Naxals in Karnataka | ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆಗೆ ಇನ್ನು ಅವಕಾಶವಿಲ್ಲ
ಕರ್ನಾಟಕದಲ್ಲಿ ಸಮಾಜವಾದಿ, ಕಾಗೋಡು ಚಳವಳಿ, ರೈತ ಮತ್ತು ದಲಿತ ಹೋರಾಟಗಳಿಗೆ ಇಲ್ಲಿ ಬೆಂಬಲ ವ್ಯಕ್ತಿವಾಗಿದೆ. ಆದರೆ ಮುಖ್ಯವಾಹಿನಿಯ ಪ್ರಗತಿಪರ ಹೋರಾಟಗಾರರು ಸಶಸ್ತ್ರ ಹೋರಾಟಕ್ಕೆ ನಿರೀಕ್ಷಿತ ಪ್ರಮಾಣದ ಬೆಂಬಲ ನೀಡಲಿಲ್ಲ;
ಅದು 2004 ರ ಮಳೆಗಾಲ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದಟ್ಟಡವಿಯಲ್ಲಿ ಒಂದು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಕರ್ನಾಟಕದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) (ಪೀಪಲ್ಸ್ ವಾರ್)ನ ರಾಜ್ಯಘಟಕ ತನ್ನ ಅಸ್ತಿತ್ವ ಗಟ್ಟಿಗೊಳಿಸಿಕೊಂಡಿರುವ ಬಗ್ಗೆ ಸಮಾಜಕ್ಕೆ ಸಾರುವ ಉದ್ದೇಶದಿಂದ ಅಂದಿನ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಆಯ್ದ ನಂಬಿಗಸ್ತ ಮತ್ತು ವೃತ್ತಿ ಬದ್ಧತೆಯುಳ್ಳ ಪತ್ರಕರ್ತರನ್ನು ರಾಜ್ಯದ ವಿವಿಧೆಡೆಯಿಂದ ಕರೆಸಿಕೊಳ್ಳಲಾಗಿತ್ತು.
ಸುರಿವ ಮಳೆ, ಎಲ್ಲೆಂದರಲ್ಲಿ ಜಿಗಿದಾಡುವ ಇಂಬಳಗಳು, ಜೀರುಂಡೆಗಳ ಝೇಂಕಾರದ ನಡುವೆ ಟೆಂಟ್‌ವೊಂದರಲ್ಲಿ ಕುಳಿತ ಸಾಕೇತ್ ರಾಜನ್ ಅವರು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ್ದರು. ಹಲವು ವರ್ಷಗಳ ಅಧ್ಯಯನದ ಬಳಿಕ ಮಲೆನಾಡಿನಲ್ಲಿ ನಮ್ಮ ಸಂಘಟನೆ ನೆಲೆಯೂರಿದೆ. ಇಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಸ್ಥಳೀಯ ನಿವಾಸಿಗಳು ನಮಗೆ ವ್ಯಾಪಕ ಬೆಂಬಲಲ ಕೊಟ್ಟಿದ್ದಾರೆ. ನಮ್ಮ ಪಕ್ಷಕ್ಕೆ ರಿಕ್ರ್ಯೂಟ್ ಮೆಂಟ್ ಕೂಡಾ ಚೆನ್ನಾಗಿ ಆಗಿದೆ. ಸಮಸಮಾಜದ ನಿರ್ಮಾಣಕ್ಕಾಗಿ ನಾವು ಸಶಸ್ತ್ರ ಹೋರಾಟ ಮಾಡುತ್ತೇವೆ. ತರಬೇತಿ ಪಡೆದ ಕಾಮ್ರೇಡ್‌ಗಳ ದೊಡ್ಡ ದಳ ನಮ್ಮ ಬಳಿ ಇದೆ ಎಂದು ಘೋಷಿಸಿದ್ದರು.
ಸಾಕೇತ್‌ರಾಜನ್ ಈ ಗೋಷ್ಠಿ ನಡೆಸುವ ಮೊದಲು ನಡೆದ ರಾಜ್ಯದ ಮೊದಲ ಎನ್‌ಕೌಂಟರ್‌ನಲ್ಲಿ ಪಾರ್ವತಿ ಮತ್ತು ಹಾಜೀಮಾ ಎಂಬ ಇಬ್ಬರು ಮಹಿಳಾ ಹೋರಾಟಗಾರ್ತಿಯರು ಪೊಲೀಸರು ಗುಂಡಿಗೆ ಬಲಿಯಾಗಿದ್ದರು. ಕರ್ನಾಟಕ ವಿಮೋಚನಾ ರಂಗ, ಪ್ರಗತಿಪರ ವಿದ್ಯಾರ್ಥಿ ವೇದಿಕೆಗಳ ಹಲವು ಕಾರ್ಯಕರ್ತರು ನಕ್ಸಲರಾಗಿ ಬದಲಾಗಿದ್ದರು ಮತ್ತು ಭೂಗತರಾಗಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನ ಘೋಷಣೆ ಬಳಿಕ ಆದಿವಾಸಿಗಳನ್ನು ತಮ್ಮ ಮೂಲ ನೆಲೆಯಿಂದ ಒಕ್ಕಲೆಬ್ಬಿಸುತ್ತಾರೆ ಎಂಬ ಭಯ ಇಡೀ ಪಶ್ಚಿಮಘಟದಲ್ಲಿ ದಟ್ಟವಾಗಿತ್ತು. ಆ ಸಂದರ್ಭದಲ್ಲಿ ಸಹಜವಾಗಿಯೇ ಆದಿವಾಸಿಗಳ ನೆರವಿಗೆ ಬಂದವರು ನಕ್ಸಲರು. ಕಾಕತಾಳೀಯ ಎಂಬಂತೆ ನಕ್ಸಲ್ ಸಂಘಟನೆಯಲ್ಲಿ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕುದುರೆಮುಖದಲ್ಲಿನ ಗಣಿಗಾರಿಕೆಯಿಂದ ತುಂಗ ಮತ್ತು ಭದ್ರಾನದಿಯ ಮೂಲಗಳಾದ ನೆಲ್ಲಿಬೀಡು ಮತ್ತು ಗಂಗಡಿಕಲ್ಲಿನಲ್ಲಿ ಜಲಮೂಲಕ್ಕೆ ಆಗುತಿದ್ದ ಧಕ್ಕೆಯನ್ನು ವಿರೋಧಿಸಿ ದೊಡ್ಡ ಹೋರಾಟ ಮಲೆನಾಡಿನಲ್ಲಿ ನಡೆದಿತ್ತು. ಈ ಎಲ್ಲಾ ಹೋರಾಟಗಳ ಫಲವಾಗಿ ಒಂದು ಸಂಘಟನೆ ಬಲಗೊಳ್ಳಲು ಹದವಾದ ವಾತಾವರಣ ಇದ್ದಾಗಲೇ ನಕ್ಸಲರು ರಾಜ್ಯಕ್ಕೆ ಬಂದು ತಮ್ಮ ಅಸ್ತಿತ್ವ ಹುಡುಕಿಕೊಂಡಿದ್ದರು.
ಒಂದಾದ ಮೇಲೆ ಒಂದು ಎನ್‌ಕೌಂಟರ್‌ಗಳು ನಡೆದು ನಾಗರೀಕರು ಮತ್ತು ನಕ್ಸಲೀಯರು ಬಲಿಯಾಗುತಿದ್ದಂತೆ ನಕ್ಸಲ್ ಸಂಘಟನೆಯಲ್ಲಿಯೂ ರಾಷ್ಟ್ರ ಮಟ್ಟದಲ್ಲಿಯೇ ಸೌಮ್ಯವಾದಿಗಳು ಮತ್ತು ತೀವ್ರವಾದಿಗಳು ಎಂಬ ಎರಡು ಬಣಗಳಾದವು. ಸೌಮ್ಯವಾದಿಗಳು ಮುಖ್ಯವಾಹಿನಿಯಲ್ಲಿದ್ದುಕೊಂಡೇ ಹೋರಾಟ ಮಾಡುವ ವಾದ ಮುಂದಿಟ್ಟರು. ಆದರೆ ತೀವ್ರವಾದಿಗಳು ಸಶಸ್ತ್ರ ಹೋರಾಟದಿಂದ ಹಿಂದಡಿಯಿಡೆವು ಎಂದು ಪಟ್ಟು ಹಿಡಿದರು. ಈ ಭಿನ್ನ ಅಭಿಪ್ರಾಯದಿಂದ ಸೌಮ್ಯವಾದಿಗಳು ಬಂದೂಕು ಕೈಗೆತ್ತಿಕೊಳ್ಳಲು ನಿರಾಕರಿಸಿದರು. ಮಾತ್ರವಲ್ಲದೆ ಕಾಡು ಬಿಟ್ಟು ನಾಡು ಸೇರಿದರು. ಹೀಗೆ ಮೊದಲ ಎರಡು ವರ್ಷಗಳಲ್ಲಿಯೇ ಕರ್ನಾಟಕದಲ್ಲಿ ನಕ್ಸಲ್ ಸಂಘಟನೆಗೆ ಹಿನ್ನಡೆಯಾಗಿತ್ತು.
ಸಾಕೇತ್ ಪಣ
ಸಾಕೇತ್‌ರಾಜನ್ ಕರೆದಿದ್ದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಲೆನಾಡಿನಲ್ಲಿ ಉತ್ತರ ಭಾರತದಲ್ಲಿರುವಂತೆ ಭೂ ಮಾಲೀಕರು ಮತ್ತು ಕಾರ್ಮಿಕರ ನಡುವೆ ವ್ಯತ್ಯಾಸಗಳಿಲ್ಲ. ಇಲ್ಲಿ ಒಂದು ಭಾವನಾತ್ಮಕ ಸಂಬಂಧ ಇದೆ ಇಂತಹ ಸನ್ನಿವೇಶದಲ್ಲಿ ನಿಮ್ಮ ಹೋರಾಟ ಯಶಕಾಣುತ್ತದೆಯೇ ಎಂದು ಹಿರಿಯ ವರದಿಗಾರರೊಬ್ಬರು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಾಕೇತ್, ನಮ್ಮ ಸರ್ವೆಯಲ್ಲಿ ಭೂ ಮಾಲಿಕರ ಶೋಷಣೆ, ಕೂಲಿಯಲ್ಲಿ ಮೋಸ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಕಾಡುತ್ಪನ್ನಗಳ ಮೇಲೆ ನಿರ್ಬಂಧ, ಮೂಲಭೂತ ಸೌಕರ್ಯಗಳಿಲ್ಲದಿರುವುದು. ಶಿಕ್ಷಣದ ಕೊರತೆ ಈ ಎಲ್ಲಾ ಅಂಶಗಳು ನಮ್ಮ ಸಂಘಟನೆ ಬಲಗೊಳಿಸಲು ಇರುವ ಅವಕಾಶಗಳು ಎಂದು ಪ್ರತಿಪಾದಿಸಿದ್ದರು. ಆದರೆ ೨೦೦೫ ರಲ್ಲಿ ಮೆಣಸಿನ ಹಾಡ್ಯದಲ್ಲಿ ಸಾಕೇತ್ ರಾಜನ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿಯಾದರು. ಆ ಬಳಿಕ ನಕ್ಸಲ್ ಸಂಘಟನೆ ಸರಿಯಾದ ನಾಯಕತ್ವ ಇಲ್ಲದೆ ಸೊರಗಿತು. ಹೊರರಾಜ್ಯಗಳಿಂದ ಬಂದ ಕೇಂದ್ರ ಸಮಿತಿ ಸದಸ್ಯರು ಇಲ್ಲಿನ ಹವಾಮಾನಕ್ಕೆ ಒಗ್ಗಿಕೊಳ್ಳದೆ ಹಿಂತಿರುಗಿದರು.
ಕರ್ನಾಟಕದಲ್ಲಿ ಸೋತಿದ್ದೇಕೆ?
ಮೂರು ದಶಕಗಳಲ್ಲಿಯೇ ಕರ್ನಾಟಕದಲ್ಲಿ ನಕ್ಸಲರ ರಕ್ತಸಿಕ್ತ ಅಧ್ಯಾಯ ಮುಕ್ತಾಯವಾಗಲು ಹಲವು ಕಾರಣಗಳಿವೆ. ಪಶ್ಚಿಮಘಟ್ಟದಲ್ಲಿನ ಆದಿವಾಸಿ ಜನರು ತೀರಾ ಮುಗ್ದರಾಗಿದ್ದರು. ಅದೂ ಅಲ್ಲದೆ ಇಲ್ಲಿ ಉತ್ತರ ಭಾರತದಂತೆ ಭೂ ಮಾಲೀಕರ ಶೋಷಣೆ ಇರಲಿಲ್ಲ. ಮಾಲೀಕರು ಮತ್ತು ಕೂಲಿ ಕಾರ್ಮಿಕರ ನಡುವೆ ಒಂದು ಮಧುರ ಬಂಧುತ್ವ ಇತ್ತು ಈಗಲೂ ಇದೆ. ಈ ಕಾರಣದಿಂದ ಇಲ್ಲಿ ಸಂಘಟನೆಗೆ ಆರಂಭದಲ್ಲಿದ್ದ ಜನಸಮೂಹದ ಬೆಂಬಲ ಸಿಗಲಿಲ್ಲ. ನಕ್ಸಲರ ಪ್ರವೇಶವಾಗುತ್ತಿದ್ದಂತೆ ಕಾರ್ಮಿಕರ ಕೂಲಿ ಹೆಚ್ಚಾಯಿತು. ಶೋಷಣೆಯೂ ಕಡಿಮೆಯಾಯಿತು. ಇದೇ ಹೊತ್ತಲ್ಲಿ ಸರ್ಕಾರಗಳು ಹಾಡಿಗಳಿಗೆ ರಸ್ತೆ, ಶಾಲೆ ಇತ್ಯಾದಿ ಮೂಲಭಭೂತ ಸೌಕರ್ಯಗಳಿಗೆ ಒತ್ತು ನೀಡಲಾರಂಭಿಸಿದವು.
ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಯುಪಿಎ ಸರಕಾರ ಜಾರಿಗೆ ತಂದಿದ್ದ ಕೂಲಿಗಾಗಿ ಕಾಳು, ಅರಣ್ಯ ಹಕ್ಕು ಕಾಯಿದೆಗಳು ನಕ್ಸಲ್ ಸಂಘಟನೆಗೆ ಕೊಂಚ ಹಿನ್ನಡೆ ನೀಡಿದವು. ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ಸಿಕ್ಕಿದವು. ಶಾಲಾ ಮಕ್ಕಳಿಗೆ ಬಿಸಿಯೂಟ ಸಿಗುತಿತ್ತು. ಅರಣ್ಯ ಹಕ್ಕು ಕಾಯಿದೆಯಲ್ಲಿ ಬುಡಕಟ್ಟು ಸಮುದಾಯಗಳಿಗೆ ಅವರು ಸಾಗುವಳಿ ಮಾಡಿದ್ದ ಭೂಮಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆಗಳೂ ಆರಂಭವಾದವು. ಅದೇ ಹೊತ್ತಿನಲ್ಲಿ ಆದಿವಾಸಿಗಳ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ವಸತಿ ಶಾಲೆಗಳನ್ನು ಆರಂಭಿಸಲಾಯಿತು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಸ್ಥಳೀಯ ನಿವಾಸಿಗಳು ನಕ್ಸಲರತ್ತ ತೋರುತಿದ್ದ ಒಲವು ಕಡಿಮೆಯಾಯಿತು.
ಮೊಬೈಲ್ ಮತ್ತು ಸಂಘಪರಿವಾರ
ಮಾಹಿತಿ ತಂತ್ರಜ್ಞಾನ ಬೆಳೆದಂತೆ ನಕ್ಸಲರಿಗೆ ಎಷ್ಟು ಉಪಯೋಗವಾಯಿತೊ ಅವರ ದಮನಕ್ಕೆ ಪ್ರಭುತ್ವಕ್ಕೂ ಅಷ್ಟೇ ಉಪಯೋಗವಾಯಿತು. ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನಲ್ಲಿ ಬಿಜೆಪಿಯ ಪ್ರಾಬಲ್ಯವೂ ನಕ್ಸಲರ ಸಂಘಟನೆಗೆ ಅತೀವ ಹಿನ್ನಡೆ ಉಂಟು ಮಾಡಿದ್ದು ಸುಳ್ಳಲ್ಲ. ಸಂಘಪರಿವಾರದ ವಿವಿಧ ಸಂಘಟನೆಗಳ ಸದಸ್ಯರು ಮಲೆನಾಡಿನ ಮೂಲೆಮೂಲೆಗಳಲ್ಲೂ ಇದ್ದರು. ಜತೆಯಲ್ಲಿ ಮೊಬೈಲ್ ಕಿಸೆಯಲ್ಲಿದ್ದ ಕಾರಣ ನಕ್ಸಲರು ಮತ್ತವರ ಬೆಂಬಲಿಗರ ಚಲನವಲನಗಳು ತಕ್ಷಣ ಪೋಲೀಸರಿಗೆ ತಲುಪುತಿದ್ದವು. ನಕ್ಸಲ್ ನಿಗ್ರಹ ಪಡೆಯ ಕಾರ್ಯಾಚರಣೆಗೆ ಮೊಬೈಲ್ ಹೆಚ್ಚು ನೆರವಾಯಿತು.
ಮುಖ್ಯವಾಹಿನಿಯಲ್ಲಿ ಸಿಗದ ಬೆಂಬಲ
ಕರ್ನಾಟಕದಲ್ಲಿ ಪ್ರಗತಿಪರ ಚಳವಳಿಗೆ ಯಾವತ್ತೂ ಬೆಂಬಲ ಇದೆ. ಸಮಾಜವಾದಿ, ಕಾಗೋಡು ಚಳವಳಿ, ರೈತ ಮತ್ತು ದಲಿತ ಹೋರಾಟಗಳಿಗೆ ಇಲ್ಲಿ ಬೆಂಬಲ ವ್ಯಕ್ತಿವಾಗಿದೆ. ಆದರೆ ಮುಖ್ಯವಾಹಿನಿಯಲ್ಲಿದ್ದ ಪ್ರಗತಿಪರ ಹೋರಾಟಗಾರರು ಸಶಸ್ತ್ರ ಹೋರಾಟಕ್ಕೆ ನಿರೀಕ್ಷಿತ ಪ್ರಮಾಣದ ಬೆಂಬಲ ನೀಡಲಿಲ್ಲ. 20 ಕ್ಕೂ ಹೆಚ್ಚು ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾಗುತ್ತಿದ್ದಂತೆ ರಾಜ್ಯದಿಂದ ಕಾಲ್ಕಿತ್ತ ನಕ್ಸಲ್ ಕಾರ್ಯಕರ್ತರು ಕೇರಳ, ಆಂಧ್ರ, ತಮಿಳುನಾಡಿಗೆ ಹೋದರು. ಅಲ್ಲಿಯೂ ಪೊಲೀಸ್ ಕಾರ್ಯಾಚರಣೆ ಬಲಗೊಂಡಿತು. ಪ್ರಮುಖ ನಾಯಕ ಬಿ.ಜಿ.ಕೃಷ್ಣನಮೂರ್ತಿ ಅಂತಹವರು ಬಂಧನಕ್ಕೊಳಗಾಗುತ್ತಿದ್ದಂತೆ ಅಳಿದುಳಿದ ನಕ್ಸಲರು, ಮತ್ತೆ ಕರ್ನಾಟಕಕ್ಕೆ ಬಂದರು. ಈ ವೇಳೆಗೆ ಪಶ್ಚಿಮಘಟ್ಟದ ಚಿತ್ರಣವೇ ಬದಲಾಗಿತ್ತು. ಮೊದಲಿದ್ದ ಜನ ಬೆಂಬಲ ಅವರಿಗೆ ಸಿಗದಾಯಿತು.
ವಿಕ್ರಂ ಗೌಡನ ನೇತೃತ್ವದಲ್ಲಿ ಕಾಡು ಸೇರಿಕೊಂಡಿದ್ದ ಎರಡು ತಂಡಗಳು, ಅನ್ನ ಮತ್ತು ಔಷಧಿಗೆ ಪರದಾಟ ನಡೆಸಿದ್ದವು ಎನ್ನುತ್ತಾರೆ ಅಡವಿಯಂಚಿನ ಗ್ರಾಮಸ್ಥರು. ಸಂಘಟನೆಯಲ್ಲಿ ಇದ್ದ ಪ್ರಮುಖ ಮತ್ತು ಧೈರ್ಯಶಾಲಿ ಮುಖಂಡ ವಿಕ್ರಂ ಗೌಡ ಹತ್ಯೆಗೀಡಾಗುತ್ತಿದ್ದಂತೆ ಉಳಿದ ನಕ್ಸಲರು ಕಂಗಾಲಾದರು. ಹೀಗೆ ಸಮಸಮಾಜ ಕಟ್ಟುವ ಕನಸು ಹೊತ್ತು ಒಂದು ಸಶಸ್ತ್ರ ಹೋರಾಟ ಜನರ ಬೆಂಬಲ ಸಿಗದಕಾರಣ ಶಸ್ತ್ರಗಳನ್ನು ಕೆಳಗಿಟ್ಟು ಸರ್ಕಾರಕ್ಕೆ ಶರಣಾಗಬೇಕಾಯಿತು.
ರಾಜ್ಯ ನಕ್ಸಲ್ ಮುಕ್ತವಾಯಿತು ಎಂದಾಕ್ಷಣ ಸಮಸ್ಯೆಗಳು ಮುಗಿದಿವೆಯೇ ಎಂದು ಅವಲೋಕಿಸಿದರೆ, ಮೂವತ್ತು ವರ್ಷಗಳ ಹಿಂದೆ ನಕ್ಸಲರು ಎತ್ತಿದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮಲೆನಾಡಿನ ಕಾಫಿತೋಟಗಳಲ್ಲಿನ ಕಾರ್ಮಿಕರ ಕೂಲಿ ಹೆಚ್ಚಾಯಿತು ಮತ್ತು ಶೋಷಣೆ ತಕ್ಕಮಟ್ಟಿಗೆ ಕಡಿಮೆಯಾಯಿತು.ಆದಿವಾಸಿ ಹಳ್ಳಿಗಳಿಗೆ ವಸತಿ ಶಾಲೆ, ರಸ್ತೆ ಸೇತುವೆ ಸೇರಿದಂತೆ ಕೆಲ ಮೂಲಭೂತ ಸೌಲಭ್ಯಗಳು ದೊರೆತವು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಉಳಿದ ಸಮಸ್ಯೆಗಳು ಮತ್ತಷ್ಟು ಜ್ವಲಂತವಾಗಿವೆ. ಆದಿವಾಸಿಗಳ ಭೂಮಿ ತೆರವು, ಇಂಡೀಕರಣ, ಬಗರ್ ಹುಕುಂ ಸಮಸ್ಯೆ, ಜಾರಿಯಾಗದ ಅರಣ್ಯ ಹಕ್ಕು ಕಾಯಿದೆ, ಶರಾವತಿ ಸಂತ್ರಸ್ತರ ಭೂಮಿ ಹಕ್ಕುದಾರಿಕೆಯ ಬಿಕ್ಕಟ್ಟು, ವನ್ಯಜೀವಿ ಮತ್ತು ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಜಾರಿಯ ಆತಂಕ ಹೀಗೆ ಹತ್ತು ಹಲವು ಸಮಸ್ಯೆಗಳು ಹಾಗೇ ಉಳಿದಿವೆ.
ದಲಿತರು ಮತ್ತು ಬಡವರು ಉಳುವ ಭೂಮಿಗೆ ಒಡೆತನ ಸಿಕ್ಕಿಲ್ಲ. ಅರಣ್ಯ ಸಂಬಂಧಿ ಕಾಯಿದೆಗಳು ಮತ್ತು ಆಳುವ ಸರ್ಕಾರ ಇಚ್ಚಾಶಕ್ತಿಯ ಕೊರತೆಯ ಕಾರಣದಿಂದ ಮಲೆನಾಡಿನ ಸಮಸ್ಯೆಗಳು ಮತ್ತಷ್ಟು ಜಟಿಲವಾಗುತ್ತಲೇ ಹೋಗುತ್ತಿವೆ. ಸರ್ಕಾರಗಳ ನಿರ್ಲಕ್ಷ್ಯದಿಂದ ಜನರನ್ನು ತಿರಸ್ಕರಿಸಿದರೆ ಅನ್ಯ ಶಕ್ತಿಗಳಿಗೆ ಜನರ ಆಶ್ರಯ ನೀಡುತ್ತಾರೆ ಎಂಬ ಪಾಠ ಸರ್ಕಾರಕ್ಕೆ ಆಗಿದೆ. ನಕ್ಸಲರು ಎತ್ತಿದ್ದ ಪ್ರಶ್ನೆಗಳು ಪಶ್ಚಿಮಘಟ್ಟ ಪ್ರದೇಶದ ಜನರ ಸಮಸ್ಯೆಗಳೇ ಆಗಿರುವ ಕಾರಣ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಆದಿವಾಸಿಗಳು ಮತ್ತು ವನವಾಸಿ ಜನರ ವಿಶ್ವಾಸಗಳಿಸಬೇಕಿದೆ. ಪ್ರತಿಯೊಬ್ಬರಿಗೆ ಮೂಲಭೂತ ಸೌಕರ್ಯ ಕೊಡುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ನೆಲೆಯಲ್ಲಿ ಚಿಂತಿಸಬೇಕಿದೆ. ಕರ್ನಾಟಕ ನಕ್ಸಲ್ ಮುಕ್ತ ಮಾಡಿದ್ದೇವೆ ಎಂಬ ಉಮೇದಿನಲ್ಲಿರುವ ಸರಕಾರ ಅವರು ಎತ್ತಿರುವ ಮತ್ತು ಅದಕ್ಕಾಗಿ ಬಲಿದಾನ ಮಾಡಿರುವ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಚಿಂತಿಸಬೇಕಿದೆ. ಶರಣಾದ ನಕ್ಸಲರಿಗೂ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕುವ ಅವಕಾಶವನ್ನು ಸರಕಾರ ಮತ್ತು ನಾಗರೀಕ ಸಮಾಜ ಕಲ್ಪಿಸಿಕೊಡಬೇಕಿದೆ ಎನ್ನುತ್ತಾರೆ ಅಂದು ಸಾಕೇತ್ ರಾಜನ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರು.