಯಲ್ಲಿ, ರಾಜ್ಯ ಸರ್ಕಾರಕ್ಕೆ ಜುಲೈ 24 ರವರೆಗೆ ಗಡುವು ನೀಡಲು ನಿರ್ಧರಿಸಲಾಗಿದೆ. ಅಷ್ಟರೊಳಗೆ ಕಾಂಡಿಮೆಂಟ್ಸ್ ಮಾಲೀಕರಿಗೆ ನೀಡಿರುವ ನೋಟಿಸ್‌ಗಳನ್ನು ವಾಪಸ್ ಪಡೆಯದಿದ್ದರೆ, ಜುಲೈ 25 ರಂದು ಎಲ್ಲಾ ಕಾಂಡಿಮೆಂಟ್ಸ್, ಬೇಕರಿ, ಚಹಾ ಮತ್ತು ಕಾಫಿ ಶಾಪ್‌ಗಳನ್ನು ಮುಚ್ಚಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರತಿಭಟನೆ, ಹಾಲಿನ ಉತ್ಪನ್ನ ಮಾರಾಟ ಬಂದ್

ಜುಲೈ 25ರಂದು ಫ್ರೀಡಂ ಪಾರ್ಕ್‌ನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಲು ವ್ಯಾಪಾರಿಗಳು ಯೋಜಿಸಿದ್ದಾರೆ. ಅದಕ್ಕೂ ಮುನ್ನ, ಜುಲೈ 23 ಮತ್ತು 24 ರಂದು ಬೇಕರಿ ಮತ್ತು ಕಾಂಡಿಮೆಂಟ್ಸ್ ಸೇರಿದಂತೆ ಎಲ್ಲಾ ಅಂಗಡಿಗಳಲ್ಲಿ ಹಾಲಿನ ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು.

ಬೆಂಗಳೂರಿನಲ್ಲಿ 66 ಸಾವಿರ ಕಾಂಡಿಮೆಂಟ್ಸ್ ಮತ್ತು ಬೇಕರಿ ಅಂಗಡಿಗಳಿವೆ. ಈ ನಿರ್ಧಾರವು ಗ್ರಾಹಕರ ಮೇಲೆ ಗಣನೀಯ ಪರಿಣಾಮ ಬೀರುವ ಸಾಧ್ಯತೆ ಇದೆ.

Tags:    

Similar News