ಮತದಾನದ ಹಕ್ಕು ರಕ್ಷಣೆಗೆ ರಾಹುಲ್ ಗಾಂಧಿ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಡಿ.ಕೆ. ಶಿವಕುಮಾರ್

ಸಂವಿಧಾನವನ್ನು ಉಳಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಲು, ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ಇರುವಂತೆ ಪ್ರತಿ ಕ್ಷೇತ್ರದಲ್ಲಿ 'ಲೀಗಲ್ ಬ್ಯಾಂಕ್' ಸ್ಥಾಪಿಸಬೇಕು ಎಂದು ಶಿವಕುಮಾರ್ ಹೇಳಿದರು.;

Update: 2025-08-08 08:37 GMT

ಡಿ.ಕೆ ಶಿವಕುಮಾರ್

ದೇಶದ ಸಂವಿಧಾನ ಮತ್ತು ಪ್ರತಿಯೊಬ್ಬರ ಮತದಾನದ ಹಕ್ಕನ್ನು ರಕ್ಷಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಿಟ್ಟ ಹೋರಾಟವನ್ನು ಆರಂಭಿಸಿದ್ದಾರೆ. ಕರ್ನಾಟಕದ ನೆಲದಿಂದ ಆರಂಭವಾಗಿರುವ ಈ ಐತಿಹಾಸಿಕ ಹೋರಾಟಕ್ಕೆ ನಮ್ಮೆಲ್ಲರ ಒಕ್ಕೊರಲ ಬೆಂಬಲವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ಪ್ರಾಯೋಜಿತ ಮತ ಅಕ್ರಮಗಳನ್ನು ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 'ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ' ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ರಾಹುಲ್ ಗಾಂಧಿ ಅವರು ದೇಶದಾದ್ಯಂತ ಇರುವ ಮತದಾನದ ಅಕ್ರಮಗಳನ್ನು ಬಯಲಿಗೆಳೆಯಲು ಕರ್ನಾಟಕದಲ್ಲಿ ಮುನ್ನುಡಿ ಬರೆದಿದ್ದಾರೆ. ದೇಶದ ಪರವಾಗಿ ಅವರು ಆರಂಭಿಸಿರುವ ಈ ದಿಟ್ಟ ಹೋರಾಟಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ," ಎಂದು ಶಿವಕುಮಾರ್ ಹೇಳಿದರು.

ಪ್ರತಿ ಕ್ಷೇತ್ರದಲ್ಲಿ ಲೀಗಲ್ ಬ್ಯಾಂಕ್ ಸ್ಥಾಪನೆ

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಎಐಸಿಸಿ ಮಾನವ ಹಕ್ಕುಗಳ ವಿಭಾಗದ ಸಭೆಯಲ್ಲಿ ರಾಹುಲ್ ಗಾಂಧಿ ನೀಡಿದ ಸೂಚನೆಯನ್ನು ಉಲ್ಲೇಖಿಸಿದ ಡಿಸಿಎಂ, "ಸಂವಿಧಾನವನ್ನು ಉಳಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಲು, ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ಇರುವಂತೆ ಪ್ರತಿ ಕ್ಷೇತ್ರದಲ್ಲಿ 'ಲೀಗಲ್ ಬ್ಯಾಂಕ್' ಸ್ಥಾಪಿಸಬೇಕು ಎಂದು ರಾಹುಲ್ ಗಾಂಧಿ ಅವರು ಸೂಚಿಸಿದ್ದಾರೆ. ಅವರ ಈ ಕಲ್ಪನೆಗೆ ನಾವೆಲ್ಲರೂ ಬದ್ಧರಾಗಿದ್ದೇವೆ," ಎಂದು ತಿಳಿಸಿದರು.

"ಚಿಲುಮೆ ಮೂಲಕ ಬಿಜೆಪಿ ಅಕ್ರಮ"

ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್ "ಹಿಂದೆ, ಬಿಜೆಪಿಯವರು 'ಚಿಲುಮೆ' ಸಂಸ್ಥೆಯ ಮೂಲಕ ತಮ್ಮ 8,000ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ (BLO) ನೇಮಿಸಿದ್ದರು. ನಾವು ಹೋರಾಟ ಮಾಡಿ ಅದನ್ನು ನಿಯಂತ್ರಿಸಿದೆವು. ಚುನಾವಣಾ ಫಲಿತಾಂಶದ ಸಂದರ್ಭದಲ್ಲೇ ದೂರು ನೀಡಬಹುದಿತ್ತು, ಆದರೆ ದೇಶದಲ್ಲಿ ಇದುವರೆಗೂ ಚುನಾವಣಾ ದೂರುಗಳು ಸರಿಯಾಗಿ ಇತ್ಯರ್ಥವಾಗದ ಕಾರಣ ನಾವು ಸುಮ್ಮನಿದ್ದೆವು. ಈಗ ಜನರ ಮುಂದೆಯೇ ಈ ಅಕ್ರಮಗಳನ್ನು ಬಹಿರಂಗಪಡಿಸಲು ತೀರ್ಮಾನಿಸಿದ್ದೇವೆ. ಜವಾಬ್ದಾರಿಯುತ ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಅವರು ಈ ಅಕ್ರಮಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ. ನಮ್ಮ ಹಕ್ಕನ್ನು, ನಮ್ಮ ಪ್ರಜಾಪ್ರಭುತ್ವವನ್ನು ನಾವೇ ಕಾಪಾಡಿಕೊಳ್ಳಬೇಕು," ಎಂದು ಅವರು ಕರೆ ನೀಡಿದರು.

Tags:    

Similar News