2019ರ ನನ್ನ ಸೋಲಿಗೂ ಬೋಗಸ್ ವೋಟಿಂಗೇ ಕಾರಣ: ಮಲ್ಲಿಕಾರ್ಜುನ ಖರ್ಗೆ

ಇದು ಕೇವಲ ಒಂದು ಕ್ಷೇತ್ರದ ಸಮಸ್ಯೆಯಲ್ಲ, ಇಡೀ ದೇಶವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.;

Update: 2025-08-08 08:36 GMT
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರಿನಲ್ಲಿ ನಡೆದ 'ಮತಗಳವು ' ವಿರುದ್ಧದ ಪ್ರತಿಭಟನೆಯು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯೊಂದಿಗೆ ಹೊಸ ಚರ್ಚಗೆ ನಾಂದಿ ಹಾಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ 'ಬೋಗಸ್ ಮತದಾನ'ವೇ ಕಾರಣ ಎಂದು ಅವರು ನೇರವಾಗಿ ಆರೋಪಿಸಿದ್ದು, ಇದು ಕೇವಲ ಒಂದು ಕ್ಷೇತ್ರದ ಸಮಸ್ಯೆಯಲ್ಲ, ಇಡೀ ದೇಶವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ ಎಂದು ಪ್ರತಿಪಾದಿಸಿದ್ದಾರೆ.

"ನಾನು ಕೂಡ ಸೋತಿದ್ದು ಇದೇ ಬೋಗಸ್ ಮತದಾನದಿಂದ. ನಾನು 12 ಚುನಾವಣೆಗಳಲ್ಲಿ ಸೋತಿದ್ದು ಒಂದೇ ಬಾರಿ. ಅದು 2019ರಲ್ಲಿ ಬೋಗಸ್​ ಓಟಿನಿಂದ. ಇದನ್ನು ಈಗೇಕೆ ಹೇಳುತ್ತಿದ್ದೇನೆಂದರೆ, ಇದು ಕೇವಲ ವೈಯಕ್ತಿಕ ಸೋಲಿನ ಪ್ರಶ್ನೆಯಲ್ಲ, ಇದು ಪ್ರಜಾಪ್ರಭುತ್ವದ ಮೇಲಿನ ಹಲ್ಲೆ" ಎಂದು ಖರ್ಗೆ ಪ್ರತಿಪಾದಿಸಿದರು.

ಕಳ್ಳತನದ ಸರ್ಕಾರ

ತಮ್ಮ ವೈಯಕ್ತಿಕ ಸೋಲನ್ನು ಪ್ರಸ್ತಾಪಿಸಿದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, "ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಮತಗಳನ್ನು ಕದ್ದಿದ್ದಾರೆ. ಇದು 'ಕಳ್ಳತನದ ಸರ್ಕಾರ'ವಾಗಿದ್ದು, ಪ್ರಧಾನಿ ಕುರ್ಚಿಯಲ್ಲಿ ಮುಂದುವರಿಯಲು ಮೋದಿಯವರಿಗೆ ಯಾವುದೇ ನೈತಿಕ ಹಕ್ಕಿಲ್ಲ," ಎಂದು ಹೇಳಿದರು.

ಮೋದಿ ಸರ್ಕಾರವು ಇ.ಡಿ, ಸಿಬಿಐನಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷ ನಾಯಕರನ್ನು ಹೆದರಿಸುತ್ತಿದೆ ಹಾಗೂ ಹಣದ ಬಲದಿಂದ, ಪಕ್ಷಗಳನ್ನು ಒಡೆದು ಹಲವು ರಾಜ್ಯಗಳಲ್ಲಿ ಅಕ್ರಮವಾಗಿ ಸರ್ಕಾರ ರಚಿಸಿದೆ ಎಂದು ಆರೋಪಿಸಿದ ಅವರು, "ಜನಬೆಂಬಲವಿಲ್ಲದ ಈ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ," ಎಂದು ಭವಿಷ್ಯ ನುಡಿದರು.

'ಇಂಡಿಯಾ' ಒಕ್ಕೂಟವು ಈ ವಿಷಯದಲ್ಲಿ ಸಂಪೂರ್ಣ ಒಗ್ಗಟ್ಟಾಗಿದೆ ಎಂದು ಸ್ಪಷ್ಟಪಡಿಸಿದ ಖರ್ಗೆ, "ಸೋಮವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ಸಲ್ಲಿಸಲಾಗುವುದು. ಸಂವಿಧಾನವನ್ನು ಉಳಿಸಲು, 'ಕ್ವಿಟ್ ಇಂಡಿಯಾ' ಮಾದರಿಯಲ್ಲಿ 'ಮಾಡು ಇಲ್ಲವೇ ಮಡಿ' ಎಂಬ ಘೋಷಣೆಯೊಂದಿಗೆ ನಾವು ಹೋರಾಟ ನಡೆಸಬೇಕಿದೆ," ಎಂದರು.

Tags:    

Similar News