ರಾತ್ರೋರಾತ್ರಿ ವಿಷ್ಣುವರ್ಧನ್ ಸಮಾಧಿ ನೆಲಸಮ
ವಿಷ್ಣು ಅವರ ಸಮಾಧಿಯನ್ನು ಕೂಡ ಕಾಪಾಡಿಕೊಳ್ಳಲು ಆಗದ ಮಟ್ಟದಲ್ಲಿ ನಾವಿದ್ದೇವೆ. ನೆಮ್ಮದಿಯಾಗಿ ಮಲಗಿದ್ದ ನಮ್ಮ ಯಜಮಾನರ ಜಾಗ ಈಗ ಬರೀ ಮಣ್ಣಾಗಿದೆ. ನನಗೆ ಈ ನೋವು ತಡೆಯಲು ಆಗುತ್ತಿಲ್ಲ ಎಂದು ರವಿ ಶ್ರೀವತ್ಸ ಕಣ್ಣೀರಿಟ್ಟಿದ್ದಾರೆ.;
ವಿಷ್ಣುವರ್ಧನ್ ಸಮಾಧಿ
ಬೆಂಗಳೂರಿನ ಉತ್ತರಹಳ್ಳಿ ಸಮೀಪದ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ಸ್ಥಳವನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ.
ಅಭಿಮಾನ್ ಸ್ಟುಡಿಯೋದಲ್ಲಿದ್ದ ದಿವಂಗತ ನಟವಿಷ್ಣುವರ್ಧನ್ ಸ್ಮಾರಕವನ್ನು ನೆಲಸಮ ಮಾಡಿರುವುದು ದುಃಖ ತಂದಿದೆ. ಇಂದು ಸ್ಟುಡಿಯೋ ಜಾಗಕ್ಕೆ ತೆರಳಿದಾಗ ನೆಲಸಮವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ನಿರ್ದೇಶಕ ರವಿ ಶ್ರೀವತ್ಸ ಅವರು ಫೇಸ್‌ಬುಕ್ ಲೈವ್ ಬಂದು ಈ ವಿಚಾರವನ್ನು ಅಭಿಮಾನಿಗಳಿಗೆ ಮುಟ್ಟಿಸಿದ್ದಾರೆ.
ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿರುವ ಹಿನ್ನೆಲೆ ಬೆಂಗಳೂರಿನ ಮೂಲ ಸಮಾಧಿ ಸ್ಥಳಕ್ಕೆ ಅಭಿಮಾನಿಗಳಿಗೆ ಪ್ರವೇಶ ಸಿಗುತ್ತಿಲ್ಲ ಆಗಿದೆ. ಆದರೂ ಕೂಡ ಅಂತ್ಯಸಂಸ್ಕಾರ ನಡೆದ ಸ್ಥಳದ ಬಗ್ಗೆ ಅಭಿಮಾನಿಗಳಿಗೆ ಭಾವನಾತ್ಮಕ ನಂಟು ಇತ್ತು. ಆದರೆ, ಈಗ ಸಮಾಧಿ ಸ್ಥಳವನ್ನು ನೆಲಸಮ ಮಾಡಿರುವುದು ಸರಿಯಲ್ಲ ಎಂದು ರವಿ ಶ್ರೀವತ್ಸ ಅವರು ಭಾವುಕರಾಗಿದ್ದಾರೆ.
ನಮ್ಮ ದೇವರ ಗುಡಿ ನೆಲಸಮವಾಗಿದೆ. ಇದು ನಮ್ಮ ಯಜಮಾನರು ಮಲಗಿದ್ದ ಜಾಗ. ಅಲ್ಲೊಂದು ಪುಟ್ಟ ಗುಡಿ ಕೂಡ ಇತ್ತು. ಸಣ್ಣ ಗೋಪುರವಿತ್ತು. ಆ ಗೋಪುರವನ್ನು ರಾತ್ರೋ ರಾತ್ರಿ ನೆಲಸಮ ಮಾಡಲಾಗಿದೆ. ನಮ್ಮ ಯಜಮಾನರನ್ನು ನೋಡಲು ಬಂದರೆ ಗೇಟ್ ಕೂಡ ತೆಗೆಯುತ್ತಿಲ್ಲ. ಪೊಲೀಸರು ಕಾವಲಿಗೆ ಕೂತಿದ್ದಾರೆ ಎಂದು ರವಿ ಶ್ರೀವತ್ಸ ಹೇಳಿದ್ದಾರೆ.
ವಿಷ್ಣುವರ್ಧನ್ ಅವರ ಸಮಾಧಿಯನ್ನು ಕಾಪಾಡಿಕೊಳ್ಳಲು ಆಗದ ಮಟ್ಟದಲ್ಲಿ ನಾವಿದ್ದೇವೆ. ನೆಮ್ಮದಿಯಾಗಿ ಮಲಗಿದ್ದ ನಮ್ಮ ಯಜಮಾನರ ಜಾಗ ಈಗ ಬರೀ ಮಣ್ಣಾಗಿದೆ. ನನಗೆ ಈ ನೋವು ತಡೆಯಲು ಆಗುತ್ತಿಲ್ಲ. ನಮ್ಮ ಯಜಮಾನರನ್ನು ಇವತ್ತು ನಾವು ನಿಜವಾಗಿಯೂ ಕಳೆದುಕೊಂಡಿದ್ದೀವಿ. ಅವರಿಗೆ ಯಾರೂ ಇಲ್ಲ ಎಂಬಂತೆ ಅನಾಥರನ್ನಾಗಿ ಮಾಡಿಬಿಟ್ಟರು ಎಂದು ರವಿ ಶ್ರೀವತ್ಸ ಕಣ್ಣೀರಿಟ್ಟಿದ್ದಾರೆ.
ಇಷ್ಟೆಲ್ಲ ನಡೆಯುತ್ತಿದ್ದರೂ ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ದೊಡ್ಡ ನಿರ್ಮಾಪಕರು ಈಗ ಎಲ್ಲಿದ್ದೀರಿ?ನಿರ್ದೇಶಕರು ಎಲ್ಲಿದ್ದೀರಿ?, ನೆಲಸಮ ಆಗಿರುವ ನಮ್ಮ ಯಜಮಾನರನ್ನು ನೋಡಿ ಎಂದು ಆಕ್ರೋಶ ಹೊರಹಾಕಿದರು. ಇವರು ಫೇಸ್‌ಬುಲ್ ಲೈವ್ ಮಾಡುವಾಗಲೇ ಪೊಲೀಸರು ತಡೆದಿದ್ದು, ನನ್ನ ಮೇಲೆ ದರ್ಪ ತೋರಿದ್ದಾರೆ. ನನ್ನ ಹಿಡಿದು ಎಳೆದಾಡಿದ್ದಾರೆ ಎಂದು ಘಟನೆ ವಿವರಿಸಿದ್ದಾರೆ.
ಏನಿದು ವಿವಾದ?
ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲಾಗಿತ್ತು. ಹಾಗಾಗಿ, ಅವರ ಸ್ಮಾರಕವನ್ನು ಅಲ್ಲೇ ನಿರ್ಮಿಸಬೇಕು ಎಂಬುದು ಅಭಿಮಾನಿಗಳ ಬಹುದೊಡ್ಡ ಒತ್ತಾಯವಾಗಿತ್ತು. ಆದರೆ, ಸ್ಟುಡಿಯೋ ಮಾಲೀಕರಾದ ದಿವಂಗತ ಬಾಲಕೃಷ್ಣ ಅವರ ಕುಟುಂಬದವರು ಜಾಗದ ವಿಷಯದಲ್ಲಿ ತಕರಾರು ಎತ್ತಿದ್ದರು. ಇದು ಸ್ಮಾರಕ ನಿರ್ಮಾಣಕ್ಕೆ ಕಾನೂನು ತೊಡಕು ಸೃಷ್ಟಿಸಿತು.
ಅಭಿಮಾನ್ ಸ್ಟುಡಿಯೋದ ಜಾಗದ ವಿವಾದ ಬಗೆಹರಿಯದ ಕಾರಣ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬವು ಸ್ಮಾರಕವನ್ನು ಅವರ ಹುಟ್ಟೂರು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಿತ್ತು. ಅದರಂತೆ ಮೈಸೂರಿನ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಲಾಯಿತು. ಆದರೂ, ಆ ಜಾಗದ ಸುತ್ತಮುತ್ತಲ ರೈತರು ಕೂಡ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಿದ್ದರೂ ಅನೇಕ ಅಭಿಮಾನಿಗಳು ಬೆಂಗಳೂರಿನಲ್ಲಿ ಅದರಲ್ಲೂ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣವಾಗದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ ದಿನದಂದು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳಕ್ಕೆ ಸಾವಿರಾರು ಅಭಿಮಾನಿಗಳು ಭೇಟಿ ನೀಡಿದರೂ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ. ಇದಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.