ಇಂಧನ ಸಂರಕ್ಷಣೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ರಾಷ್ಟ್ರಪತಿಗಳಿಂದ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ 'ಕ್ರೆಡಲ್'
ಕೇಂದ್ರದ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ, 'ಇಂಧನ ದಕ್ಷತೆ ಕಾರ್ಯಕ್ಷಮತೆ ಪ್ರಶಸ್ತಿಯ ಎಸ್‌ಡಿಎ ವಿಭಾಗ-1'ರ ಅಡಿಯಲ್ಲಿ ಕರ್ನಾಟಕ ಪ್ರಥಮ ಸ್ಥಾನ ಗಳಿಸಿದೆ.
ಇಂಧನ ದಕ್ಷತೆ ಮತ್ತು ಸಂರಕ್ಷಣಾ ಕ್ರಮಗಳಲ್ಲಿ ಕರ್ನಾಟಕ ರಾಜ್ಯವು ರಾಷ್ಟ್ರಮಟ್ಟದಲ್ಲಿ ಮೈಲಿಗಲ್ಲು ಸ್ಥಾಪಿಸಿದ್ದು, 2025ನೇ ಸಾಲಿನ ಪ್ರತಿಷ್ಠಿತ 'ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ'ಗೆ ಭಾಜನವಾಗಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 14ರಂದು (ಶನಿವಾರ) ನಡೆದ 'ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ'ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ (KREDL) ಅಧ್ಯಕ್ಷರಾದ ಟಿ.ಡಿ. ರಾಜೇಗೌಡ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರು ರಾಜ್ಯದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮಹಾರಾಷ್ಟ್ರವನ್ನು ಹಿಂದಿಕ್ಕಿದ ಕರ್ನಾಟಕ
ಕೇಂದ್ರದ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (BEE) ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ, 'ಇಂಧನ ದಕ್ಷತೆ ಕಾರ್ಯಕ್ಷಮತೆ ಪ್ರಶಸ್ತಿಯ ಎಸ್‌ಡಿಎ (State Designated Agency) ವಿಭಾಗ-1'ರ ಅಡಿಯಲ್ಲಿ ಕರ್ನಾಟಕ ಪ್ರಥಮ ಸ್ಥಾನ ಗಳಿಸಿದೆ. ನೆರೆಯ ಮಹಾರಾಷ್ಟ್ರ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ರಾಜ್ಯದ ವಿವಿಧ ಇಲಾಖೆಗಳು ಇಂಧನ ಉಳಿತಾಯ ಮತ್ತು ದಕ್ಷತೆಗಾಗಿ ಕೈಗೊಂಡಿರುವ ಪರಿಣಾಮಕಾರಿ ಯೋಜನೆಗಳು ಮತ್ತು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಸಚಿವ ಕೆ.ಜೆ. ಜಾರ್ಜ್ ಹರ್ಷ
ರಾಜ್ಯದ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್, "ಈ ಪ್ರಶಸ್ತಿಯ ಶ್ರೇಯಸ್ಸು ಕ್ರೆಡಲ್ ಅಧಿಕಾರಿಗಳ ಪರಿಶ್ರಮಕ್ಕೆ ಸಲ್ಲಬೇಕು. ರಾಜ್ಯ ಇಂಧನ ದಕ್ಷತೆ ಸೂಚ್ಯಂಕದಲ್ಲಿ (SEEI) 2020 ರಿಂದ 2023 ರವರೆಗೆ ಸತತ ಮೂರು ವರ್ಷ 'ಫ್ರಂಟ್ ರನ್ನರ್' ಆಗಿದ್ದ ಕರ್ನಾಟಕ, 2024ರಲ್ಲಿ ದ್ವಿತೀಯ ಸ್ಥಾನ ಪಡೆದಿತ್ತು. ಆದರೆ, ನಮ್ಮ ಬದ್ಧತೆಯ ಫಲವಾಗಿ ಈ ಬಾರಿ ಮತ್ತೆ ಪ್ರಥಮ ಸ್ಥಾನಕ್ಕೇರಿರುವುದು ಹೆಮ್ಮೆಯ ಸಂಗತಿ," ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಸುಸ್ಥಿರ ಅಭಿವೃದ್ಧಿಗೆ ಮನ್ನಣೆ
ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಪ್ರತಿಕ್ರಿಯಿಸಿ, "ನವೀನ ಮತ್ತು ಪರಿಣಾಮಕಾರಿ ಇಂಧನ-ಸಮರ್ಥ ಅಭ್ಯಾಸಗಳ ಮೂಲಕ ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ರಾಜ್ಯವು ಹಲವು ಮಾನದಂಡಗಳನ್ನು ಅಳವಡಿಸಿಕೊಂಡಿದೆ. ನಮ್ಮ ಈ ಉಪಕ್ರಮಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿರುವುದು ಇಲಾಖೆಯ ಉತ್ಸಾಹವನ್ನು ಹೆಚ್ಚಿಸಿದೆ," ಎಂದು ತಿಳಿಸಿದ್ದಾರೆ.