ರಾಷ್ಟ್ರಪತಿಗೆ ಫಿಜಿಯ ಅತ್ಯುನ್ನತ ನಾಗರಿಕ ಗೌರವ
x

ರಾಷ್ಟ್ರಪತಿಗೆ ಫಿಜಿಯ ಅತ್ಯುನ್ನತ ನಾಗರಿಕ ಗೌರವ


ಸುವಾ (ಫಿಜಿ): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʻಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿʼಯನ್ನು ಮಂಗಳವಾರ ಪ್ರದಾನ ಮಾಡಲಾಯಿತು.

ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಶ್ಲಾಘಿಸಿದ ರಾಷ್ಟ್ರಪತಿ, ಭಾರತವು ದೃಢ, ಚೇತರಿಸಿಕೊಳ್ಳುವ ಮತ್ತು ಹೆಚ್ಚು ಸಮೃದ್ಧ ಫಿಜಿಯನ್ನು ನಿರ್ಮಿಸಲು ಪಾಲುದಾರಿಕೆಗೆ ಸಿದ್ಧವಾಗಿದೆ ಎಂದು ಹೇಳಿದರು.

ʻಫಿಜಿಯ ಅಧ್ಯಕ್ಷ ರತು ವಿಲಿಯಂ ಮೈವಲಿಲಿ ಕಟೋನಿವೆರೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಫಿಜಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿದರು,ʼ ಎಂದು ಅಧ್ಯಕ್ಷರ ಕಚೇರಿ ಎಕ್ಸ್‌ನ ಪೋಸ್ಟ್‌ನಲ್ಲಿ ತಿಳಿಸಿದೆ.

ಮುರ್ಮು ಅವರು ಫಿಜಿಗೆ ಎರಡು ದಿನಗಳ ಭೇಟಿ ನೀಡಿದ್ದು ಇದು ಭಾರತದ ಮುಖ್ಯಸ್ಥರೊಬ್ಬರು ದ್ವೀಪಸಮೂಹ ರಾಷ್ಟ್ರಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.

ಅಧ್ಯಕ್ಷ ಮುರ್ಮು ಅವರು ಫಿಜಿಯನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು. ʻಗಾತ್ರದಲ್ಲಿ ಅಗಾಧ ವ್ಯತ್ಯಾಸವಿದ್ದರೂ, ಭಾರತ ಮತ್ತು ಫಿಜಿ ದೇಶಗಳು ಪ್ರಜಾಪ್ರಭುತ್ವ ಸೇರಿದಂತೆ ಬಹಳಷ್ಟು ಸಾಮ್ಯತೆಗಳನ್ನು ಹೊಂದಿವೆ. 10 ವರ್ಷಗಳ ಹಿಂದೆ ಇದೇ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಫಿಜಿಯನ್ನು ಒಂದುಗೂಡಿಸುವ ಕೆಲವು ಮೂಲಭೂತ ಮೌಲ್ಯಗಳ ಕುರಿತು ಹೇಳಿದ್ದರು,ʼ ಎಂದು ಅವರು ಸ್ಮರಿಸಿಕೊಂಡರು.

ʻಪ್ರಜಾಪ್ರಭುತ್ವ, ಸಾಮಾಜಿಕ ವೈವಿಧ್ಯತೆ, ಎಲ್ಲಾ ಮಾನವರು ಸಮಾನರು ಎಂಬ ನಮ್ಮ ಧರ್ಮ, ಮತ್ತು ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯ, ಘನತೆ ಮತ್ತು ಹಕ್ಕುಗಳಿಗೆ ನಮ್ಮ ಬದ್ಧತೆ ಈ ಅಂಶಗಳಾಗಿವೆ. ಈ ಶಾಶ್ವತ ಮೌಲ್ಯಗಳು ನಮಗೆ ಸದಾ ಮಾರ್ಗದರ್ಶನ ನೀಡುತ್ತವೆ,ʼ ಎಂದು ಹೇಳಿದರು.

ಇದಕ್ಕೂ ಮೊದಲು, ರಾಷ್ಟ್ರಪತಿ ಮುರ್ಮು ಅವರನ್ನು ಅಧ್ಯಕ್ಷ ಕಟೋನಿವೆರೆ ಅವರು ರಾಜಭವನದಲ್ಲಿ ಬರಮಾಡಿಕೊಂಡರು. ʻರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023ರ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡ ಪ್ರಮುಖರ ನಿವಾಸಗಳಲ್ಲಿ ಸೌರ ವ್ಯವಸ್ಥೆ ಅಳವಡಿಕೆ ಯೋಜನೆಯ ಪ್ರಗತಿಯನ್ನು ವೀಕ್ಷಿಸಿದರು,ʼ ಎಂದು ಅಧ್ಯಕ್ಷರ ಕಚೇರಿ ಎಕ್ಸ್‌ನಲ್ಲಿ ತಿಳಿಸಿದೆ.

ರಾಷ್ಟ್ರಪತಿ ಅವರು ಫಿಜಿಯಿಂದ ನ್ಯೂಜಿಲೆಂಡ್ ಮತ್ತು ಟೈಮೋರ್-ಲೆಸ್ಟೆಗೆ ಪ್ರಯಾಣಿಸಲಿದ್ದಾರೆ. ಅವರು ಆರು ದಿನ ಕಾಲ ಮೂರು ರಾಷ್ಟ್ರಗಳ ಪ್ರವಾಸ ಮಾಡಲಿದ್ದಾರೆ ಎಂದು ನವಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Read More
Next Story