ಧರ್ಮಸ್ಥಳ ಪ್ರಕರಣ: ಮಾಧ್ಯಮ ವರದಿ ನಿರ್ಬಂಧಿಸಲು ಸುಪ್ರೀಂ ಕೋರ್ಟ್ ನಕಾರ
ದಿನದಿಂದ ದಿನಕ್ಕೆ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ವರದಿಗಳನ್ನು ಪ್ರಕಟಿಸುತ್ತಿವೆ," ಎಂದು ಹರ್ಷೇಂದ್ರ ಕುಮಾರ್ ಅವರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ವಾದಿಸಿದರು.;
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳ ಮೇಲೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಂತೆ ನಿರ್ಬಂಧ ಹೇರಬೇಕೆಂದು ಕೋರಿ ಧರ್ಮಸ್ಥಳ ದೇವಸ್ಥಾನದ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಈ ಕುರಿತು ಹೊಸದಾಗಿ ತೀರ್ಮಾನ ಕೈಗೊಳ್ಳುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
"ದಿನದಿಂದ ದಿನಕ್ಕೆ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ವರದಿಗಳನ್ನು ಪ್ರಕಟಿಸುತ್ತಿವೆ," ಎಂದು ಹರ್ಷೇಂದ್ರ ಕುಮಾರ್ ಅವರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರಿದ್ದ ಪೀಠ, "ಅಪರೂಪದಲ್ಲೇ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗುತ್ತದೆ. ಈ ಪ್ರಕರಣದಲ್ಲಿ ವ್ಯಾಪಕ ನಿರ್ಬಂಧಕ ಆದೇಶಗಳನ್ನು ಜಾರಿಗೊಳಿಸಿದರೆ, ಅದು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ. ಉದಾಹರಣೆಗೆ, ಈ ಪ್ರಕರಣದಲ್ಲಿರುವ ನೈರ್ಮಲ್ಯ ಕೆಲಸಗಾರನ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಾಗುವುದಿಲ್ಲ," ಎಂದು ಅಭಿಪ್ರಾಯಪಟ್ಟಿತು.
"ಮೀಮ್ಗಳನ್ನು ತೆಗೆದುಹಾಕಲು ನೀವು ಕೋರಬಹುದು, ಅದಕ್ಕೊಂದು ಮಿತಿ ಇರಬೇಕು. ಈ ಎಲ್ಲಾ ಅಂಶಗಳನ್ನು ವಿಚಾರಣಾ ನ್ಯಾಯಾಲಯದ ಗಮನಕ್ಕೆ ತನ್ನಿ. ಅವರು ಸ್ವತಂತ್ರವಾಗಿ ತಮ್ಮ ವಿವೇಚನೆಯನ್ನು ಬಳಸಿ ನಿರ್ಧರಿಸಲಿ," ಎಂದು ಪೀಠವು ಸೂಚಿಸಿತು. ಈ ಹಿಂದೆ, 'ಕುಡ್ಲ ರ್ಯಾಂಪೇಜ್' ಎಂಬ ಯೂಟ್ಯೂಬ್ ಚಾನೆಲ್ ಮೇಲೆ ಬೆಂಗಳೂರಿನ ಸಿವಿಲ್ ನ್ಯಾಯಾಲಯ ವಿಧಿಸಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹರ್ಷೇಂದ್ರ ಕುಮಾರ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ಹಿನ್ನೆಲೆ
1995ರಿಂದ 2014ರವರೆಗೆ ತಾನು ಧರ್ಮಸ್ಥಳದಲ್ಲಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡಿದ್ದಾಗ, ಪ್ರಭಾವಿಗಳ ಸೂಚನೆಯಂತೆ 100ಕ್ಕೂ ಹೆಚ್ಚು ಶವಗಳನ್ನು ಅಕ್ರಮವಾಗಿ ಹೂತಿದ್ದೇನೆ ಎಂದು ಅನಾಮಿಕ ದೂರುದಾರನೊಬ್ಬ 2025ರ ಜುಲೈ 3ರಂದು ದೂರು ನೀಡಿದ್ದ. ಈ ಸ್ಫೋಟಕ ಆರೋಪದ ಹಿನ್ನೆಲೆಯಲ್ಲಿ ಎಸ್ಐಟಿ ರಚನೆಯಾಗಿದ್ದು, ಜುಲೈ 29ರಿಂದ ದೂರುದಾರ ಗುರುತಿಸಿದ ಸ್ಥಳಗಳಲ್ಲಿ ಅಗೆತದ ಕಾರ್ಯ ನಡೆಯುತ್ತಿದೆ. ಆ ಬಳಿಕ ಪ್ರಕರಣ ಸಂಚಲ ಮೂಡಿಸಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಪರ- ವಿರೋಧ ಭಯಂಕರ ವಿಡಿಯೊಗಳು, ಚರ್ಚೆಗಳು ಪ್ರಕಟವಾಗುತ್ತಿವೆ. ಇವುಗಳಲ್ಲಿ ತಮ್ಮ ವಿರುದ್ಧ ಯಾವುದೇ ವರದಿಗಳನ್ನು ಪ್ರಕಟಿಸದಂತೆ ಹರ್ಷೇಂದ್ರ ಹೆಗ್ಗಡೆ ಕೋರ್ಟ್ ಮೆಟ್ಟಿಲೇರಿದ್ದರು.