Dharmasthala Case: ಬೆಳ್ತಂಗಡಿಯಲ್ಲಿ ಮಹಿಳಾ ಶಕ್ತಿ ಪ್ರದರ್ಶನ: ಎಲ್ಲ ಅಸಹಜ ಸಾವುಗಳ ತನಿಖೆಗೆ ಆಗ್ರಹ
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಮಹಿಳೆಯರು ಮತ್ತು ಹೋರಾಟಗಾರರು ಈ ಸಮಾವೇಶದಲ್ಲಿ ಪಾಲ್ಗೊಂಡು ನ್ಯಾಯಕ್ಕಾಗಿ ಒಕ್ಕೊರಲಿನ ಧ್ವನಿ ಎತ್ತಿದರು.
ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ನೂರಾರು ಅಸಹಜ ಸಾವುಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಇಂದು (ಮಂಗಳವಾರ) ಬೆಳ್ತಂಗಡಿಯಲ್ಲಿ 'ಕೊಂದವರು ಯಾರು?' ಆಂದೋಲನದ ವತಿಯಿಂದ ಬೃಹತ್ 'ಮಹಿಳಾ ನ್ಯಾಯ ಸಮಾವೇಶ' ಮತ್ತು ಪ್ರತಿಭಟನಾ ಜಾಥಾ ಜರುಗಿತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಮಹಿಳೆಯರು ಮತ್ತು ಹೋರಾಟಗಾರರು ಈ ಸಮಾವೇಶದಲ್ಲಿ ಪಾಲ್ಗೊಂಡು ನ್ಯಾಯಕ್ಕಾಗಿ ಒಕ್ಕೊರಲಿನ ಧ್ವನಿ ಎತ್ತಿದರು.
ಎಸ್ಐಟಿ ತನಿಖೆ ಕೇವಲ ಕಣ್ಣೊರೆಸುವ ತಂತ್ರವೇ?
ಸಮಾವೇಶಕ್ಕೂ ಮುನ್ನ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಪ್ರಮುಖ ಹೋರಾಟಗಾರ್ತಿ ಜ್ಯೋತಿ ಅವರು, ಪ್ರಸ್ತುತ ನಡೆಯುತ್ತಿರುವ ಎಸ್ಐಟಿ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ನಮ್ಮ ಹೋರಾಟ ಸಂಪೂರ್ಣವಾಗಿ ನೊಂದವರ ಪರವಾಗಿದೆ. ಆದರೆ, ನಮಗೆ ಸಿಗುತ್ತಿರುವ ಮಾಹಿತಿಯ ಪ್ರಕಾರ, ಈಗ ರಚನೆಯಾಗಿರುವ ವಿಶೇಷ ತನಿಖಾ ತಂಡ (SIT) ಕೇವಲ 'ಬುರುಡೆ ಚಿನ್ನಯ್ಯ' ಎಂಬುವವರ ಪ್ರಕರಣದ ಬಗ್ಗೆ ಮಾತ್ರ ತನಿಖೆ ನಡೆಸುತ್ತಿದೆ. ಧರ್ಮಸ್ಥಳದಲ್ಲಿ ನಡೆದ ಇತರ ನೂರಾರು ಅಸಹಜ ಸಾವುಗಳ ಬಗ್ಗೆ ಅದು ಮೌನ ವಹಿಸಿದೆ," ಎಂದು ಗಂಭೀರ ಆರೋಪ ಮಾಡಿದರು.
"ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಕೂಡ ಈ ಅಸಹಜ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಪತ್ರ ಬರೆದಿದ್ದಾರೆ. ಆದರೂ ಎಸ್ಐಟಿ ಯಾಕೆ ಇನ್ನೂ ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿಲ್ಲ? ತನಿಖಾ ತಂಡದ ಮೇಲೆ ಒಳಗಿನ ಮತ್ತು ಹೊರಗಿನ ಪ್ರಬಲ ಶಕ್ತಿಗಳ ಒತ್ತಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ, ಎಷ್ಟೇ ಒತ್ತಡವಿದ್ದರೂ ತನಿಖಾ ಸಂಸ್ಥೆಗಳು ಅದಕ್ಕೆ ಮಣಿಯಬಾರದು. ಸತ್ಯ ಹೊರಬರಲೇಬೇಕು," ಎಂದು ಜ್ಯೋತಿ ಅವರು ಆಗ್ರಹಿಸಿದರು. ಅಲ್ಲದೆ, "ನಮ್ಮ ಈ ಹೋರಾಟವನ್ನು ಹತ್ತಿಕ್ಕಲು ಹಲವು ರೀತಿಯ ಷಡ್ಯಂತ್ರಗಳು ನಡೆದವು, ಆದರೆ ನಾವು ಯಾವುದಕ್ಕೂ ಜಗ್ಗದೆ ರಾಜ್ಯಾದ್ಯಂತ ಮಹಿಳೆಯರನ್ನು ಒಗ್ಗೂಡಿಸಿ ಇಲ್ಲಿಗೆ ಬಂದಿದ್ದೇವೆ," ಎಂದರು.
ಇದು ಹೋರಾಟದ ಅಂತ್ಯವಲ್ಲ, ಆರಂಭ
ಮತ್ತೊಬ್ಬರು ಹೋರಾಟಗಾರ್ತಿ ಶಶಿಕಲಾ ಶೆಟ್ಟಿ ಅವರು ಮಾತನಾಡಿ, ಇಂದಿನ ಸಮಾವೇಶ ಹೋರಾಟದ ಅಂತ್ಯವಲ್ಲ, ಬದಲಾಗಿ ಇದೊಂದು ಹೊಸ ಆರಂಭ ಎಂದು ಎಚ್ಚರಿಸಿದರು. "ಈ ಭಾಗದಲ್ಲಿ ನಡೆದಿರುವ ಅಸಹಜ ಸಾವುಗಳು ಆಘಾತಕಾರಿಯಾಗಿವೆ. ತಮ್ಮವರನ್ನು ಕಳೆದುಕೊಂಡ ನೊಂದ ಕುಟುಂಬಗಳಿಗೆ ನ್ಯಾಯ ಸಿಗುವವರೆಗೂ ನಾವು ವಿರಮಿಸುವುದಿಲ್ಲ. ನಮ್ಮ ಈ ನ್ಯಾಯಯುತ ಹೋರಾಟಕ್ಕೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಎಲ್ಲಿಯವರೆಗೆ ನ್ಯಾಯ ಸಿಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ," ಎಂದು ಅವರು ಸ್ಪಷ್ಟಪಡಿಸಿದರು.
ಬೃಹತ್ ಜಾಥಾ
ಸಮಾವೇಶಕ್ಕೂ ಮುನ್ನ ಬೆಳ್ತಂಗಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಬೃಹತ್ ಜಾಥಾ ನಡೆಸಿದರು. 'ಕೊಂದವರು ಯಾರು?', 'ನಮಗೆ ನ್ಯಾಯ ಬೇಕು' ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿವಿಧ ಮಹಿಳಾ ಸಂಘಟನೆಗಳು, ಪ್ರಗತಿಪರ ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರು, ಧರ್ಮಸ್ಥಳದಲ್ಲಿನ ಅನುಮಾನಾಸ್ಪದ ಸಾವುಗಳ ಸತ್ಯಾಸತ್ಯತೆ ಬಯಲಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.