ನರೇಗಾ ಬದಲು 'ವಿ.ಬಿ-ಜಿ ರಾಮ್ ಜಿ' : 5 ಪ್ರಮುಖ ಬದಲಾವಣೆಗಳಿವು; ರಾಜ್ಯಗಳ ಬೊಕ್ಕಸಕ್ಕೆ ಹೊರೆ
ಈ ಹೊಸ ಮಸೂದೆಯು ಗ್ರಾಮೀಣ ಭಾಗದ ಉದ್ಯೋಗದ ಚಿತ್ರಣವನ್ನೇ ಬದಲಿಸಲಿದ್ದು, ಪ್ರಮುಖವಾಗಿ 5 ಬದಲಾವಣೆಗಳನ್ನು ಪಟ್ಟಿ ಮಾಡಲಾಗಿದೆ. ಅದರ ವಿವರ ಇಲ್ಲಿದೆ.
ಗ್ರಾಮೀಣ ಭಾರತದ ಜೀವನಾಡಿಯಂತಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಕಾಯ್ದೆಗೆ ಎನ್‌ಡಿಎ ಸರ್ಕಾರ ಮಹತ್ವದ ಬದಲಾವಣೆ ತರಲು ಮುಂದಾಗಿದೆ. 2005ರ ಹಳೆಯ ಕಾಯ್ದೆಯ ಬದಲಿಗೆ, 'ವಿಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಆಜೀವಿಕಾ ಮಿಷನ್ (ಗ್ರಾಮೀಣ)' ಅಥವಾ ಸರಳವಾಗಿ 'ವಿ.ಬಿ-ಜಿ ರಾಮ್ ಜಿ' (VB-G Ram G) ಮಸೂದೆ- 2025 ಅನ್ನು ಜಾರಿಗೆ ತರಲಾಗುತ್ತಿದೆ.
ಈ ಹೊಸ ಮಸೂದೆಯು ಗ್ರಾಮೀಣ ಭಾಗದ ಉದ್ಯೋಗದ ಚಿತ್ರಣವನ್ನೇ ಬದಲಿಸಲಿದ್ದು, ಪ್ರಮುಖವಾಗಿ 5 ಬದಲಾವಣೆಗಳನ್ನು ಪಟ್ಟಿ ಮಾಡಲಾಗಿದೆ. ಅದರ ವಿವರ ಇಲ್ಲಿದೆ:
1. ವರ್ಷಕ್ಕೆ 125 ದಿನಗಳ ಕೆಲಸ ಗ್ಯಾರಂಟಿ
ಪ್ರಸ್ತುತ ಇರುವ ನರೇಗಾ ಯೋಜನೆಯಡಿ ಒಂದು ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗ ಖಾತ್ರಿ ನೀಡಲಾಗುತ್ತಿದೆ. ಆದರೆ, ಹೊಸ 'ವಿ.ಬಿ-ಜಿ ರಾಮ್ ಜಿ' ಮಸೂದೆಯ ಅಡಿಯಲ್ಲಿ ಇದನ್ನು 125 ದಿನಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಅಂದರೆ, ದೈಹಿಕ ಶ್ರಮದ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಕುಟುಂಬಗಳಿಗೆ ವರ್ಷದಲ್ಲಿ ಹೆಚ್ಚುವರಿಯಾಗಿ 25 ದಿನಗಳ ಕೆಲಸ ಸಿಗಲಿದೆ.
2. ರಾಜ್ಯಗಳ ಬೊಕ್ಕಸಕ್ಕೆ ಬೀಳಲಿದೆ ಹೊರೆ (ಅನುದಾನ ಹಂಚಿಕೆ)
ಇದು ರಾಜ್ಯ ಸರ್ಕಾರಗಳಿಗೆ ಆತಂಕ ತರಬಲ್ಲ ಬದಲಾವಣೆ. ನರೇಗಾ ಯೋಜನೆಯಲ್ಲಿ ಕೌಶಲ್ಯರಹಿತ ಕಾರ್ಮಿಕರ ಸಂಪೂರ್ಣ ವೇತನವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ ಹೊಸ ಮಸೂದೆಯ ಪ್ರಕಾರ, ರಾಜ್ಯಗಳು ಕೂಡ ವೇತನ ಪಾವತಿಯಲ್ಲಿ ಪಾಲು ಹಂಚಿಕೊಳ್ಳಬೇಕಾಗುತ್ತದೆ.
ಹೊಸ ಲೆಕ್ಕಾಚಾರ: ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳಿಗೆ 90:10 (ಕೇಂದ್ರ:ರಾಜ್ಯ) ಅನುಪಾತವಿದ್ದರೆ, ಶಾಸಕಾಂಗ ಹೊಂದಿರುವ ಇತರ ಎಲ್ಲ ರಾಜ್ಯಗಳಿಗೆ (ಕರ್ನಾಟಕ ಸೇರಿದಂತೆ) 60:40 ಅನುಪಾತದಲ್ಲಿ ಅನುದಾನ ಹಂಚಿಕೆಯಾಗಲಿದೆ. ಅಂದರೆ 40% ರಷ್ಟು ವೇತನದ ಹೊರೆಯನ್ನು ರಾಜ್ಯಗಳೇ ಹೊರಬೇಕಾಗುತ್ತದೆ.
3. ಮುಕ್ತ ಅನುದಾನಕ್ಕೆ ಬ್ರೇಕ್ ('ಲೇಬರ್ ಬಜೆಟ್' ರದ್ದು)
ಇಲ್ಲಿಯವರೆಗೆ ರಾಜ್ಯಗಳು ಕಾರ್ಮಿಕರ ಬೇಡಿಕೆಗೆ ತಕ್ಕಂತೆ ವಾರ್ಷಿಕ ಕ್ರಿಯಾಯೋಜನೆ ಅಥವಾ 'ಲೇಬರ್ ಬಜೆಟ್' ರೂಪಿಸಿ ಕೇಂದ್ರಕ್ಕೆ ಕಳುಹಿಸುತ್ತಿದ್ದವು. ಆದರೆ ಹೊಸ ಮಸೂದೆಯಲ್ಲಿ 'ನಾರ್ಮೇಟಿವ್ ಅಲೋಕೇಶನ್' (ನಿಯಮಿತ ಹಂಚಿಕೆ) ಪದ್ಧತಿ ಬರಲಿದೆ. ಕೇಂದ್ರ ಸರ್ಕಾರವು ಕೆಲವೊಂದು ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳಿಗೆ ಇಷ್ಟೇ ಅನುದಾನ ಎಂದು ಮೊದಲೇ ನಿಗದಿಪಡಿಸುತ್ತದೆ. ಒಂದು ವೇಳೆ ರಾಜ್ಯಗಳು ಈ ಮಿತಿಗಿಂತ ಹೆಚ್ಚು ಖರ್ಚು ಮಾಡಿದರೆ, ಆ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ.
4. ಕೃಷಿ ಹಂಗಾಮಿನಲ್ಲಿ 60 ದಿನಗಳ 'ಪಾಸ್' (ಕೆಲಸ ಸ್ಥಗಿತ)
ರೈತರಿಗೆ ಕೃಷಿ ಚಟುವಟಿಕೆಗಳ ಸಮಯದಲ್ಲಿ ಕೂಲಿ ಕಾರ್ಮಿಕರ ಕೊರತೆ ಎದುರಾಗುವುದನ್ನು ತಪ್ಪಿಸಲು ಈ ನಿಯಮ ತರಲಾಗಿದೆ. ಬಿತ್ತನೆ ಮತ್ತು ಕಟಾವು ಮುಂತಾದ ಕೃಷಿ ಚಟುವಟಿಕೆಗಳು ಉತ್ತುಂಗದಲ್ಲಿರುವ ಸಮಯದಲ್ಲಿ, ವರ್ಷದಲ್ಲಿ ಒಟ್ಟು 60 ದಿನಗಳ ಕಾಲ ಈ ಯೋಜನೆಯಡಿ ಯಾವುದೇ ಕಾಮಗಾರಿ ನಡೆಸುವಂತಿಲ್ಲ. ರಾಜ್ಯ ಸರ್ಕಾರಗಳು ಈ ಅವಧಿಯನ್ನು ಮೊದಲೇ ನಿರ್ಧರಿಸಿ ಅಧಿಸೂಚನೆ ಹೊರಡಿಸಬೇಕು. ಇದರಿಂದ ರೈತರಿಗೆ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುವಂತಾಗುತ್ತದೆ ಎಂಬುದು ಸರ್ಕಾರದ ವಾದ.
5. ವಾರಕ್ಕೊಮ್ಮೆ ವೇತನ ಪಾವತಿ
ಹಳೆಯ ಕಾಯ್ದೆಯಲ್ಲಿ ವೇತನ ಪಾವತಿಗೆ 15 ದಿನಗಳ ಕಾಲಾವಕಾಶವಿತ್ತು. ಹೊಸ ಮಸೂದೆಯು ಕಾರ್ಮಿಕರಿಗೆ ಪ್ರತಿ ವಾರ ವೇತನ ಪಾವತಿಸುವ ಗುರಿ ಹೊಂದಿದೆ. ಕೆಲಸ ಮಾಡಿದ ದಿನಾಂಕದಿಂದ ಗರಿಷ್ಠ ಹದಿನೈದು ದಿನಗಳ ಒಳಗೆ ಹಣ ಪಾವತಿಯಾಗಬೇಕು. ಒಂದು ವೇಳೆ ವಿಳಂಬವಾದರೆ, ವಿಳಂಬ ಪರಿಹಾರ ನೀಡುವ ಹಳೆಯ ನಿಯಮವನ್ನೇ ಇಲ್ಲೂ ಮುಂದುವರಿಸಲಾಗಿದೆ.
ಕೆಲಸದ ದಿನಗಳು ಹೆಚ್ಚಾಗಿದ್ದರೂ, ಕೃಷಿ ಸೀಸನ್‌ನಲ್ಲಿ 60 ದಿನಗಳ ಕೆಲಸ ಕಡಿತ ಮತ್ತು ರಾಜ್ಯಗಳ ಮೇಲೆ ಬೀಳುವ ಆರ್ಥಿಕ ಹೊರೆ ಈ ಮಸೂದೆಯ ಪ್ರಮುಖ ಚರ್ಚಾ ವಿಷಯಗಳಾಗಿವೆ.