ಚತುಷ್ಪಥ ರೈಲು ಮಾರ್ಗ; ತುಮಕೂರು, ಮೈಸೂರು ನಡುವೆ ಆರ್ಥಿಕ ಚಟುವಟಿಕೆಗೆ ಸಿಗಲಿದೆ ಉತ್ತೇಜನ

ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಸುವಂತಾಗಲಿದೆ. ರೈಲುಗಳ ಸಂಖ್ಯೆಯೂ ಹೆಚ್ಚಲಿದೆ. ಇದರಿಂದ ಬೆಂಗಳೂರಿನ ಮೇಲೆ ಒತ್ತಡವೂ ಕ್ರಮೇಣ ಕಡಿಮೆಯಾಗಲಿದೆ.

Update: 2025-12-16 03:30 GMT
Click the Play button to listen to article

ಸಾಂಸ್ಕೃತಿಕ ನಗರಿ ಮೈಸೂರು, ಕಲ್ಪತರು ನಾಡು ತುಮಕೂರು ಜಿಲ್ಲೆಗಳನ್ನು ರಾಜಧಾನಿಯೊಂದಿಗೆ ಇನ್ನಷ್ಟು ಬೆಸೆಯುವಂತೆ ಮಾಡಲು ಕೇಂದ್ರ ರೈಲ್ವೆ ಸಚಿವಾಲಯವು ತುಮಕೂರು-ಬೆಂಗಳೂರು, ಬೆಂಗಳೂರು-ಮೈಸೂರು ನಡುವೆ ಚತುಷ್ಪಥ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಡಿ ಇಟ್ಟಿದೆ.

ಈ ಸಂಬಂಧ ರಾಜ್ಯ ಸರ್ಕಾರ ಕಾರ್ಯಸಾಧ್ಯತಾ ಸಮೀಕ್ಷೆ ಆರಂಭಿಸಿದೆ. ಇದೇ ಡಿಸೆಂಬರ್ 25 ಹಾಗೂ ಮುಂದಿನ ವರ್ಷ ಜನವರಿ ತಿಂಗಳಲ್ಲಿ ಕ್ರಮವಾಗಿ ಎರಡೂ ಮಾರ್ಗಗಳ ವರದಿ ರಾಜ್ಯ ಸರ್ಕಾರದ ಕೈ ಸೇರಲಿದೆ. ಯೋಜನೆ ಘೋಷಣೆಯಾದ ಬೆನ್ನಲ್ಲೇ ಎರಡೂ ನಗರಗಳ ಮಧ್ಯೆ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ.

ತುಮಕೂರು-ಬೆಂಗಳೂರು ನಡುವೆ 70.5 ಕಿ.ಮೀ. ಉದ್ದದ ಮಾರ್ಗವನ್ನು ಚತುಷ್ಪಥ ಮಾರ್ಗವಾಗಿ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ. ಅಂದಾಜು 3,500 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ಯೋಜನೆಯ ಭಾಗವಾಗಿಯೇ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ತುಮಕೂರು ಮಾರ್ಗದ ಪಂಡಿತನಹಳ್ಳಿ ಹಾಗೂ ಹಿರೇಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಆರ್ಥಿಕ ಚಟುವಟಿಕೆಗೆ ಉತ್ತೇಜನ ದೊರೆತಿದೆ.

ಸರಾಗವಾಗಲಿದೆ ರೈಲು ಸಂಚಾರ

ಚತುಷ್ಪಥ ಮಾರ್ಗ ನಿರ್ಮಾಣದಿಂದ ಹಳಿಗಳ ಸಂಖ್ಯೆ ಹೆಚ್ಚಲಿದೆ. ಈಗಿರುವ ಎರಡು ಹಳಿಗಳ ಬದಲಿಗೆ ನಾಲ್ಕು ಸಮಾನಾಂತರ ಹಳಿಗಳು ಬರಲಿದ್ದು, ಸಂಚಾರ ವ್ಯವಸ್ಥೆ ಗಮನಾರ್ಹವಾಗಿ ಹೆಚ್ಚಲಿದೆ. ಇದರಿಂದ ತ್ವರಿತ ಪ್ರಯಾಣ ಸಾಧ್ಯವಾಗಲಿದೆ. ಹೆಚ್ಚು ರೈಲುಗಳ ಓಡಾಟದಿಂದ ಪ್ರಯಾಣಿಕರಿಗೂ ಅನುಕೂಲವಾಗಲಿದೆ.

ಚತುಷ್ಪಥ ಮಾರ್ಗ ನಿರ್ಮಾಣದಿಂದ ಎಕ್ಸ್ಪ್ರೆಸ್, ಹೈ-ಸ್ಪೀಡ್, ಪ್ಯಾಸೆಂಜರ್‌ ಹಾಗೂ ಸರಕು ಸಾಗಣೆ ರೈಲುಗಳ ಸಂಚಾರ ಸುಲಭವಾಗಲಿದೆ. ಪ್ರಸ್ತುತ, ರೈಲುಗಳ ಸಂಚಾರದಲ್ಲಿ ಆಗುತ್ತಿರುವ ವಿಳಂಬವೂ ತಪ್ಪಲಿದೆ. ಎರಡು ಹಳಿಗಳು ಸರಕು ಸಾಗಣೆ ವಾಹನಗಳು ಸಂಚರಿಸಿದರೂ ಉಳಿದ ಎರಡರಲ್ಲಿ ಪ್ರಯಾಣಿಕ ರೈಲುಗಳು ಯಾವುದೇ ಅಡೆತಡೆ ಇಲ್ಲದೇ ಸಂಚರಿಸಬಹುದಾಗಿದೆ.

ಅಭಿವೃದ್ಧಿಗೆ ಹೊಸ ಆಯಾಮ

ಚತುಷ್ಪಥ ರೈಲು ಮಾರ್ಗದಿಂದ ತುಮಕೂರು ಹಾಗೂ ಮೈಸೂರು ಜಿಲ್ಲೆಗಳ ಆರ್ಥಿಕತೆ ಹೊಸ ದಿಕ್ಕಿನತ್ತ ತೆರೆದುಕೊಳ್ಳಲಿದೆ. ಬೆಂಗಳೂರಿನೊಂದಿಗೆ ಸಂಪರ್ಕ ಸುಲಭವಾಗಲಿದೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಭೂಮಿ ಬೆಲೆ ಏರಿಕೆಯಾಗಿ, ವಾಣಿಜ್ಯ ಚಟುವಟಿಕೆಗೆ ಉತ್ತೇಜನ ಸಿಗಲಿದೆ.

ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಸುವಂತಾಗಲಿದೆ. ರೈಲುಗಳ ಸಂಖ್ಯೆಯೂ ಹೆಚ್ಚಲಿದೆ. ಇದರಿಂದ ಬೆಂಗಳೂರಿನ ಮೇಲೆ ಒತ್ತಡವೂ ಕ್ರಮೇಣ ಕಡಿಮೆಯಾಗಲಿದೆ. ಡೆಮು ರೈಲುಗಳ ಸಂಚಾರದಿಂದ ಎರಡೂ ನಗರಗಳ ವೇಗವಾಗಿ ಬೆಳೆಯಲಿವೆ ಎಂದು ತುಮಕೂರು-ಬೆಂಗಳೂರು ರೈಲು ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರ್ಣಂ ರಮೇಶ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ತುಮಕೂರು ಹಾಗೂ ಬೆಂಗಳೂರು ನಡುವೆ ಡೆಮು ರೈಲುಗಳ ತ್ವರಿತ ಸಂಚಾರದಿಂದ ರಸ್ತೆ ಮೇಲಿನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ದಾಬಸ್‌ಪೇಟೆ, ನಿಡವಂದ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿಯಾಗಲಿವೆ. ತುಮಕೂರು ಸಮೀಪದ ವಸಂತನರಸಾಪುರ, ಅಂತರಸನಹಳ್ಳಿ ಕೈಗಾರಿಕಾ ಪ್ರದೇಶಗಳಿಗೂ ಸುಲಭವಾದ ಸಂಪರ್ಕ ವ್ಯವಸ್ಥೆ ಆಗಲಿದೆ ಎಂದು ಹೇಳಿದರು.

ಕ್ವಿನ್ ಸಿಟಿ, ಕ್ವಾಂಟಮ್‌ ಸಿಟಿ, ಎಐ ಸಿಟಿಗೂ ಅನುಕೂಲ

ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ನಡುವೆ ಚತುಷ್ಪಥ ರೈಲು ಮಾರ್ಗದಿಂದ ಹಲವು ಹೊಸ ಕೈಗಾರಿಕಾ ಪ್ರದೇಶಗಳಿಗೆ ಅನುಕೂಲವಾಗಲಿದೆ. ದಾಬಸ್‌ಪೇಟೆ ಸಮೀಪದ ಕ್ವಿನ್‌ ಸಿಟಿ, ಹೆಸರಘಟ್ಟ ಸಮೀಪದ ಕ್ವಾಂಟಮ್ ಸಿಟಿ ಹಾಗೂ ಬಿಡದಿ ಸಮೀಪದ ಎಐ ಸಿಟಿಗೆ ಸಂಪರ್ಕ ವ್ಯವಸ್ಥೆ ಇರಲಿದೆ. ಉದ್ದೇಶಿತ ಮೂರು ಯೋಜನೆಗಳಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಹೆಚ್ಚು ಮಹತ್ವ ನೀಡಲಾಗಿದ್ದು, ಪ್ರತಿಭಾನ್ವಿತ ಮಾನವ ಸಂಪನ್ಮೂಲಕ್ಕೂ ಬೇಡಿಕೆ ಹೆಚ್ಚಲಿದೆ.

ಬೆಂಗಳೂರಿನ ಹೊರಗೂ ಪ್ರತಿಭಾವಂತ ಮಾನವ ಸಂಪನ್ಮೂಲ ಲಭ್ಯವಿದೆ. ಸಿಗ್ನಲ್‌ ಮುಕ್ತವಾಗಿ ರೈಲುಗಳು ಸಂಚರಿಸುವುದರಿಂದ ಕೆಲಸ ಕಾರ್ಯಗಳಿಗೆ ನಿಗದಿತ ಅವಧಿಯಲ್ಲಿ ತೆರಳಬಹುದಾಗಿದೆ.

ರೈಲುಗಳ ಸಂಚಾರ ಹೆಚ್ಚಿದಂತೆ ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆ ಕಡಿಮೆಯಾಗಲಿದೆ. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ. ತುಮಕೂರಿನಿಂದ ಯಶವಂತಪುರಕ್ಕೆ ಒಂದು ತಾಸಿನಲ್ಲಿ ಬರುವಂತಾದರೆ ಪ್ರಯಾಣಿಕರು ವಾಹನಗಳನ್ನು ರಸ್ತೆಗೆ ಇಳಿಸುವುದಿಲ್ಲ. ರಾಜಧಾನಿಯಿಂದ ತುಮಕೂರು ಹಾಗೂ ಮೈಸೂರಿಗೆ ಸಂಪರ್ಕ ಸುಲಭವಾಗಲಿದೆ ಎಂದು ಕರ್ಣಂ ರಮೇಶ್ ಹೇಳಿದರು.

ಮೈಸೂರಿಗೂ ಚತುಷ್ಪಥ ಮಾರ್ಗ

ಬೆಂಗಳೂರಿನ ಸುತ್ತಲಿನ ನಗರಗಳಿಗೆ ಸಂಪರ್ಕ ವ್ಯವಸ್ಥೆ ಸುಧಾರಿಸುವ ಸಲುವಾಗಿ ಚತುಷ್ಪಥ ರೈಲು ಮಾರ್ಗ ನಿರ್ಮಿಸಲಾಗುತ್ತಿದೆ. 6,850 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಹಾಗೂ ಬೆಂಗಳೂರು ಮಧ್ಯೆ ಚತುಷ್ಪಥ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ.

ಅದೇ ರೀತಿ ವೈಟ್‌ಫೀಲ್ಡ್ ಹಾಗೂ ಬಂಗಾರಪೇಟೆ, ಬೈಯಪ್ಪನಹಳ್ಳಿ ಹಾಗೂ ಹೊಸೂರು ಸೇರಿದಂತೆ ಹಲವು ಮಾರ್ಗಗಳನ್ನು ಚತುಷ್ಪಥ ಮಾರ್ಗಗಳನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಸಲಾಗಿದೆ. ವೈಟ್‌ಫೀಲ್ಡ್‌- ಜೋಲಾರ್‌ಪೇಟ್‌(ಬಂಗಾರಪೇಟೆ) ಯೋಜನೆಗೆ 3,600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಯೋಜನೆಗಳಿಗೆ ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ.

ಆರ್ಥಿಕ ಚಟುವಟಿಕೆಗೆ ಉತ್ತೇಜನ

ಚತುಷ್ಪಥ ರೈಲು ಮಾರ್ಗಗಳು ಉಪನಗರಗಳ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿವೆ. ಕಾರ್ಖಾನೆಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಸರಕು ಸಾಗಣೆಗೆ ಅನುಕೂಲವಾಗಲಿದೆ. ಚತುಷ್ಪಥ ಮಾರ್ಗದಲ್ಲಿ ಸರಕು ಸಾಗಣೆ ರೈಲುಗಳಿಗಾಗಿ ಪ್ರತ್ಯೇಕ ಮಾರ್ಗ ಸಿಗಲಿದೆ. ಇದರಿಂದ ಸರಕು ಸಾಗಣೆ ವಿಳಂಬ ಕಡಿಮೆಯಾಗಿ, ವೇಗ ಹೆಚ್ಚಲಿದೆ. ಸಾಗಣೆ ವೆಚ್ಚಗಳೂ ಕೂಡ ತಗ್ಗಲಿವೆ.

ಸುಧಾರಿತ ಸಂಪರ್ಕ ಮತ್ತು ದಕ್ಷ ಸಾರಿಗೆ ವ್ಯವಸ್ಥೆ ಲಭ್ಯವಾಗುವುದರಿಂದ ದೊಡ್ಡ ಕಂಪನಿಗಳು ತಮ್ಮ ಘಟಕಗಳನ್ನು ಸ್ಥಾಪಿಸಲು ಮುಂದೆ ಬರಲಿವೆ. ಇದರಿಂದ ಉದ್ಯೋಗ ಸೃಷ್ಟಿಯಾಗಿ ಮತ್ತು ಬಂಡವಾಳ ಹೂಡಿಕೆ ಸಹಾಯಕವಾಗಲಿದೆ.

ಬೆಂಗಳೂರು ನಗರದ ಒತ್ತಡ ಕಡಿಮೆಯಾದಂತೆ ಪ್ರಧಾನವಾಗಿ ತುಮಕೂರು, ಮೈಸೂರು ಹಾಗೂ ಬೆಂಗಳೂರಿಗೆ ಸಮೀಪದಲ್ಲಿರುವ ನಗರಗಳು ವಾಣಿಜ್ಯ ಕೇಂದ್ರಗಳಾಗಿ ಬೆಳೆಯಲಿವೆ. ವಸತಿ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಭೂಮಿಗೆ ಬೇಡಿಕೆ ಹೆಚ್ಚಲಿದ್ದು, ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಉತ್ತೇಜನ ಸಿಗಲಿದೆ.  

ಪ್ರಯಾಣದ ಅವಧಿ ಕಡಿಮೆಯಾದರೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಜನರು ವಾಸಕ್ಕಾಗಿ ತುಮಕೂರನ್ನೇ ಅವಲಂಬಿಸಲಿದ್ದಾರೆ. ಇದರಿಂದ ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲಿದೆ. ಚತುಷ್ಪಥ ಮಾರ್ಗದಲ್ಲಿ ರೈಲುಗಳ ಸಂಚಾರ ಹೆಚ್ಚುವುದರಿಂದ ಪ್ರಯಾಣದ ಸಮಯ ಉಳಿತಾಯವಾಗಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಬ್ಬಾಗಿಲಾಗಿರುವುದರಿಂದ ಚತುಷ್ಪಥ ಮಾರ್ಗ ಹೆಚ್ಚು ಅನುಕೂಲವಾಗಲಿದೆ.

ಎಲ್ಲೆಲ್ಲಿದೆ ಚತುಷ್ಪಥ ಮಾರ್ಗ?

ಪಶ್ಚಿಮ ರೈಲ್ವೆಯಡಿ ಬರುವ ಮುಂಬೈನ ಚರ್ಚ್‌ಗೇಟ್ ಮತ್ತು ಮಾಹಿಮ್ ಮಧ್ಯೆ ಚತುಷ್ಪಥ ಮಾರ್ಗ ನಿರ್ಮಾಣವಾಗಿದೆ. ಮಾಹಿಮ್ ಮತ್ತು ಬೋರಿವಲಿ ನಡುವೆ ಆರು ಹಳಿಗಳ ಮಾರ್ಗವಿದೆ.

ತಮಿಳುನಾಡಿನಲ್ಲಿ ಚೆನ್ನೈ ಬೀಚ್ ಮತ್ತು ತಾಂಬರಂ ನಡುವಿನ ದಕ್ಷಿಣ ಮಾರ್ಗವು ನಾಲ್ಕು ಹಳಿಗಳನ್ನು ಹೊಂದಿದೆ. ಇದು ತಾಂಬರಂ ಮತ್ತು ಚೆಂಗಲ್ಪಟ್ಟು ನಡುವೆ ಸಂಪರ್ಕವನ್ನು ಸುಲಭಗೊಳಿಸಿದೆ.

ಪಶ್ಚಿಮ ಬಂಗಾಳದ ಹೌರಾ ಜಂಕ್ಷನ್‌ನಿಂದ ಸಂತ್ರಗಚ್ಚಿ ಜಂಕ್ಷನ್ ಮತ್ತು ಸೀಲ್ಡಾದಿಂದ ನೈಹಟಿ ಜಂಕ್ಷನ್ ವಿಭಾಗಗಳು ನಾಲ್ಕು ಹಳಿಯ ಮಾರ್ಗಗಳನ್ನು ಒಳಗೊಂಡಿವೆ. ಅದೇ ರೀತಿ ಇಟಾರ್ಸಿ–ಭೋಪಾಲ್–ಬಿನಾ ಮತ್ತು ಗೊಂಡಿಯಾ–ಡೊಂಗರ್ಗಢ ಮಾರ್ಗಗಳಲ್ಲಿ ಚತುಷ್ಪಥ ರೈಲು ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

ಒಟ್ಟಾರೆ ಚತುಷ್ಪಥ ರೈಲ್ವೆ ಮಾರ್ಗದ ಅಭಿವೃದ್ಧಿಯಿಂದ ಸುಧಾರಿತ ಸಂಪರ್ಕ, ಕೈಗಾರಿಕಾ ಬೆಳವಣಿಗೆ ಮತ್ತು ಗುಣಮಟ್ಟದ ಜೀವನಕ್ಕೆ ಉತ್ತೇಜನ ನೀಡುವ ಜತೆಗೆ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.

Tags:    

Similar News