40 ಕೋಟಿ ರೂ. ತೆರಿಗೆ ವಂಚನೆ ; ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ಆರೋಪಿ ಬಂಧನ
x

40 ಕೋಟಿ ರೂ. ತೆರಿಗೆ ವಂಚನೆ ; ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ಆರೋಪಿ ಬಂಧನ

ಆರೋಪಿಯು 300 ಕೋಟಿ ರೂಪಾಯಿಗಿಂತ ಹೆಚ್ಚಿನ ವ್ಯವಹಾರ ನಡೆಸಿದ್ದಾನೆ. ಅಲ್ಲದೇ 30-40 ಕೋಟಿ ರೂಪಾಯಿ ವಂಚನೆ ಮಾಡಿರುವುದು ಗೊತ್ತಾಗಿದೆ.


ನಕಲಿ ಬಿಲ್‌ ಟ್ರೇಡರ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಕರ್ನಾಟಕ ವಾಣಿಜ್ಯ ತೆರಿಗೆಗಳ ಇಲಾಖೆಯು ಸುಮಾರು 40 ಕೋಟಿ ರೂ. ತೆರಿಗೆ ವಂಚನೆ ಮಾಡಿದ್ದ ಆಸಾಮಿಯನ್ನು ಬುಧವಾರ ಬಂಧಿಸಿದೆ.

ಬೆಂಗಳೂರಿನ ದಕ್ಷಿಣ ವಲಯ(ಜಾರಿ) ಹಾಗೂ ಜಾಗೃತಿ ವಿಭಾಗಗಳ ಅಧಿಕಾರಿಗಳ ತಂಡವು ಪೊಲೀಸರ ಸಹಯೋಗದೊಂದಿಗೆ ರಾಜಸ್ಥಾನದ ಜಲೋರ್ ಜಿಲ್ಲೆಯ ನಿವಾಸಿ ಕೈಲಾಶ್ ವಿಷ್ಣೋಯ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಅರ್ಹವಲ್ಲದ ಗುಜರಿ ವಸ್ತುಗಳನ್ನು ಅಸಲಿ ಟ್ರೇಡರ್‌ಗಳಿಂದ ಖರೀದಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಸರ್ಕಾರಕ್ಕೆ ತೋರಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.

ಆರೋಪಿ ಕೈಲಾಶ್ ವಿಷ್ಣೋಯ್ ಎಂಬ ವ್ಯಕ್ತಿಯು ನಕಲಿ ಆಧಾರ್ ಕಾರ್ಡ್‍ಗಳನ್ನು ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆದು, ಜಿಎಸ್‍ಟಿ ನೋಂದಣಿಗಳನ್ನು ಪಡೆದುಕೊಂಡಿದ್ದಾನೆ. ಇವುಗಳನ್ನು ಉಪಯೋಗಿಸಿ ನೂರಾರು ಕೋಟಿ ರೂಪಾಯಿ ಮೊತ್ತದ ತೆರಿಗೆ ಇನ್ವಾಯ್ಸ್ ಗಳನ್ನು ನೀಡಿರುವುದು ಗೊತ್ತಾಗಿದೆ. ಮೆಟಲ್ ಸ್ಕ್ರಾಪ್ ಸರಕುಗಳ ರಹಸ್ಯ ಸಾಗಾಣಿಕೆಗೆ ಸಹಕರಿಸಿ, ಆ ಮೂಲಕ ನಕಲಿ ಹೂಡುವಳಿ ತೆರಿಗೆಯನ್ನು ಕ್ಲೇಮು ಮಾಡಲು ಕರ್ನಾಟಕ ಮತ್ತು ಇತರೆ ರಾಜ್ಯಗಳ ವರ್ತಕರೊಂದಿಗೆ ಅಕ್ರಮವಾಗಿ ಕೈಜೋಡಿಸಿದ್ದ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡುತ್ತಿದ್ದ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದ ಫೆಡರಲ್‌ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.

ವಾಣಿಜ್ಯ ತೆರಿಗೆಗಳ ಇಲಾಖೆಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ. ಆರೋಪಿಯು 300 ಕೋಟಿ ರೂಪಾಯಿಗಿಂತ ಹೆಚ್ಚಿನ ವ್ಯವಹಾರ ನಡೆಸಿದ್ದಾನೆ. ಅಲ್ಲದೇ 30-40 ಕೋಟಿ ರೂಪಾಯಿ ವಂಚನೆ ಮಾಡಿರುವುದು ಗೊತ್ತಾಗಿದೆ. ತನಿಖೆ ಬಳಿಕ ಮತ್ತಷ್ಟು ಅಕ್ರಮಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Read More
Next Story