Dharmastala Mass Burial Case |ಧರ್ಮಸ್ಥಳದ ಬೊಳಿಯಾರ್‌ ಕಾಡಿನೊಳಗೆ ಎಸ್‌ಐಟಿ ತಂಡ

ದೂರುದಾರ ಮೊದಲು ತೋರಿಸಿದ್ದ 13 ಪಾಯಿಂಟ್‌ಗಳ ಜತೆಗೆ ಮತ್ತಷ್ಟು ಜಾಗಗಳನ್ನು ಗುರುತಿಸುವ ಸಲುವಾಗಿ ಎಸ್‌ಐಟಿ ಅಧಿಕಾರಿಗಳು ಬೊಳಿಯಾರ್‌ ಕಾಡಿನೊಳಗೆ ಹೋಗಿದ್ದಾರೆ.;

Update: 2025-08-08 11:58 GMT

ದೂರುದಾರನೊಂದಿಗೆ ತೆರಳುತ್ತಿರುವ ಎಸ್‌ಐಟಿ ಅಧಿಕಾರಿಗಳು. 

ಕಳೆದ ಹನ್ನೊಂದು ದಿನಗಳಿಂದ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಹೊಸ ತಿರುವು ಪಡೆದಿದೆ.

ಸಾಕ್ಷಿ ದೂರುದಾರ ಗುರುತಿಸಿದ 12 ಜಾಗಗಳಲ್ಲಿ ಶೋಧ ನಡೆಸಿರುವ ಎಸ್‌ಐಟಿ ತಂಡ 13 ನೇ ಸ್ಥಳದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲು ತೀರ್ಮಾನಿಸಿ, ಶೋಧ ಕಾರ್ಯ ಸ್ಥಗಿತಗೊಳಿಸಿದೆ. ಈ ನಡುವೆ, ದೂರು ಸಾಕ್ಷಿದಾರ ಎಸ್‌ಐಟಿ ಅಧಿಕಾರಿಗಳೊಂದಿಗೆ ಬೊಳಿಯಾರು ಕಾಡಿಗೆ ಹೋಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ದೂರುದಾರ ಮೊದಲು ತೋರಿಸಿದ್ದ 13 ಪಾಯಿಂಟ್‌ಗಳ ಜತೆಗೆ ಮತ್ತಷ್ಟು ಜಾಗಗಳನ್ನು ಗುರುತಿಸುವ ಸಾಧ್ಯತೆ ಇದೆ. ಆದ್ದರಿಂದಲೇ ಎಸ್‌ಐಟಿ ಅಧಿಕಾರಿಗಳು ಇಂದು 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ನಡೆಸದೇ ದೂರುದಾರನ ಜತೆ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿ ಎಸ್.ಪಿ. ಜಿತೇಂದ್ರ ಕುಮಾರ್ ದಯಾಮ ಮತ್ತಿತರ ಅಧಿಕಾರಿಗಳ ಜತೆ ಐದಾರು ಕಾರ್ಮಿಕರು ಮಾತ್ರ ಕಾಡಿನೊಳಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಅಧಿಕಾರಿಗಳು ಇಲ್ಲಿಯವರೆಗೂ ಒಟ್ಟು 12 ಪಾಯಿಂಟ್‌ಗಳಲ್ಲಿ ಶೋಧ ಕಾರ್ಯ ನಡೆಸಿದ್ದು, ಆ.7ರಂದು 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ನಡೆಸಬೇಕಿತ್ತು. ಆದರೆ, ಅಧಿಕಾರಿಗಳು ಶೋಧ ಕಾರ್ಯ ನಡೆಸದೆ ಕೇವಲ ದೂರುದಾರ ಹಾಗೂ ಮತ್ತಿಬ್ಬರನ್ನು ವಿಚಾರಣೆ ನಡೆಸಿ ವಾಪಸ್‌ ಕಳಿಸಿದ್ದರು. ನಂತರ ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಂತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತನಿಖೆಗೆ ಅತ್ಯಾಧುನಿಕ ʼಜಿಪಿಆರ್‌ ತಂತ್ರಜ್ಞಾನʼ ಬಳಸುವ ಕುರಿತು ಚರ್ಚೆ ನಡೆಸಲಾಗಿತ್ತು. 

 ದೂರುದಾರ ವ್ಯಕ್ತಿಯು ನೇತ್ರಾವತಿ ನದಿ ಸುತ್ತಮುತ್ತ ಜುಲೈ 28 ರಂದು ಒಟ್ಟು 13 ಸ್ಥಳಗಳನ್ನು ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಗುರುತಿಸಿದ್ದ. ಜುಲೈ 29 ರಂದು 1 ಹಾಗೂ 2ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ಆರಂಭಿಸಿದ್ದ ಎಸ್‌ಐಟಿ ಅಧಿಕಾರಿಗಳಿಗೆ ಯಾವುದೇ ಕುರುಹು ಸಿಕ್ಕಿರಲಿಲ್ಲ. ಜುಲೈ 3, 4 ಹಾಗೂ 5 ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು. ಅಲ್ಲಿಯೂ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಆದರೆ, ಜುಲೈ 31 ರಂದು 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರ ಪತ್ತೆಯಾಗಿತ್ತು.

ಆರನೇ ಪಾಯಿಂಟ್‌ನಲ್ಲಿ ದೊರೆತ ಅಸ್ಥಿಪಂಜರವನ್ನು ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆ.1ರಂದು 7 ಹಾಗೂ 8ನೇ ಪಾಯಿಂಟ್‌ ಹಾಗೂ ಆ. 2ರಂದು 9 ಹಾಗೂ 10ನೇ ಪಾಯಿಂಟ್‌ನಲ್ಲಿ ಅಧಿಕಾರಿಗಳಿಗೆ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ. ಆ. 4ರಂದು 11ನೇ ಪಾಯಿಂಟ್‌ನಲ್ಲಿ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸುವ ವೇಳೆಗೆ ದೂರುದಾರ ನಿಗದಿತ ಸ್ಥಳದ ಬದಲು ಬಂಗ್ಲಗುಡ್ಡದಲ್ಲಿ ಶೋಧ ಕಾರ್ಯ ಮಾಡಲು ತಿಳಿಸಿದ್ದ. ದೂರುದಾರ ತೋರಿಸಿದ ಸ್ಥಳದಲ್ಲಿ ಶೋಧ ಕಾರ್ಯ ಆರಂಭಿಸಿದಾಗ ಅಸ್ಥಿಪಂಜರದ ನೂರಕ್ಕೂ ಹೆಚ್ಚು ಮೂಳೆಗಳು ಅಧಿಕಾರಿಗಳಿಗೆ ಸಿಕ್ಕಿದ್ದವು. ಇದರಿಂದ ತನಿಖೆಗೆ ಮತ್ತಷ್ಟು ವೇಗ ಸಿಕ್ಕಿತ್ತು. 

Tags:    

Similar News