ಧರ್ಮಸ್ಥಳದಲ್ಲಿ ಪತ್ರಕರ್ತರ ಮೇಲೆ ಹಲ್ಲೆ; 7 ಪ್ರಕರಣ ದಾಖಲು
ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆ ಬಳಿ ಯೂಟ್ಯೂರ್‌ಗಳ ಮೇಲೆ ನಡೆದ ಹಲ್ಲೆ ಸಂಬಂಧ 'ಕುಡ್ಲ ರಾಂಪೇಜ್' ಯುಟ್ಯೂಬ್ ವರದಿಗಾರ ಅಜಯ್ ಅಂಚನ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು.;
ಧರ್ಮಸ್ಥಳ
ಧರ್ಮಸ್ಥಳ ಗ್ರಾಮದಲ್ಲಿ ಬುಧವಾರ ಮಾಧ್ಯಮದವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣ ದಾಖಲಾಗಿವೆ. ಇದಲ್ಲದೇ ಎರಡೂ ಕಡೆ ಗುಂಪು ಸೇರಿದ್ದವರು ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಒಟ್ಟು ಮೂರು ಪ್ರಕರಣ ದಾಖಲಿಸಿದ್ದಾರೆ.
ದಾಖಲಾದ ಪ್ರಕರಣಗಳ ವಿವರ
ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆ ಬಳಿ ಯೂಟ್ಯೂರ್‌ಗಳ ಮೇಲೆ ನಡೆದ ಹಲ್ಲೆ ಸಂಬಂಧ 'ಕುಡ್ಲ ರಾಂಪೇಜ್' ಯುಟ್ಯೂಬ್ ಚಾನೆಲ್ ವರದಿಗಾರ ಅಜಯ್ ಅಂಚನ್, ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
'ಧರ್ಮಸ್ಥಳದ ಪಾಂಗಾಳ ರಸ್ತೆ ಬಳಿ ಒಬ್ಬರ ವಿಡಿಯೊ ಹೇಳಿಕೆ ಪಡೆಯುತ್ತಿದ್ದಾಗ ಸ್ಥಳಕ್ಕೆ ಬಂದ 15 ರಿಂದ 50 ಜನರ ಕಿಡಿಗೇಡಿಗಳ ಗುಂಪು ಹಲ್ಲೆ ನಡೆಸಿತು. ನನಗೆ ಹಾಗೂ ನನ್ನ ಕ್ಯಾಮೆರಾಮ್ಯಾನ್ ಸುಹಾಸ್, 'ಸಂಚಾರಿ ಸ್ಟುಡಿಯೊ' ಯೂಟ್ಯೂಬ್ ಚಾನೆಲ್ ನ ಸಂತೋಷ್ ಹಾಗೂ 'ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನೆಲ್ ನ ಅಭಿಷೇಕ್ ಎಂಬುವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ʼನನ್ನ ವಿಡಿಯೊ ಕ್ಯಾಮೆರಾವನ್ನು ರಸ್ತೆಗೆ ಎಸೆದು ಹಾನಿಗೊಳಿಸಿದ್ದಾರೆ. ಕ್ಯಾಮೆರಾದ ಮೆಮೊರಿ ಕಾರ್ಡ್ ಕಿತ್ತುಕೊಂಡಿದ್ದಾರೆʼ ಎಂದು ದೂರಿದ್ದು, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼಧರ್ಮಸ್ಥಳ -ಪಾಂಗಾಳ ರಸ್ತೆʼಯಲ್ಲಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದಿರುವ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ್ದೆ. ಅಲ್ಲಿ ಸೇರಿದ್ದ ಸುಮಾರು 30 ರಿಂದ 40 ಜನರ ಗುಂಪು ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿತು. ಸ್ಥಳದಲ್ಲಿದ್ದ ಎರಡು ವಾಹನಗಳು ಹಾಗೂ ಕ್ಯಾಮೆರಾಗಳಿಗೆ ಹಾನಿಗೊಳಿಸಿದರುʼ ಎಂದು ಬೆಳ್ತಂಗಡಿ ನಿವಾಸಿ ಪ್ರಮೋದ್ ಕುಮಾರ್ ಶೆಟ್ಟಿ ದೂರು ನೀಡಿದ್ದಾರೆ. ಈ ಸಂಬಂಧವೂ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಧರ್ಮಸ್ಥಳದ ಪಾಂಗಾಳ ರಸ್ತೆ ಬಳಿ ನಡೆದ ಹಲ್ಲೆಯ ಗಾಯಾಳುಗಳ ಬಗ್ಗೆ ವರದಿ ಮಾಡಲು ಉಜಿರೆಯ ಬೆನಕ ಆಸ್ಪತ್ರೆಯ ಬಳಿ ತೆರಳಿದ್ದೆ. ಸ್ಥಳದಲ್ಲಿ ಇದ್ದ ಗಿರೀಶ್ ಮಟ್ಟಣ್ಣನವರ್ ಅವರ ಬಳಿ ವಿಡಿಯೊ ಹೇಳಿಕೆ ನೀಡುವಂತೆ ಕೋರಿದೆ. ಆಗ ಅವರು ಏಕಾಏಕಿ ಬೈದರು. ಸ್ಥಳದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಜೊತೆಗಿದ್ದ ಇತರರು ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿದ್ದಾರೆ. ಯೂಟ್ಯೂಬರ್ ಸಮೀರ್ ಸ್ಥಳಕ್ಕೆ ಬಂದು ಜೀವ ಬೆದರಿಕೆ ಒಡ್ಡಿದ್ದಾನೆ' ಎಂದು ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿಯ ವರದಿಗಾರ ಹರೀಶ್ ಆರ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
'ಧರ್ಮಸ್ಥಳದ ಪಾಂಗಾಳ ರಸ್ತೆ ಬಳಿ ಹಲ್ಲೆಗೊಳಗಾದ ಗಾಯಾಳುಗಳನ್ನು ನಾನು ಚಿಕಿತ್ಸೆಗಾಗಿ ಉಜಿರೆ ಬೆನಕ ಆಸ್ಪತ್ರೆಗೆ ವಾಹನದಲ್ಲಿ ಕರೆದೊಯ್ದಿದ್ದೆ. ಗಾಯಾಳುಗಳನ್ನು ನೋಡಲು ಬಂದಿದ್ದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಅವರಿಂದ ಹೇಳಿಕೆ ಪಡೆಯಲು ಬಂದಿದ್ದ ಆರೋಪಿಯು ಏಷ್ಯಾ ನೆಟ್ ಸುವರ್ಣ ಚಾನೆಲ್ ವರದಿಗಾರ ಹಾಗೂ ಕ್ಯಾಮೆರಾಮೆನ್ ಅವರನ್ನು ತಡೆದು ನಿಲ್ಲಿಸಿದ್ದರು. ಅವರು ಹೇಳಿಕೆ ಕೊಡಲು ನಿರಾಕರಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಳ್ಳಾಟ ನಡೆಸಿದ್ದರು.
ಇದಾದ ಕೆಲಹೊತ್ತಿನಲ್ಲಿ ಸುವರ್ಣ ಸುದ್ದಿ ವಾಹಿನಿಯಲ್ಲಿ ಅಜಿತ್ ಹನುಮಕ್ಕನವರ್ ಎಂಬ ನ್ಯೂಸ್ ಆಂಕರ್, 'ಸುವರ್ಣ ನ್ಯೂಸ್ ವರದಿಗಾರರ ಮೇಲೆ ಮಹೇಶ್ ಶೆಟ್ಟಿ ತಿಮ್ಮರೋಡಿಯಿಂದ ಹಲ್ಲೆ' ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಾರೆ' ಎಂದು ಬೆಳ್ತಂಗಡಿ ನಿವಾಸಿ ಗಣೇಶ್ ಶೆಟ್ಟಿ ಎಂಬುವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.